ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ(Mohammed Shami) ಅವರು ಕೌಟುಂಬಿಕ ಕಲಹ, ವೈಯಕ್ತಿಕ ಕಾರಣ ಹಾಗೂ ಖಿನ್ನತೆಯಿಂದ ಮೂರು ಸಲ ಆತ್ಮಹತ್ಯೆಗೆ ಯತ್ನಿಸಿದ್ದೆ ಎಂಬ ವಿಚಾರವನ್ನು ಸ್ವತಃ ತವಾಗಿಯೇ ಹೇಳಿಕೊಂಡಿದ್ದರು. ಆದರೆ, ಇದೀಗ ಶಮಿ 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ ವಿಚಾರವನ್ನು ಅವರ ಗೆಳೆಯ ಬಹಿರಂಗಪಡಿಸಿದ್ದಾರೆ. ಈ ವಿಚಾರ ಕೇಳಿ ಶಮಿ ಅಭಿಮಾನಿಗಳು ಒಂದು ಕ್ಷಣ ಆತಂಕಗೊಂಡಿದ್ದಾರೆ.
ಶಮಿ ಅವರ ಸ್ನೇಹಿತ ಉಮೇಶ್ ಕುಮಾರ್ ಅವರು ಶುಭಂಕರ್ ಮಿಶ್ರಾ ನಡೆಸಿಕೊಡುವ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುವ ವೇಳೆ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. “ಎರಡು ವರ್ಷಗಳ ಹಿಂದಿನ ಸಂಗತಿ ಇದಾಗಿದ್ದು, ಬೆಳಿಗ್ಗೆ ಸುಮಾರು 4 ಗಂಟೆ ಇರಬಹುದು. ನಾನು ನೀರು ಕುಡಿಯಲು ಎದ್ದು ಅಡುಗೆ ಮನೆಯ ಕಡೆಗೆ ಹೋಗುತ್ತಿದ್ದೆ, ಈ ವೇಳೆ ಶಮಿ ಬಾಲ್ಕನಿಯಲ್ಲಿ ನಿಂತಿದ್ದರು. ಚಿಂತೆಯಲ್ಲಿ ಇದ್ದ ಹಾಗೆ ಕಾಣಿಸುತ್ತಿತ್ತು. ನಾವು 19ನೇ ಮಹಡಿಯಲ್ಲಿ ವಾಸಿಸುತ್ತಿದ್ದೆವು. ನೀರು ಕುಡಿಯಲು ಹೋಗುತ್ತಿದ್ದ ನಾನು ನೇರವಾಗಿ ಶಮಿ ಬಳಿ ಓಡಿ ಬಂದೆ. ನಾನು ಬರುವುದು ಕೊಂಚ ತಡವಾಗಿದ್ದರೂ ಕೂಡ ಶಮಿ ಇಂದು ಜೀವಂತವಾಗಿರುತ್ತಿರಲಿಲ್ಲ. ಅವರು ಅಂದು ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ದೇವರ ದಯೆಯಿಂದ ಆ ದಿನ ರಾತ್ರಿ ದೊಡ್ಡ ಅನಾಹುತವೊಂದು ತಪ್ಪಿತು” ಎಂದು ಹೇಳುವ ಮೂಲಕ ಶಮಿ ಆತ್ಮಹತ್ಯೆಗೆ ಮುಂದಾಗಿದ್ದ ಶಾಕಿಂಗ್ ವಿಚಾರವನ್ನು ಅವರ ಸ್ನೇಹಿತ ತೆರೆದಿಟ್ಟರು.
“ಶಮಿಯನ್ನು ಅಂದು ನಾನು ಆತ್ಮಹತ್ಯೆಗೆ ಯತ್ನಿಸಿದ್ದ ಬಗ್ಗೆ ಪ್ರಶ್ನೆ ಮಾಡಿದೆ. ಇದಕ್ಕೆ ಉತ್ತರಿಸಿದ್ದ ಶಮಿ, ಪಾಕಿಸ್ತಾನದ ಜತೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿರುವುದು ಸಹಿಸಿಕೊಳ್ಳು ಸಾಧ್ಯವಾಗದೆ ನಾನು ಈ ರಿತಿ ಮಾಡಲು ಮುಂದಾದೆ ಎಂದು ಹೇಳಿದ್ದಾಗಿ ಅವರ ಗೆಳೆಯ ಹೇಳಿದ್ದಾರೆ. ವಿಚ್ಛೇದಿತ ಪತ್ನಿ ಹಸಿನ್ ಜಹಾನ್ ಅವರು ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದರು. ಈಗಲೂ ಕೂಡ ಶಮಿ ಅವರ ವೈವಾಹಿಕ ಬದುಕು ಆಗಾಗ ಅನಪೇಕ್ಷಿತ ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ.
ಇದನ್ನೂ ಓದಿ Mohammed Shami : ರೋಹಿತ್ ಶರ್ಮಾಗೆ ನನ್ನ ಬೌಲಿಂಗ್ ಎಂದರೆ ಭಯ; ಮೊಹಮ್ಮದ್ ಶಮಿ
ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ವೇಳೆ ತಂಡದ ನಾಯಕ ರೋಹಿತ್ ಶರ್ಮ ಜತೆಗಿನ ಇನ್‌ಸ್ಟಾಗ್ರಾಮ್ ಚಾಟ್ನಲ್ಲಿ ಶಮಿ ತಾನು ಖಿನ್ನತೆಗೆ ಒಳಗಾಗಿ ಮೂರು ಸಲ ಸಾಯಲು ಮುಂದಾಗಿದ್ದೆ ಎಂದು ಹೇಳಿಕೊಂಡಿದ್ದರು.
ಪಾದದ ಶಸ್ತ್ರಚಿಕಿತ್ಸೆಗೆ(mohammed shami injury update) ಒಳಗಾಗಿ ಚೇತರಿಕೆ ಕಾಣುತ್ತಿರುವ ಶಮಿ ಕ್ರಿಕೆಟ್ಗೆ ಮರಳುವು ಸಿದ್ಧತೆಯಲ್ಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್ ಸೇರಿ ಮಹತ್ವದ ಟಿ20 ವಿಶ್ವಕಪ್ ಟೂರ್ನಿ ಕೈತಪ್ಪಿತ್ತು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ವೇಳೆ ಗಾಯಗೊಂಡಿದ್ದ ಶಮಿ, ಈ ಗಾಯವನ್ನು ಮರೆಮಾಚಿ ವಿಶ್ವಕಪ್ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದರು.