Site icon Vistara News

Mohammed Shami: ವಿಶ್ವಕಪ್​ ಟ್ರೋಫಿಯ ಮೇಲೆ ಕಾಲಿಟ್ಟ ಮಾರ್ಷ್ ವರ್ತನೆಗೆ​ ಬೇಸರ ವ್ಯಕ್ತಪಡಿಸಿದ ಶಮಿ

mohammed shami

ಮುಂಬಯಿ: ವಿಶ್ವಕಪ್​ ಟ್ರೋಫಿ ಮೇಲೆ ಕಾಲಿಟ್ಟು ವಿಶ್ರಾಂತಿ ಪಡೆದಿದ್ದ ಆಸ್ಟ್ರೇಲಿಯಾದ ಮಿಚೆಲ್​ ಮಾರ್ಷ್(Mitchell Marsh)​ ಅವರ ವರ್ತನೆಗೆ ಎಲ್ಲಡೆ ಟೀಕೆ ವ್ಯಕ್ತವಾಗಿತ್ತು. ಇದೇ ವಿಚಾರದಲ್ಲಿ ವಿಶ್ವಕಪ್​ನಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಟೀಮ್ ಇಂಡಿಯಾದ ಬೌಲರ್​ ಮೊಹಮ್ಮದ್​ ಶಮಿ(Mohammed Shami) ಕೂಡ ಮಾರ್ಷ್ ಅವರ ಈ ಉದ್ದಟತನಕ್ಕೆ ಟೀಕೆ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಮಾರ್ಷ್ ಅವರ ಈ ನಡೆ ತುಂಬಾ ನೋವಾಯಿತು ಎಂದಿದ್ದಾರೆ.

ವಿಶ್ವಕಪ್​ ಪ್ರದರ್ಶನದ ಕುರಿತು ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಶಮಿ ಅವರು ಮಿಚೆಲ್​ ಮಾರ್ಷ್​ ನಡೆಯನ್ನು ಕುಟುವಾಗಿ ಟೀಕಿಸಿದ್ದಾರೆ. “ನನಗೆ ತುಂಬಾ ಬೇಸರವಾಯಿತು. ವಿಶ್ವದ ಎಲ್ಲ ತಂಡಗಳು ಈ ಟ್ರೋಫಿಗಾಗಿ ಹೋರಾಡುತ್ತವೆ. ಗೆದ್ದರೆ ಟ್ರೋಫಿಯನ್ನು ತಲೆಯ ಮೇಲೆ ಹೊತ್ತು ಸಂಭ್ರಮಿಸಲು ಬಯಸುತ್ತಾರೆ. ಹೀಗಿರುವಾಗ ಈ ಪ್ರತಿಷ್ಠಿತ ಟ್ರೋಫಿ ಮೇಲೆ ಕಾಲು ಇಟ್ಟಿದ್ದು, ನನಗೆ ಸಂತೋಷ ನೀಡಲಿಲ್ಲ. ಇದು ಕ್ರಿಕೆಟ್​ಗೆ ಮಾಡಿದ ಅವಮಾನ” ಎಂದು ಶಮಿ ಹೇಳಿದ್ದಾರೆ.

ಇದನ್ನೂ ಓದಿ IND vs AUS: ಭಾರತ ತಂಡ ಗೆದ್ದದ್ದು ರಿಂಕು ಬಾರಿಸಿದ ಸಿಕ್ಸರ್​ನಿಂದಲ್ಲ; ಮತ್ತೆ ಹೇಗೆ?

ಈ ಬಾರಿ ವಿಶ್ವಕಪ್​ ಟೂರ್ನಿಯಲ್ಲಿ ಮೊಹಮ್ಮದ್‌ ಶಮಿ ಅವರ ಬೌಲಿಂಗ್​ ಸಾಧನೆ ಮರೆಯಲು ಸಾಧ್ಯವಿಲ್ಲ. ಕೇವಲ 7 ಪಂದ್ಯಗಳಲ್ಲಿ ಆಡಿದ್ದರೂ, ಮೊನಚಾದ ದಾಳಿಯಿಂದಾಗಿ ಎದುರಾಳಿ ತಂಡದಲ್ಲಿ ನಡುಕ ಹುಟ್ಟಿಸಿದ್ದರು. ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಶಮಿ ಆ ಬಳಿಕ ಪ್ರತಿ ಪಂದ್ಯದಲ್ಲಿಯೂ ಗೆಲುವಿನ ಹೀರೊ ಆಗಿ ಮೆರೆದಾಡಿದ್ದರು. ನ್ಯೂಜಿಲ್ಯಾಂಡ್‌ ವಿರುದ್ಧ 5 ವಿಕೆಟ್‌ ಪಡೆದರು.

