ಲಂಡನ್: ಆಧುನಿಕ ಯುಗದ ಕ್ರಿಕೆಟ್ನ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾದ ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ ತಂಡ ಬೌಲಿಂಗ್ ಬೆನ್ನೆಲುಬು. ಅವರು ಭಾನುವಾರ ಮುಕ್ತಾಯಗೊಂಡ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಮಿಂಚಿದ್ದರು. ಆದರೆ, ಅವರು ಐಪಿಎಲ್ 2023ನೇ ಆವೃತ್ತಿಯಲ್ಲಿ ಆಡಿರಲಿಲ್ಲ. ಈ ಕುರಿತು ಮಾತನಾಡಿದ ಅವರು ನನಗೆ ಐಪಿಎಲ್ ದುಡ್ಡಿಗಿಂತ ದೇಶದ ಪರವಾಗಿ ಟೆಸ್ಟ್ ಪಂದ್ಯಗಳಲ್ಲಿ ಆಡುವುದೇ ದೊಡ್ಡದು ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡದ ಪರವಾಗಿ ಟೆಸ್ಟ್ ಕ್ರಿಕೆಟ್ ಆಡುವುದು ಅತ್ಯುನ್ನತ ಸಾಧನೆಯಾಗಿದೆ. ಭವಿಷ್ಯದಲ್ಲಿ ಅನೇಕ ಯುವಕರು ಈ ಮಾರ್ಗವನ್ನು ಅನುಸರಿಸುತ್ತಾರೆ ಎಂದು ಅವರು ಆಶಿಸಿದ್ದಾರೆ. ಸ್ಟಾರ್ಕ್ ಹೊರತುಪಡಿಸಿದರೆ ಆಸ್ಟ್ರೇಲಿಯಾ ತಂಡದ ಸಹೋದ್ಯೋಗಿಗಳು ಇಂಡಿಯನ್ ಪ್ರೀಮಿಯರ್ ಲೀಗ್ ಹಾಘೂ ಬಿಗ್ ಬ್ಯಾಷ್ ಲೀಗ್ನಲ್ಲಿ ವಿವಿಧ ಟಿ20 ಲೀಗ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಎಡಗೈ ವೇಗಿ ತಂಡದ ಪರವಾಗಿ ಆಡುವುದನ್ನೆ ಆಯ್ಕೆ ಮಾಡಿಕೊಂಡಿದ್ದಾರೆ.
ನಾನು ಐಪಿಎಲ್ನಲ್ಲಿ ಚೆನ್ನಾಗಿ ಆಡಿದ್ದೇನೆ. ನಾನು 10 ವರ್ಷಗಳ ಹಿಂದೆ ಯಾರ್ಕ್ಶೈರ್ನಲ್ಲಿ ಆಡಿದ್ದೇನೆ. ಆದರೆ ಆಸ್ಟ್ರೇಲಿಯಾ ತಂಡವೇ ನನ್ನ ಆದ್ಯತೆ. ನಾನು ಈ ವಿಚಾರದಲ್ಲಿ ನನಗೆ ನಷ್ಟವಿಲ್ಲ. ಹಣ ಬರುತ್ತದೆ ಮತ್ತು ಹೋಗುತ್ತದೆ. ಆದರೆ ರಾಷ್ಟ್ರಿಯ ತಂಡದ ಪರವಾಗಿ ಆಡಲು ನನಗೆ ದೊರೆತ ಅವಕಾಶಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಸ್ಟಾರ್ಕ್ ‘ದಿ ಗಾರ್ಡಿಯನ್’ಗೆ ತಿಳಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಲು ಬಯಸುವ ಹಲವರಿದ್ದಾರೆ. ಫ್ರಾಂಚೈಸಿ ಕ್ರಿಕೆಟ್ನಲ್ಲಿ ದುಡ್ಡು ಸಿಗುತ್ತದೆ. ಆದರೆ, ಆಯ್ಕೆ ಪ್ರಮುಖ ಎಂದು ಸ್ಟಾರ್ಕ್ ಹೇಳಿದ್ದಾರೆ.
ಆರ್ಸಿಬಿ ಪರ ಆಡಿದ್ದ ಸ್ಟಾರ್ಕ್
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 2015ರಲ್ಲಿ ಕೊನೆಯ ಬಾರಿಗೆ ಆಡಿದ್ದರು 33 ವರ್ಷದ ಸ್ಟಾರ್ಕ್. ಅವರೀಗ ಭವಿಷ್ಯದಲ್ಲಿ ಟೆಸ್ಟ್ ಕ್ರಿಕೆಟ್ ತಮ್ಮ ಆದ್ಯತೆಯಾಗಿ ಉಳಿಯುತ್ತದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : WTC Final 2023 : ಸೋಲಿನ ಕಾರಣಗಳನ್ನು ಬಿಡಿಸಿ ಹೇಳಿದ ನಾಯಕ ರೋಹಿತ್ ಶರ್ಮಾ
ನಾನು ಖಂಡಿತವಾಗಿಯೂ ಐಪಿಎಲ್ನಲ್ಲಿ ಮತ್ತೆ ಆಡಲು ಇಷ್ಟಪಡುತ್ತೇನೆ. ಆದರೆ ದೀರ್ಘಕಾಲದವರೆಗೆ ನನ್ನ ಗುರಿ ಆಸ್ಟ್ರೇಲಿಯಾ ತಂಡ. ಅದು ಯಾವುದೇ ಸ್ವರೂಪವಾಗಿರಲಿ ಎಂದು ಸ್ಟಾರ್ಕ್ ಪ್ರತಿಪಾದಿಸಿದ್ದಾರೆ.
ಟೆಸ್ಟ್ ಗೆಲುವಿನ ಕೊನೆಯಲ್ಲಿ ನನ್ನ ತಂಡದ ಸದಸ್ಯರೊಂದಿಗೆ ಕುಳಿತು ಸಂಭ್ರಮಿಸುವುದಕ್ಕೆ ಸರಿಸಾಟಿ ಯಾವುದೂ ಇಲ್ಲ. ನನಗೆ ಆಸ್ಟ್ರೇಲಿಯಾ ತಂಡದ ಕ್ಯಾಪ್ ಅನ್ನು ಪ್ರತಿನಿಧಿಸುವುದೇ ನನ್ನ ಗುರಿ ಎಂದು ಅವರು ಹೇಳಿದ್ದಾರೆ.
ಫ್ರ್ಯಾಂಚೈಸ್ ಕ್ರಿಕೆಟ್ ಅದ್ಭುತವಾಗಿರುತ್ತದೆ. ನಿಮ್ಮನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು. ಆದರೆ ರಾಷ್ಟ್ರೀಯ ತಂಡವನ್ನು ದೀರ್ಘ ಕಾಲ ಪ್ರತಿನಿಧಿಸುವುದು ದೊಡ್ಡ ಹೆಮ್ಮೆ ಎಂಬುದಾಗಿ ಸ್ಟಾರ್ಕ್ ಹೇಳಿದ್ದಾರೆ.