Site icon Vistara News

Mohammed Shami: ಚೇತರಿಕೆಯ ಫೋಟೊ ಹಂಚಿಕೊಂಡ ಮೊಹಮ್ಮದ್ ಶಮಿ

Mohammed Shami

ಲಕ್ನೋ: ಕಳೆದ ತಿಂಗಳು ಲಂಡನ್​ನಲ್ಲಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಟೀಮ್​ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ(Mohammed Shami) ಅವರು ಚೇತರಿಸಿಕೊಳ್ಳುತ್ತಿರುವ(Mohammed Shami injury update) ಫೋಟೊವನ್ನು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ತಿಂಗಳು ಶಮಿ ಲಂಡನ್​ನಲ್ಲಿ ಎಡಗಾಲಿನ ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಚೇತರಿಕೆಯ ಹಾದಿಯಲ್ಲಿರುವ ಅವರು ಪ್ರಸಕ್ತ ಸಾಗುತ್ತಿರುವ 17ನೇ ಆವೃತ್ತಿಯ ಐಪಿಎಲ್(IPL 2024)ನಿಂದ ಹೊರಗುಳಿದಿದ್ದಾರೆ. ಇದೀಗ ಶಮಿ ತಮ್ಮ ಮನೆಯಲ್ಲಿ ಪಾದಕ್ಕೆ ಎಲೆಕ್ಟ್ರಿಕ್​ ಮಸಾಜ್​ ಮಾಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಫೋಟೊ ಕಂಡ ಅವರ ಅಭಿಮಾನಿಗಳು ಆದಷ್ಟು ಶೀಘ್ರ ಗುಣಮುಖರಾಗಿ ಕ್ರಿಕೆಟ್​ಗೆ ಮರಳುವಂತಾಗಲಿ ಎಂದು ಹಾರೈಸಿದ್ದಾರೆ.

ಗುಜರಾತ್ ಟೈಟಾನ್ಸ್(Gujarat Titans) ತಂಡವೂ ಗಾಯಗೊಂಡು ಐಪಿಎಲ್​ ಟೂರ್ನಿಯಿಂದ ಹೊರಬಿದ್ದಿರುವ ಮೊಹಮ್ಮದ್ ಶಮಿ ಬದಲಿಗೆ ಕೇರಳ ಮೂಲಕ ವೇಗದ ಬೌಲರ್ ಸಂದೀಪ್ ವಾರಿಯರ್(Sandeep Warrier) ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ

ಶಮಿ ಅವರು ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಟೂರ್ನಿಯಿಂದಲೂ ಹೊರಗುಳಿಯಲಿದ್ದಾರೆ ಎನ್ನಲಾಗಿದೆ. ಶಮಿ ಗಾಯದ ಬಗ್ಗೆ ಮಾಹಿತಿ ಕಳೆದ ವಾರ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಮಾಹಿತಿ ನೀಡಿದ್ದರು. ‘ಶಮಿ ಅವರಿಗೆ ಶಸ್ತ್ರಚಿಕಿತ್ಸೆ ಮುಗಿದಿದೆ. ಅವರು ಭಾರತಕ್ಕೆ ವಾಪಸಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಿದೆ‘ ಹೇಳಿದ್ದರು. ಭಾರತ ತಂಡವು ಮುಂದಿನ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಎರಡು ಟೆಸ್ಟ್ ಮತ್ತು ಮೂರು ಟಿ20 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ಇದನ್ನೂ ಓದಿ Mohammed Shami: ಐಪಿಎಲ್​ ಸೇರಿ ಟಿ20 ವಿಶ್ವಕಪ್​ಗೂ ಮೊಹಮ್ಮದ್​ ಶಮಿ ಅಲಭ್ಯ!

ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು.  ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದರು.

ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ. ಸದ್ಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಸರಣಿಯ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಶಮಿ ಮೂರನೇ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆ ಇದೆ. ಏಕದಿನ ವಿಶ್ವಕಪ್​ ಬಳಿಕ ಶಮಿ ಭಾರತ ಪರ ಯಾವುದೇ ಸರಣಿ ಆಡಿಲ್ಲ.

Exit mobile version