ಹಂಬಂತೋಟ: ಪಾಕಿಸ್ತಾನ ವಿರುದ್ಧದ ದ್ವಿತೀಯ ಏಕದಿನ(Afghanistan vs Pakistan, 2nd ODI) ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ ಅಫಘಾನಿಸ್ತಾನದ 21 ವರ್ಷದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್(151) (Rahmanullah Gurbaz), ಟೀಮ್ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್ ಧೋನಿ(MS Dhoni) ಅವರ ದಾಖಲೆಯೊಂದನ್ನು ಮುರಿದ್ದಾರೆ. ಇದಲ್ಲದೆ ಪಾಕಿಸ್ತಾನ ವಿರುದ್ಧ ಶತಕ ಸಿಡಿಸಿದ ಮೊದಲ ಅಫ್ಘಾನ್ ಬ್ಯಾಟರ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
ಶ್ರೀಲಂಕಾದ ಮಹಿಂದಾ ರಾಜಪಕ್ಸೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅತ್ಯಂತ ರೋಚಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಫಘಾನಿಸ್ತಾನ ಗುರ್ಬಾಜ್ ಅವರ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಭರ್ತಿ 300 ರನ್ ಪೇರಿಸಿ ಸವಾಲೊಡ್ಡಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಆರಂಭಿಕ ಆಘಾತದ ಹೊರತಾಗಿಯೂ ಅಂತಿಮ ಹಂತದಲ್ಲಿ ಆಲ್ರೌಂಡರ್ ಶಾಬಾದ್ ಖಾನ್ ಅವರ ಅಸಾಮಾನ್ಯ ಪ್ರದರ್ಶನದಿಂದ 49.5 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 302 ರನ್ ಬಾರಿಸಿ ಗೆಲುವು ದಾಖಲಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಬಾಬರ್ ಅಜಂ ಪಡೆ ವಶಪಡಿಸಿಕೊಂಡು ಏಷ್ಯಾಕಪ್ಗೆ ಭರ್ಜರಿ ತಯಾರಿ ನಡೆಸಿದೆ.
ಧೋನಿ ದಾಖಲೆ ಪತನ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫಘಾನಿಸ್ತಾನಕ್ಕೆ ರಹಮಾನುಲ್ಲಾ ಗುರ್ಬಾಜ್ ಉತ್ತಮ ಆರಂಭ ಒದಗಿಸಿದರು. ಪಾಕ್ ಬೌಲರ್ಗಳ ಮೇಲೆರಗಿ ಸಿಕ್ಸರ್ ಮತ್ತು ಬೌಂಡರಿಗಳ ಮಳೆಯನ್ನೇ ಸುರಿಸಿದರು. ಅವರ ಈ ವಿಸ್ಫೊಟಕ ಬ್ಯಾಟಿಂಗ್ ವೇಳೆ ಧೋನಿಯ ದಾಖಲೆಯೊಂದ ಪತನಗೊಂಡಿತು. ಪಾಕಿಸ್ತಾನ ವಿರುದ್ಧ ಅತ್ಯಧಿಕ ರನ್ ಕಲೆಹಾಕಿದ ವಿಕೆಟ್ ಕೀಪರ್ ಬ್ಯಾಟರ್ ಎಂಬ ದಾಖಲೆಯನ್ನು ಗುರ್ಬಾಜ್ ನಿರ್ಮಿಸಿದರು. ಇದಕ್ಕೂ ಮುನ್ನ ಈ ದಾಖಲೆ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿತ್ತು. 2005 ರಲ್ಲಿ ಧೋನಿ ಅವರು ಪಾಕ್ ವಿರುದ್ಧ 123 ಎಸೆತಗಳಲ್ಲಿ 148 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಆದರೆ ಗುರ್ಬಾಜ್ 151 ರನ್ ಸಿಡಿಸುವ ಮೂಲಕ ಪಾಕ್ ವಿರುದ್ಧ ನೂತನ ದಾಖಲೆ ಬರೆಯುವ ಜತೆಗೆ ಧೋನಿ ದಾಖಲೆಯನ್ನು ಮುರಿದರು.
ಇದನ್ನೂ ಓದಿ MS Dhoni : ಸ್ನೇಹಿತರೊಂದಿಗೆ ಅಪರೂಪದ ಸೆಲ್ಫಿ ತೆಗೆದುಕೊಂಡ ಎಂಎಸ್ ಧೋನಿ
14 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ರಹಮಾನುಲ್ಲಾ ಗುರ್ಬಾಜ್ 151 ರನ್ ಬಾರಿಸಿದರು. ಇವರಿಗೆ ಆರಂಭಿಕ ಜತೆಗಾರ ಇಬ್ರಾಹಿಂ ಜರ್ದಾನ್ ಕೂಡ ಉತ್ತಮ ಸಾಥ್ ನೀಡಿದರು. ಉಭಯ ಆಟಗಾರರು ಸೇರಿಕೊಂಡು ಬಿರುಸಿನ ಬ್ಯಾಟಿಂಗ್ ಮೂಲಕ ಪಾಕ್ ಬೌಲರ್ಗಳನ್ನು ಸರಿಯಾಗಿ ದಂಡಿಸಿದರು. ಈ ಜೋಡಿ ಮೊದಲ ವಿಕೆಟ್ಗೆ ಬರೋಬ್ಬರಿ 227 ರಾಶಿ ಹಾಕಿದರು. ಇಬ್ರಾಹಿಂ ಅವರು 80 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. 101 ಎಸೆತ ಎದುರಿಸಿದ ಅವರು 6 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದರು.
ಚೇಸಿಂಗ್ ವೇಳೆ ಪಾಕ್ ಪರ ಇಮಾಮ್ ಉಲ್ ಹಕ್ 91, ನಾಯಕ ಬಾಬರ್ ಅಜಂ 53, ಶಾಬಾದ್ ಖಾನ್ 48 ರನ್ ಗಳಿಸಿ ಪಾಕ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮ ಹಂತದಲ್ಲಿ ಬೌಲರ್ ನೀಶಮ್ ಶಾ ಬೌಂಡರಿ ಬಾರಿಸಿ ಪಾಕ್ ತಂಡದ ಗೆಲುವನ್ನು ಸಾರಿದರು.