ಚೆನ್ನೈ: ಧರ್ಮಶಾಲಾದಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ(MS Dhoni) 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದರು. ಇದೇ ವಿಚಾರವಾಗಿ ಧೋನಿಯನ್ನು ಹಲವು ಮಾಜಿ ಆಟಗಾರರು ಟೀಕೆ ಮಾಡಿದ್ದರು. ಅನುಭವಿ ಆಟಗಾರನಾಗಿ ಈ ಕ್ರಮಾಂಕದಲ್ಲಿ ಆಡುವುದಾದರೆ ಚೆನ್ನೈ(Chennai Super Kings) ತಂಡ ಬೇರೆ ಆಟಗಾರನಿಗೆ ಅವಕಾಶ ನೀಡಿದರೆ ಉತ್ತಮ ಎಂದು ಮಾಜಿ ಆಟಗಾರ ಹರ್ಭಜನ್ ಸಿಂಗ್ ಹೇಳಿಕೆ ನೀಡಿದ್ದರು. ಆದರೆ ಧೋನಿ ಈ ಕ್ರಮಾಂಕದಲ್ಲಿ ಆಡಲು ಕಾರಣ ಏನೆಂಬುದು ತಡವಾಗಿ ಬೆಳಕಿಗೆ ಬಂದಿದೆ. ಧೋನಿ ಸ್ನಾಯು(Dhoni Muscle Tear) ನೋವಿನಿಂದ ಬಳಲುತ್ತಿದ್ದು ಹೆಚ್ಚು ಒತ್ತು ಬ್ಯಾಟಿಂಗ್ ನಡೆಸಲು ಸಾಧ್ಯವಾಗದ ಕಾರಣ ಅವರು ಈ ನಿರ್ಧಾರ ಕೈಗೊಂಡಿದ್ದರು ತಂಡದ ಮೂಲಗಳು ಮಾಹಿತಿ ನೀಡಿದೆ.
ಧೋನಿ ಸ್ನಾಯು ಸೆಳೆತದ ನೋವಿನಿಂದ ಬಳಲುತ್ತಿದ್ದರೂ ಕೂಡ ಈ ನೋವನ್ನು ಮರೆಮಾಚಿ ಆಡುತ್ತಿದ್ದಾರೆ. ಈ ವಿಚಾರ ಯಾರಿಗೂ ತಿಳಿದಿಲ್ಲ. ನಾವು ವಾಸ್ತವಿಕವಾಗಿ ನಮ್ಮ ‘ಬಿ’ ತಂಡದೊಂದಿಗೆ ಆಡುತ್ತಿದ್ದೇವೆ. ಧೋನಿ ಅವರನ್ನು ಟೀಕಿಸುವವರಿಗೆ ಅವರು ಈ ತಂಡಕ್ಕಾಗಿ ಮಾಡುತ್ತಿರುವ ತ್ಯಾಗದ ಬಗ್ಗೆ ತಿಳಿದಿಲ್ಲ ”ಎಂದು ಸಿಎಸ್‌ಕೆ ಮೂಲಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಡೆವೊನ್ ಕಾನ್ವೇ ಲಭ್ಯವಿದ್ದರೆ ಅದು ಧೋನಿಗೆ ವಿಶ್ರಾಂತಿ ಪಡೆಯಲು ಮತ್ತು ಚೇತರಿಸಿಕೊಳ್ಳಲು ಸಹಾಯವಾಗುತ್ತಿತ್ತು. ಏಕೆಂದರೆ ಕಾನ್ವೆ ಅನುಭವಿ ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿದ್ದಾರೆ. ದುರಾದೃಷ್ಟವಶಾತ್ ಕಾನ್ವೆ ಹೆಬ್ಬೆರಳಿನ ಗಾಯದಿಂದಾಗಿ ಸಂಪೂರ್ಣವಾಗಿ ಐಪಿಎಲ್ ನಿಂದ ಹೊರಗುಳಿದಿದ್ದಾರೆ. ಹೀಗಾಗಿ ಧೋನಿಗೆ ಪರ್ಯಾಕ ವಿಕೆಟ್ ಕೀಪರ್ ಚೆನ್ನೈ ತಂಡದಲ್ಲಿಲ್ಲ. ತಂಡಕ್ಕೆ ಯಾವುದೇ ಹಿನ್ನಡೆಯಾಗಬಾರದೆಂದು ಧೋನಿ ತನ್ನ ನೋವಿನ ಮಧ್ಯೆಯೂ ಆಡುತ್ತಿದ್ದಾರೆ.
ಇದನ್ನೂ ಓದಿ IPL 2024: ಬಸ್ ಕಂಡಕ್ಟರ್‌ಗಳಿಗೆ ವಿಶೇಷ ಉಡುಗೊರೆ ನೀಡಿದ ಚೆನ್ನೈ ಸೂಪರ್ ಕಿಂಗ್ಸ್
ಈ ಬಾರಿಯ ಐಪಿಎಲ್ನ ಮೊದಲ ಪಂದ್ಯದಲ್ಲಿಯೇ ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿತ್ತು. ಪಂದ್ಯದ ಬಳಿಕ ಅವರು ಹಲವು ಬಾರಿ ಕುಂಟುತಾ ನಡೆದ ವಿಡಿಯೊಗಳು ಕೂಡ ವೈರಲ್ ಆಗಿತ್ತು. ಕಳೆದ ವರ್ಷ ಧೋನಿ ಗಾಯದ ಮಧ್ಯೆಯೇ ಸಂಪೂರ್ಣವಾಗಿ ನೋವು ನಿವಾರಕ ಪ್ಲಾಸ್ಟರ್ ಸುತ್ತಿ ಟೂರ್ನಿ ಆಡಿದ್ದರು.
ತಂಡವನ್ನು 5 ಬಾರಿ ಚಾಂಪಿಯನ್ ಮಾಡಿದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಈ ಬಾರಿಯ ಐಪಿಎಲ್(IPL 2024) ಟೂರ್ನಿ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್ಗೂ ಗುಡ್ಬೈ ಹೇಳಲಿದ್ದಾರೆ. ಇದೇ ಕಾರಣದಿಂದ ಅವರು ನಾಯಕತ್ವವನ್ನು ಋತುರಾಜ್ ಗಾಯಕ್ವಾಡ್ಗೆ ನೀಡಿದ್ದರು. ಧೋನಿ ಅವರು ಐಪಿಎಲ್ ನಿವೃತ್ತಿಯಾದರೂ ಕೂಡ ಚೆನ್ನೈ ತಂಡದೊಂದಿಗಿನ ಒಡನಾಟ ಮಾತ್ರ ಮುಂದುವರಿಯುವ ಸಾಧ್ಯತೆ ಅಧಿಕವಾಗಿದೆ. ತಂಡದ ಮೆಂಟರ್ ಆಗಿ ಅವರು ಕಾರ್ಯ ನಿರ್ವಹಿಸಬಹುದು. ಕಳೆದ ವರ್ಷವೇ ಧೋನಿ ಅವರು ಐಪಿಎಲ್ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು.