ಬೆಂಗಳೂರು: ರಣಜಿ ಟ್ರೋಫಿಯ ಫೈನಲ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಸೋಮವಾರ ಮೊದಲು ಬ್ಯಾಟ್ ಮಾಡಿರುವ ಮುಂಬಯಿ ತಂಡ ಮಧ್ಯಪ್ರದೇಶ ತಂಡದ ವಿರುದ್ಧ ೫ ವಿಕೆಟ್ ಕಳೆದುಕೊಂಡು ೨೪೮ ರನ್ ಬಾರಿಸಿದೆ. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (೭೮) ಬಾರಿಸಿದ ಅರ್ಧ ಶತಕ (half century) ಸವಾಲಿನ ಮೊತ್ತ ಪೇರಿಸಲು ತಂಡಕ್ಕೆ ನೆರವಾಯಿತು.
ಎಮ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ಅರಂಭಗೊಂಡ ಪಂದ್ಯದಲ್ಲಿ 42ನೇ ಪ್ರಶಸ್ತಿಯ ಗುರಿಯೊಂದಿಗೆ ಕಣಕ್ಕಿಳಿದ ಪೃಥ್ವಿ ಶಾ ನೇತೃತ್ವದ ಮುಂಬಯಿ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದಕ್ಕೆ ತಕ್ಕಂತೆ ಅರಂಭಿಕರಾದ ಪೃಥ್ವಿ ಶಾ (೪೭) ಹಾಗೂ ಜೈಸ್ವಾಲ್ ಉತ್ತಮವಾಗಿ ಬ್ಯಾಟ್ ಬೀಸಿ ಮಧ್ಯಪ್ರದೇಶ ತಂಡದ ಬೌಲರ್‌ಗಳನ್ನು ಕಾಡಿದರು. ಈ ಜೋಡಿ ಮೊದಲ ವಿಕೆಟ್‌ಗೆ ೮೭ ರನ್‌ಗಳ ಜತೆಯಾಟ ನೀಡಿದರು. ಪೃಥ್ವಿ ಶಾ ಆರಂಭದಿಂದಲೇ ವೇಗದ ಬ್ಯಾಟಿಂಗ್‌ಗೆ ಮೊರೆ ಹೋದರು. ಅವರು ೫ ಫೋರ್ ಹಾಗೂ ೧ ಸಿಕ್ಸರ್‌ಗಳನ್ನು ಬಾರಿಸಿದರೂ ಮೂರು ರನ್‌ಗಳ ಕೊರತೆಯಿಂದ ಅರ್ಧ ಶತಕ ಬಾರಿಸುವ ಅವಕಾಶ ಕಳೆದುಕೊಂಡರು. ಆದರೆ, ಯಶಸ್ವಿ ಜೈಸ್ವಾಲ್ ೭ ಫೋರ್ ಹಾಗೂ ೧ ಸಿಕ್ಸರ್‌ಗಳ ಸಮೇತ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದರು.
ಮಧ್ಯಮ ಕ್ರಮಾಂಕದ ಕುಸಿತ
ಆರಂಭಿಕರ ವಿಕೆಟ್ ಪತನಗೊಳ್ಳುತ್ತಿದ್ದಂತೆ ಮುಂಬಯಿ ತಂಡದ ರನ್ ಗಳಿಕೆ ಕುಸಿತ ಕಂಡಿತು. ಅರ್ಮಾನ್ ಜಾಫರ್ ೨೬ ರನ್‌ಗಳಿಗೆ ಔಟಾದರೆ, ಸುವೇದ್ ಪಾರ್ಕರ್ ೧೮ ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ನಂತರದಲ್ಲಿ ಬ್ಯಾಟಿಂಗ್‌ಗೆ ಇಳಿದ ಸರ್ಫರಾಜ್ ಖಾನ್ ನಿಧಾನವಾಗಿ ಬ್ಯಾಟ್ ಮಾಡುವ ಮೂಲಕ ಕುಸಿತ ತಪ್ಪಿಸಿದರು. ೪೦ ರನ್ ಬಾರಿಸಿದ ಅವರು ಎರಡನೇ ದಿನಕ್ಕೆ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಆದರೆ, ಹಾರ್ದಿಕ್ ತಾಮೋರೆ (೨೪) ಕೂಡ ಬೇಗ ವಿಕೆಟ್ ಒಪ್ಪಿಸಿದರು. ದಿನದಾಟ ಕೊನೆಯಲ್ಲಿ ಶಮ್ಸ್ ಮುಲಾನಿ ೧೨ ರನ್‌ಗಳನ್ನು ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಮಧ್ಯ ಪ್ರದೇಶ ತಂಡದ ಅನುಭವ್ ಅಗರ್ವಾಲ್ ೫೬ ರನ್ ವೆಚ್ಚದಲ್ಲಿ ೨ ವಿಕೆಟ್ ಕಬಳಿಸಿದರೆ, ಸಾರಾಂಶ್ ಜೈನ್ ೩೧ ರನ್‌ಗಳಿಗೆ ೨ ವಿಕೆಟ್ ತಮ್ಮದಾಗಿಸಿಕೊಂಡರು. ಕುಮಾರ್ ಕಾರ್ತಿಕೇಯ ೯೧ ರನ್ ನೀಡಿ ದುಬಾರಿ ಎನಿಸಿಕೊಂಡರೂ ಮುಂಬಯಿ ತಂಡದ ೧ ವಿಕೆಟ್ ಕಬಳಿಸಲು ಶಕ್ತರಾದರು.
