ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ(Mohammed Shami) ಅವರು ತಮ್ಮ ಕ್ರಿಕೆಟ್ ನಿವೃತ್ತಿಯ(mohammed shami retirement) ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕ್ರಿಕೆಟ್ ಬೇಡ ಎಂದು ಬೇಸರವಾದಾಗ ತಕ್ಷಣ ನಾನು ನಿವೃತ್ತಿ ಘೋಷಿಸುತ್ತೇನೆ ಎಂದು ಹೇಳಿದ್ದಾರೆ. ಶಮಿಯ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಶಮಿ ಅವರು ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ನಿವೃತ್ತಿಯ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ವೇಳೆ ಅವರು,”ನನಗೆ ಕ್ರಿಕೆಟ್ ಬೇಸರವಾದಾಗ, ಸಾಕು ಎಂದು ಎನಿಸಿದಾಗ ಬೆಳಗ್ಗೆ ಎದ್ದು ನನ್ನ ನಿವೃತ್ತಿಯನ್ನು ಘೋಷಿಸುತ್ತೇನೆ. ಆ ದಿನ ಯಾವುದು ಎಂದು ನಾನು ಈಗಲೇ ನಿರ್ಧರಿಸಿಲ್ಲ. ನಾನು ಯಾವುದಕ್ಕೂ ಹೊರೆಯಾಗಲು ಬಯಸುವುದಿಲ್ಲ” ಎಂದು ಹೇಳಿದರು.
“ವೃತ್ತಿ ಅಥವಾ ಇತರ ಯಾವುದೇ ವಿಚಾರವನ್ನು ಚರ್ಚಿಸಲು ನನ್ನ ಜತೆ ಕುಟುಂಬದಲ್ಲಿ ಯಾರೂ ಇಲ್ಲ. ಹೀಗಾಗಿ ನಾನು ಮೈದಾನಕ್ಕೆ ಹೋಗಲು ಕಷ್ಟ ಎಂದು ನನ್ನ ಮನಸಲ್ಲಿ ಬಂದ ತಕ್ಷಣ ನಿವೃತ್ತಿಯಾಗುತ್ತಿದ್ದೇನೆ ಎಂದು ಟ್ವೀಟ್ ಮಾಡುತ್ತೇನೆ,” ಎಂದು ಶಮಿ ಹೇಳಿದ್ದಾರೆ.
ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ. ಸದ್ಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಶಮಿ ಮೂರನೇ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆ ಇದೆ. ಏಕದಿನ ವಿಶ್ವಕಪ್ ಬಳಿಕ ಶಮಿ ಭಾರತ ಪರ ಯಾವುದೇ ಸರಣಿ ಆಡಿಲ್ಲ.
ಅರ್ಜುನ ಪ್ರಶಸ್ತಿ ಪಡೆದ ಶಮಿ
ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ತೋರಿ ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್ ಉರುಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ ಎನಿಸಿಕೊಂಡಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದರು.
ಇದನ್ನೂ ಓದಿ Mohammed Shami : ಭಾರತ ತಂಡಕ್ಕೆ ಆಘಾತ, ವೇಗದ ಬೌಲರ್ ಇಂಗ್ಲೆಂಡ್ ಸರಣಿಯಿಂದ ಔಟ್
ಫಿಟ್ನೆಸ್ ರಹಸ್ಯ ತಿಳಿಸಿದ ಶಮಿ
ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರು ತಮ್ಮ ಫಿಟ್ನೆಸ್ ರಹಸ್ಯವನ್ನು ಬಹಿರಂಗಪಡಿಸಿದ್ದರು. ಜಿಮ್‌ನಲ್ಲಿ ನನಗಿಂತ ಹೆಚ್ಚಿನ ತೂಕವನ್ನು ಬೇರೆ ಯಾವ ಕ್ರಿಕೆಟಿಗನೂ ಎತ್ತುವುದಿಲ್ಲ ಎಂದು ಹೇಳಿದ್ದರು. ಆಜ್ ತಕ್ ಸಂದರ್ಶನದಲ್ಲಿ ಬೌಲಿಂಗ್ ಯಶಸ್ಸಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಶಮಿ,” ನಾನು 750 ಕೆಜಿ ಲೆಗ್ ಪ್ರೆಸ್ ಮಾಡಬಲ್ಲೆ. ಜಿಮ್‌ನಲ್ಲಿ ನನಗಿಂತ ಹೆಚ್ಚಿನ ತೂಕವನ್ನು ಬೇರೆ ಯಾವುದೇ ಕ್ರಿಕೆಟಿಗರು ಎತ್ತುದಿಲ್ಲ. ಈ ವಿಚಾರವನ್ನು ನಾನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ಇಷ್ಟಪಡುವುದಿಲ್ಲ. ಆದ್ದರಿಂದ ಜನರಿಗೆ ಇದು ತಿಳಿಯುವುದಿಲ್ಲ” ಎಂದು ಹೇಳಿದ್ದರು.