ಲಕ್ನೋ: ಭಾನುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಭಾರತ ವಿರುದ್ಧ 100 ರನ್ಗಳ ಅಂತರದಿಂದ ಸೋಲು ಕಾಣುವ ಮೂಲಕ ವಿಶ್ವಕಪ್ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಇದೇ ವೇಳೆ ಅನಗತ್ಯ ದಾಖಲೆಯನ್ನು ಕೂಡ ತನ್ನ ಮೈ ಮೇಲೆ ಎಳೆದುಕೊಂಡಿದೆ.
ಹಾಲಿ ಚಾಂಪಿಯನ್ ತಂಡವೊಂದು ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ಸೋಲು ಕಂಡ ಕೆಟ್ಟ ದಾಖಲೆ ಇಂಗ್ಲೆಂಡ್ ಹೆಸರಿಗೆ ಅಂಟಿಕೊಂಡಿದೆ. ಇಷ್ಟರ ವರೆಗೆ ಈ ಕೆಟ್ಟ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. ಆಸ್ಟ್ರೇಲಿಯಾ 1992ರಲ್ಲಿ ಹಾಲಿ ಚಾಂಪಿಯನ್ ಆಗಿ ವಿಶ್ವಕಪ್ನಲ್ಲಿ 4 ಸೋಲು ಕಂಡಿತ್ತು. ಇದೀಗ ಇಂಗ್ಲೆಂಡ್ 5 ಸೋಲು ಕಂಡು ಈ ಅನಗತ್ಯ ದಾಖಲೆಯನ್ನು ತನ್ನ ಹೆಸರಿಗೆ ಸೇರಿಕೊಂಡಿದೆ.
ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ
ಇಂಗ್ಲೆಂಡ್ ತಂಡ ಭಾರತ ವಿರುದ್ಧ ಸೋಲು ಕಾಣುವ ಮೂಲಕ ಈ ಬಾರಿಯ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಎನಿಸಿಕೊಂಡಿತು. ಅಲ್ಲದೆ ಈ ಸೋಲಿನಿಂದಾಗಿ 202ರಲ್ಲಿ ಪಾಕಿಸ್ತಾನದಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಲೀಗ್ಗೂ ಅರ್ಹತೆ ಪಡೆಯುವಲ್ಲಿ ಬಹುತೇಕ ವಿಫಲವಾಗಿದೆ. ಐಸಿಸಿ ಮಾನದಂಡದ ಪ್ರಕಾರ ಅಂಕಪಟ್ಟಿಯಲ್ಲಿ ಅಗ್ರ 7ರೊಳಗೆ ಸ್ಥಾನ ಪಡೆದ ತಂಡಗಳು ನೇರವಾಗಿ ಈ ಟೂರ್ನಿಗೆ ಅರ್ಹತೆ ಪಡೆಯಲಿದೆ.
ಇಂಗ್ಲೆಂಡ್ ಸದ್ಯ ಕೊನೆಯ ಸ್ಥಾನದಲ್ಲಿದೆ. ಇಲ್ಲಿಂದ ಮೇಲೇರುವುದು ಬಹುತೇಕ ಕಷ್ಟ. ಇದಲ್ಲದೆ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯದ ಜಿಂಬಾಬ್ವೆ ಮತ್ತು ವಿಂಡೀಸ್ ಕೂಡ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ಇಂಗ್ಲೆಂಡ್ ತಂಡ ಮುಂದಿನ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಈ ಪಂದ್ಯ ನವೆಂಬರ್ 4ರಂದು ನಡೆಯಲಿದೆ. ಈ ಪಂದ್ಯ ಆಸ್ಟ್ರೇಲಿಯಾಕ್ಕೆ ಮಹತ್ವ ಪಡೆದಿದೆ. ಸೋತರೆ ಸೆಮಿಫೈನಲ್ ಹಾದಿ ಕಠಿಣವಾಗುವ ಸಾಧ್ಯತೆ ಇದೆ.
ಇದೇ ಮೊದಲು…
44 ವರ್ಷಗಳ ಬಳಿಕ ವಿಶ್ವಕಪ್ ಗೆದ್ದ ಕ್ರಿಕೆಟ್ ಜನಕರಾದ ಇಂಗ್ಲೆಂಡ್ 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಹೀನಾಯ ಸ್ಥಿತಿ ತಲುಪಿದ್ದು. ಇದುವರೆಗೂ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿರಲಿಲ್ಲ. ಈ ಬಾರಿ ಇದು ಕೂಡ ಸಂಭವಿಸಿತು. ಇದೇ ಕಾರಣಕ್ಕೆ ಕ್ರಿಕೆಟ್ನಲ್ಲಿ ಏನು ಬೇಕಾದರು ಸಂಭವಿಸಬಹುದು ಎಂಬ ಮಾತನ್ನು ಆಗಾಗ ಹೇಳುತ್ತಿರುವುದು. ಒಟ್ಟಾರೆ ಇಂಗ್ಲೆಂಡ್ ಪಾಲಿಗೆ 2023ರ ವಿಶ್ವಕಪ್ ಟೂರ್ನಿ ಕರಾಳ ನೆನಪಾಗುವುದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ IND vs ENG: ಆಂಗ್ಲರ ಬೌಲಿಂಗ್ ದಾಳಿಗೆ ಕುಸಿದ ಭಾರತ; ಇಂಗ್ಲೆಂಡ್ ಗೆಲುವಿಗೆ 230 ರನ್ ಗುರಿ
ಭಾರತದ ಅಜೇಯ ಓಟ
ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ರೋಹಿತ್ ಮತ್ತು ಸೂರ್ಯಕುಮಾರ್ ಅವರ ಬ್ಯಾಟಿಂಗ್ ಸಾಹಸದಿಂದ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ನಷ್ಟಕ್ಕೆ 229 ರನ್ ಗಳಿಸಿತು. ಸಣ್ಣ ಮೊತ್ತಕ್ಕೆ ಭಾರತವನ್ನು ಕಟ್ಟಿಹಾಕಿದ ಜೋಶ್ನಲ್ಲಿ ಗುರಿ ಬೆನ್ನಟ್ಟಲಾರಂಭಿಸಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡು 34.5 ಓವರ್ಗಳಲ್ಲಿ 129 ರನ್ಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತು. ಘಾತಕ ಬೌಲಿಂಗ್ ದಾಳಿ ನಡೆಸಿ 22 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತ ಮೊಹಮ್ಮದ್ ಶಮಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಪಡೆದರು. ಭಾರತ ಭರ್ತಿ 100ರನ್ ಅಂತರದ ಗೆಲುವು ಸಾಧಿಸಿತು.