ಇಂಗ್ಲೆಂಡ್‌ ವಿರುದ್ಧ ಭಾರತ ಕಡಿಮೆ ಸ್ಕೋರ್‌ ಗಳಿಸಿದ್ದರೂ ಶಮಿ ಮಾತ್ರ ತಮ್ಮ ಬೌಲಿಂಗ್​ ಸಾಹಸದಿಂದ 22 ರನ್‌ಗೆ 4 ವಿಕೆಟ್‌ ಪಡೆದು ಮಿಂಚಿದರು. ಲಂಕಾ ವಿರುದ್ಧ ಕೇವಲ 18 ರನ್‌ಗೆ 5 ವಿಕೆಟ್‌ ಪಡೆದರು. ದಕ್ಷಿಣ ಆಫ್ರಿಕಾ ವಿರುದ್ಧ 2 ವಿಕೆಟ್‌ ಪಡೆದರು. ನ್ಯೂಜಿಲ್ಯಾಂಡ್‌ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ 7 ವಿಕೆಟ್‌ ಪಡೆದ ಶಮಿ ಹೊಸ ದಾಖಲೆಯನ್ನೇ ನಿರ್ಮಿಸಿದರು. ಫೈನಲ್​ ಪಂದ್ಯದಲ್ಲಿ 1 ವಿಕೆಟ್​ ಕಿತ್ತರು. ಒಟ್ಟಾರೆ 23 ವಿಕೆಟ್​ ಕಿತ್ತು ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಆಟಗಾರನಾಗಿ ಹೊರಹೊಮ್ಮಿದರು. 57ಕ್ಕೆ 7 ವಿಕೆಟ್​ ಗರಿಷ್ಠ ವೈಯಕ್ತಿಕ ಬೌಲಿಂಗ್​ ಸಾಧನೆ.

ದಾಖಲೆಗಾಗಿ ಆಡುವ ಆಟಗಾರ ನಾನಲ್ಲ

ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ ಹಲವು ಶಮಿ ಅವರು ಹಲವು ದಾಖಲೆಗಳನ್ನು ಬರೆದಿದ್ದಾರೆ. ಇದೇ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಶಮಿ, ಎಂದೂ ಕೂಡ ದಾಖಲೆಗಾಗಿ ಆಡುವ ಆಟಗಾರ ನಾನಲ್ಲ, ತಂಡಕ್ಕಾಗಿ ಆಡುವುದೇ ನನ್ನ ಪರಮೋಚ್ಛ ಗುರಿ ಎಂದು ಹೇಳಿದ್ದರು.

“ವಿಶ್ವಕಪ್​ನಲ್ಲಿ ನಾನು ಹಲವು ದಾಖಲೆಗಳನ್ನು ಬರೆದಿರಬಹುದು. ದಿಗ್ಗಜ ಆಟಗಾರರನ್ನು ಹಿಂದಿಕ್ಕಿದ್ದೇನೆ ಎಂಬ ಸಂಗತಿಯೂ ನನಗೆ ತಿಳಿದಿರಲಿಲ್ಲ. ಆದರೆ ವಿಶ್ವಕಪ್‌ನಲ್ಲಿ 40ಕ್ಕೂ ಹೆಚ್ಚು ವಿಕೆಟ್‌ ಪಡೆದಿದ್ದೇನೆ ಎಂಬುದು ನನ ಗಮನದಲ್ಲಿತ್ತು. ವೈಯಕ್ತಿಕ ದಾಖಲೆಗಳ ಬಗ್ಗೆ ನಾನು ಎಂದಿಗೂ ಯೋಚಿಸಿದವನಲ್ಲ. ನನ್ನ ಕೆಲಸ ಏನಿದ್ದರೂ ಉತ್ತಮವಾಗಿ ಬೌಲಿಂಗ್‌ ಮಾಡುವುದಷ್ಟೇ” ಎಂದಿದ್ದರು.

Exit mobile version