ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ(icc world cup 2023) ಮುಂದಿನ ಗುರುವಾರ ಆರಂಭವಾಗಲಿದೆ. ವಿಶ್ವಕಪ್‌ನಲ್ಲಿ ಆಟಗಾರರು ಮತ್ತು ತಂಡ ಮಾಡಿದ ಶ್ರೇಷ್ಠ ಸಾಧನೆಗಳ ಮೆಲುಕು ನೋಟಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ. ಇದೀಗ ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಟಾಪ್ 5 ಆಟಗಾರರ ಸಾಧನೆಯ ಪರಿಚಯವನ್ನು ಈ ಸುದ್ದಿಯಲ್ಲಿ ವಿವರಿಸಲಾಗಿದೆ. ಸಾಧಕರ ಪಟ್ಟಿ ಇಂತಿದೆ.
ರೋಹಿತ್ ಶರ್ಮ
ಪ್ರಸ್ತುತ ಟೀಮ್ ಇಂಡಿಯಾದ ನಾಯಕನಾಗಿರುವ ರೋಹಿತ್ ಶರ್ಮ ಒಂದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರನಾಗಿದ್ದಾರೆ. ಅವರು 2019ರಲ್ಲಿ ಲಂಡನ್ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ 5 ಶತಕ ಬಾರಿಸಿದ್ದರು. ಈ ಮೂಲಕ ಲಂಕಾದ ಕುಮಾರ ಸಂಗಕ್ಕರ ಅವರ ಹೆಸರಿನಲ್ಲಿದ್ದ ದಾಖಲಯನ್ನು ಮುರಿದಿದ್ದರು. ರೋಹಿತ್ 9 ಪಂದ್ಯಗಳನ್ನು ಆಡಿ ಒಟ್ಟು 648 ರನ್ ಗಳಿಸಿದ್ದರು. ವಿಶ್ವಕಪ್‌ನಲ್ಲಿ ಒಟ್ಟು ರೋಹಿತ್ 6 ಶತಕ ಬಾರಿಸಿದ್ದಾರೆ. 2015 ವಿಶ್ವಕಪ್‌ನಲ್ಲಿ ಒಂದು ಶತಕ ಬಾರಿಸಿದ್ದರು.
ಕುಮಾರ ಸಂಗಕ್ಕರ
ಶ್ರೀಲಂಕಾದ ಮಾಜಿ ನಾಯಕ ಮತ್ತು ಬ್ಯಾಟರ್ ಕುಮಾರ ಸಂಗಕ್ಕರ ಒಂದೇ ವಿಶ್ವಕಪ್‌ನಲ್ಲಿ ಸತತ 4 ಶತಕಗಳನ್ನು ಸಿಡಿಸಿದ ದಾಖಲೆ ಹೊಂದಿದ್ದಾರೆ. ಸಂಗಕ್ಕಾರ 2015ರ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು. ರೋಹಿತ್ಗೂ ಮುನ್ನ ಅವರು ಈ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು. ಒಟ್ಟಾರೆ ವಿಶ್ವಕಪ್‌ನಲ್ಲಿ ಸಂಗಕ್ಕರ 5 ವಿಶ್ವಕಪ್ ಶತಕ ಬಾರಿಸಿದ್ದಾರೆ.
ಸಚಿನ್ ತೆಂಡೂಲ್ಕರ್
ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಮಾಜಿ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಒಟ್ಟು 6 ವಿಶ್ವಕಪ್ ಶತಕ ಬಾರಿಸಿದ್ದಾರೆ. ಆದರೆ ಒಂದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಅವರಿಗೆ 6ನೇ ಸ್ಥಾನ. 1996ರ ವಿಶ್ವಕಪ್‌ನಲ್ಲಿ 2 ಶತಕ ಬಾರಿಸಿದ್ದರು. ಇದಾದ ಬಳಿಕ 2011ರ ವಿಶ್ವಕಪ್ನಲ್ಲಿಯೂ 2 ಶತಕ ಗಳಿಸಿದ್ದರು. ಅತಿ ಹೆಚ್ಚು ವಿಶ್ವಕಪ್ ಆಡಿದ ದಾಖಲೆಯೂ ಸಚಿನ್ ಹೆಸೆರಿನಲ್ಲಿದೆ. 1992-2011ರ ವರೆಗೆ ವಿಶ್ವಕಪ್ ಆಡಿದ್ದಾರೆ.
ಇದನ್ನೂ ಓದಿ ICC World Cup: ಭಾರತಕ್ಕೆ ಬಂದ ಪಾಕ್ ಕ್ರಿಕೆಟ್ ತಂಡಕ್ಕೆ ಕೇಸರಿ ಶಾಲು ಹಾಕಿ ಸ್ವಾಗತ!
ಮಾರ್ಕ್ ವಾ
ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಮಾರ್ಕ್ ವಾ ಅವರು ಒಂದೇ ವಿಶ್ವಕಪ್‌ನಲ್ಲಿ ಮೂರು ಶತಕ ಬಾರಿಸಿದ್ದಾರೆ. ಇದು 1996 ವಿಶ್ವಕಪ್‌ನಲ್ಲಿ ದಾಖಲಾಗಿತ್ತು. ಒಟ್ಟಾರೆಯಾಗಿ ಅವರು 4 ವಿಶ್ವಕಪ್ ಶತಕ ಬಾರಿಸಿದ್ದಾರೆ. 1999ರ ವಿಶ್ವಕಪ್ ವಿಜೇತ ತಂಡದಲ್ಲಿ ಮಾರ್ಕ್ ವಾ ಉತ್ತಮ ಪ್ರದರ್ಶನ ತೋರಿದ್ದರು.
ಸೌರವ್ ಗಂಗೂಲಿ
ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಸೌರವ್ ಗಂಗೂಲಿ ಅವರು 2003ರ ವಿಶ್ವಕಪ್‌ನಲ್ಲಿ ಮೂರು ಶತಕ ಬಾರಿಸಿದ್ದರು. ಅಲ್ಲದೆ ಭಾರತವನ್ನು ಫೈನಲ್ ತಲುಪಿಸಿದ ಸಾಧನೆಯನ್ನು ಮಾಡಿದ್ದರು. ಆದರೆ ಫೈನಲ್ನಲ್ಲಿ ಆಸೀಸ್ ವಿರುದ್ಧ ಭಾರತ ಸೋಲು ಕಂಡು ವಿಶ್ವಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. ಬಳಿಕ ಅವರು ಏಕದಿನ ಕ್ರಿಕೆಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ವಿಶ್ವಕಪ್ ಗೆಲ್ಲದಿದ್ದರೂ ಭಾರತ ಕ್ರಿಕೆಟ್ ತಂಡದ ದಿಸೆಯನ್ನು ಬದಲಿಸಿದ ಕೀರ್ತಿ ಗಂಗೂಲಿಗೆ ಸಲ್ಲುತ್ತದೆ.