Site icon Vistara News

Mohammed Shami: ರಣಜಿ ಟೂರ್ನಿಗೆ ಮೊಹಮ್ಮದ್ ಶಮಿ ಲಭ್ಯ?

Mohammed Shami

Mohammed Shami: Mohammed Shami back in action before Ranji

ಮುಂಬಯಿ: ಟೀಮ್​ ಇಂಡಿಯಾದ ವೇಗಿ ಮೊಹಮ್ಮದ್ ಶಮಿ(Mohammed Shami) ಅವರು ಮುಂಬರುವ ರಣಜಿ ಟ್ರೋಫಿ(ranji trophy) ಕ್ರಿಕೆಟ್ ಟೂರ್ನಿಯಲ್ಲಿ ಬಂಗಾಳ ತಂಡದ ಪರ ಆಡಲಿದ್ದಾರೆ ಎಂದು ವರದಿಯಾಗಿದೆ. ಕಳೆದ ವರ್ಷ ನಡೆದಿದ್ದ ಏಕದಿನ ಕ್ರಿಕೆಟ್​ ಟೂರ್ನಿ ಬಳಿಕ ಹಿಮ್ಮಡಿಯ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಶಮಿ ಯಾವುದೇ ಕ್ರಿಕೆಟ್​ ಟೂರ್ನಿ ಆಡಿಲ್ಲ.

ಸದ್ಯ ಬೆಂಗಳೂರಿನ ಎನ್​ಸಿಯಲ್ಲಿ ಪುನಶ್ಚೇತನ ಮತ್ತು ಫಿಟ್‌ನೆಸ್‌ ಆರೈಕೆಯಲ್ಲಿರುವ ಶಮಿ ಅಕ್ಟೋಬರ್‌ ತಿಂಗಳಲ್ಲಿ ಶುರುವಾಗಲಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುವ ಸಾಧ್ಯತೆ ಇದೆ. ಉತ್ತರ ಪ್ರದೇಶ (ಅ.11ರಿಂದ) ಮತ್ತು ಬಿಹಾರ (ಅ. 18ರಿಂದ)ವಿರುದ್ಧದ ಪಂದ್ಯಗಳಲ್ಲಿ ಅವರು ಆಡುಬಹುದು. ಈ ಮೂಲಕ ಭಾರತ ತಂಡಕ್ಕೆ ಕಮ್​ಬ್ಯಾಕ್​ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಶಮಿ ಕಮ್​ಬ್ಯಾಕ್​ ಬಗ್ಗೆ ಜಯ್​ ಶಾ ಹೇಳಿದ್ದೇನು?


ಈ ವರ್ಷದ ಕೊನೆಯಲ್ಲಿ ನಡೆಯುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ವೇಗಿ ಮೊಹಮ್ಮದ್ ಶಮಿ ಭಾಗವಹಿಸುವ ಕುರಿತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ವರದಿಯ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ(jay shah) ಹೇಳಿದ್ದಾರೆ.

“ಶಮಿ ಅವರು ತಮ್ಮ ಶಸ್ತ್ರಚಿಕಿತ್ಸೆಯ ನಂತರ ಮೊದಲ ಬಾರಿಗೆ ಕಳೆದ ತಿಂಗಳು ಬೌಲಿಂಗ್ ಪುನರಾರಂಭಿಸಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ ಶಮಿ ಆಡುತ್ತಾರೋ ಇಲ್ಲವೋ ಎಂಬುದು ಅವರ ಫಿಟ್‌ನೆಸ್‌ಗೆ ಸಂಬಂಧಿಸಿದ್ದು ಮತ್ತು ಎನ್‌ಸಿಎ ವರದಿಯ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಶಾ ಎಎನ್‌ಐಗೆ ತಿಳಿಸಿದ್ದಾರೆ.

ಇದನ್ನೂ ಓದಿ Mohammed Shami Comeback: ಟೀಮ್​ ಇಂಡಿಯಾಕ್ಕೆ ಮರಳುವ ಸೂಚನೆ ನೀಡಿದ ಶಮಿ; ಎನ್​ಸಿಎಯಲ್ಲಿ ಕಠಿಣ ಅಭ್ಯಾಸ

ಶಮಿ ಆಸ್ಟ್ರೇಲಿಯಾದಲ್ಲಿ ಉತ್ತಮ ಟೆಸ್ಟ್ ದಾಖಲೆಯನ್ನು ಹೊಂದಿದ್ದಾರೆ, ಎಂಟು ಪಂದ್ಯಗಳಲ್ಲಿ 32.16 ಸರಾಸರಿಯಲ್ಲಿ 6/56 ರ ಅತ್ಯುತ್ತಮ ಅಂಕಿ ಅಂಶಗಳೊಂದಿಗೆ 31 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಎರಡು ಬಾರಿ ಐದು ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ. ಮುಂದಿನ ವರ್ಷ ಚಾಂಪಿಯನ್ಸ್​ ಟ್ರೋಫಿ ಕೂಡ ನಡೆಯುವ ಕಾರಣ ಶಮಿ ಅವರ ಪಾತ್ರ ನಿರ್ಣಾಯಕ ಹೀಗಾಗಿ ಬಿಸಿಸಿಐ ಶಮಿಯನ್ನು ಆತುರದಿಂದ ಆಡಿಸಲು ಮುಂದಾಗುವುದು ಅನುಮಾನ. ಸಂಪೂರ್ಣ ಚೇತರಿಕೆಯ ಬಳಿಕವೇ ಅವರಿಗೆ ಆಡುವ ಅವಕಾಶ ಕಲ್ಪಿಸಬಹುದು.

34 ವರ್ಷದ ಶಮಿ ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.

Exit mobile version