ಮುಂಬಯಿಗೆ ಪ್ರಶಸ್ತಿ ಕನಸು
ರಣಜಿ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ೪೧ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಮುಂಬಯಿ ತಂಡ ಈ ಬಾರಿ ಫೈನಲ್‌ಗೇರಿದ್ದು, ಆರು ವರ್ಷಗಳ ಬಳಿಕ ಟ್ರೋಫಿ ಗೆಲ್ಲುವ ತವಕದಲ್ಲಿದೆ. ೨೦೧೬ರಲ್ಲಿ ಮುಂಬಯಿ ತಂಡ ಕೊನೇ ಬಾರಿಗೆ ರಣಜಿ ಚಾಂಪಿಯನ್ ಆಗಿತ್ತು. ಅತ್ತ ಮಧ್ಯಪ್ರದೇಶ ತಂಡ ಎರಡನೇ ಬಾರಿ ಫೈನಲ್‌ಗೆ ಎಂಟ್ರಿ ಗಿಟ್ಟಿಸಿದೆ. ೧೯೮೮-೮೯ರ ಋತುವಿನಲ್ಲಿ ಫೈನಲ್‌ಗೇರಿದ್ದ ಆ ತಂಡ ಕರ್ನಾಟಕ ವಿರುದ್ಧವೇ ಸೋತು ರನ್ನರ್ ಅಪ್ ಸ್ಥಾನವನ್ನು ತಮ್ಮದಾಗಿಸಿಕೊಂಡಿತ್ತು.
ಸಂಕ್ಷಿಪ್ತ ಸ್ಕೋರ್
ಮುಂಬಯಿ ಮೊದಲ ಇನಿಂಗ್ಸ್: ೯೦ ಓವರ್‌ಗಳಲ್ಲಿ ೫ ವಿಕೆಟ್‌ಗೆ ೨೪೮ (ಯಶಸ್ವಿ ಜೈಸ್ವಾಲ್ ೭೮, ಪೃಥ್ವಿ ಶಾ ೪೭, ಸರ್ಫರಾಜ್ ಖಾನ್ ೪೦, ಅರ್ಮಾನ್ ಜಾಫರ್ ೨೬; ಅನುಭವ್ ಅಗರ್ವಾಲ್ ೫೬ಕ್ಕೆ ೨, ಸಾರಾಂಶ್ ಜೈನ್ ೩೧ಕ್ಕೆ೨).
ಬೆಂಗಳೂರಿಗೆ ನಾಲ್ಕನೇ ಆತಿಥ್ಯ
ಎಮ್ ಚಿನ್ನಸ್ವಾಮಿ ಕ್ರೀಡಾಂಗಣ ರಣಜಿ ಟ್ರೋಫಿ ಫೈನಲ್‌ಗೆ ನಾಲ್ಕನೇ ಬಾರಿ ಆತಿಥ್ಯ ವಹಿಸುತ್ತಿದೆ. ಈ ಹಿಂದೆ ೧೯೭೯, ೧೯೯೮ ಹಾಗೂ ೧೯೯೯ರಲ್ಲಿ ಆತಿಥ್ಯ ವಹಿಸಿತ್ತು. ಅದೇ ರೀತಿ ಪಂದ್ಯವನ್ನು ಉಚಿತವಾಗಿ ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ. ಪಿ೩ ಸ್ಟಾಂಡ್‌ನ ಮೂಲಕ ಪ್ರವೇಶ ಮಾಡಿ ಪಂದ್ಯ ವೀಕ್ಷಿಸಬಹುದು ಎಂದು ಕೆಎಸ್‌ಸಿಎ ಮಾಹಿತಿ ನೀಡಿದೆ.
ಇದನ್ನೂ ಓದಿ| Ranji Trophy | ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದ ಕರ್ನಾಟಕ