Site icon Vistara News

MS Dhoni: ತಂಡಕ್ಕಾಗಿ ಧೋನಿ ಬ್ಯಾಟಿಂಗ್‌ ‘ತ್ಯಾಗ’ ಮಾಡಿಲ್ಲ; ಮಾಜಿ ಬೌಲರ್‌ ಶಾಕಿಂಗ್‌ ಹೇಳಿಕೆ

MS Dhoni And S Sreesanth

MS Dhoni didn’t sacrifice his batting position: S Sreesanth Responds To Gautam Gambhir

ತಿರುವನಂತಪುರಂ: “ಭಾರತೀಯ ಕ್ರಿಕೆಟ್‌ ತಂಡದ (Indian Cricket Team) ಗೆಲುವಿಗಾಗಿ ಮಹೇಂದ್ರ ಸಿಂಗ್‌ ಧೋನಿಯು (MS Dhoni) ಬ್ಯಾಟಿಂಗ್‌ ಕ್ರಮಾಂಕವನ್ನು ತ್ಯಾಗ ಮಾಡಿದ್ದಾರೆ” ಎಂದು ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಹೇಳಿಕೆಯನ್ನು ಮಾಜಿ ವೇಗಿ ಎಸ್‌. ಶ್ರೀಶಾಂತ್‌ (S Sreesanth) ಅಲ್ಲಗಳೆದಿದ್ದಾರೆ. ಅಲ್ಲದೆ, “ದೇಶದ ತಂಡಕ್ಕಾಗಿ ಧೋನಿ ಅವರು ತ್ಯಾಗ ಮಾಡಿಲ್ಲ” ಎಂದು ಕೂಡ ಸಂದರ್ಶನವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಖಂಡಿತವಾಗಿಯೂ ಭಾರತ ಕ್ರಿಕೆಟ್‌ ತಂಡವು ಎರಡು ವಿಶ್ವಕಪ್‌ ಗೆದ್ದ ಶ್ರೇಯಸ್ಸು ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಸಲ್ಲಬೇಕು. ಕೆಲ ದಿನಗಳ ಹಿಂದಷ್ಟೇ ಧೋನಿಯು ಮೂರನೇ ಕ್ರಮಾಂಕದಲ್ಲಿ ಆಡಿದ್ದರೆ ಇನ್ನಷ್ಟು ರನ್‌ ಗಳಿಸಬಹುದಿತ್ತು. ಅವರು ತಂಡಕ್ಕಾಗಿ ಬ್ಯಾಟಿಂಗ್ ಕ್ರಮಾಂಕವನ್ನು ತ್ಯಾಗ ಮಾಡಿದರು ಎಂದಿದ್ದಾರೆ. ಆದರೆ, ಧೋನಿ ಯಾವಾಗಲೂ ಕೊನೆಯ ಕ್ರಮಾಂಕದಲ್ಲಿ ಆಡಿ ತಂಡಕ್ಕೆ ಗೆಲುವು ತಂದುಕೊಡಲು ಯೋಚಿಸುತ್ತಿದ್ದರು. ಕೊನೆಯ ಕ್ರಮಾಂಕದಲ್ಲಿ ಆಡುವುದೇ ಧೋನಿಯ ಶಕ್ತಿಯಾಗಿತ್ತು. ಹಾಗಾಗಿ, ಅವರು ಬ್ಯಾಟಿಂಗ್‌ ಕ್ರಮಾಂಕ ತ್ಯಾಗ ಮಾಡಿದ್ದಾರೆ ಎಂದು ಅನಿಸುವುದಿಲ್ಲ” ಎಂಬುದಾಗಿ ಶ್ರೀಶಾಂತ್‌ ತಿಳಿಸಿದ್ದಾರೆ.

“ಮಹೇಂದ್ರ ಸಿಂಗ್‌ ಧೋನಿ ಅವರಿಗೆ ತಂಡದ ಪ್ರತಿಯೊಬ್ಬ ಆಟಗಾರರ ಬ್ಯಾಟಿಂಗ್‌ ಸಾಮರ್ಥ್ಯದ ಬಗ್ಗೆ ಗೊತ್ತಿತ್ತು. ಹಾಗಾಗಿ, ಅವರು ಯಾರನ್ನು ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಸಬೇಕು ಎಂಬುದು ಗೊತ್ತಿತ್ತು. ಅವರಿಗೆ ತಮ್ಮ ಸಾಮರ್ಥ್ಯದ ಬಗ್ಗೆಯೂ ಅರಿವಿತ್ತು. ಹಾಗಾಗಿ, ಅವರು ಕೆಳ ಕ್ರಮಾಂಕದಲ್ಲಿ ಆಟವಾಡಿದರು. ಆ ಮೂಲಕ ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು” ಎಂದು ಶ್ರೀಸಾಂತ್‌ ಹೇಳಿದರು.

ಇದನ್ನೂ ಓದಿ: MS Dhoni : ಇದೆಂಥಾ ಅಚ್ಚರಿ; ಅಪರೂಪಕ್ಕೆ ಧೋನಿಯನ್ನು ಹೊಗಳಿದ ಗೌತಮ್​ ಗಂಭೀರ್​!

ಗೌತಮ್‌ ಗಂಭೀರ್‌ ಹೇಳಿದ್ದೇನು?

“ನಾಯಕತ್ವದ ಜವಾಬ್ದಾರಿಯಿಂದಾಗಿ ಧೋನಿಗೆ ಬ್ಯಾಟರ್​​ ಆಗಿ ಸಾಧಿಸಬಹುದಾದದ್ದನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಬಹಳಷ್ಟು ಬಾರಿ ನಾಯಕನಾಗಿ ನೀವು ತಂಡವನ್ನು ಮೊದಲ ಸ್ಥಾನದಲ್ಲಿರಿಸಬೇಕಾಗುತ್ತದೆ. ಎಂಎಸ್ ಧೋನಿ ನಾಯಕನಾಗದಿದ್ದರೆ ಅವರು 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದಿತ್ತು. ಅವರು ಹಲವಾರು ಏಕದಿನ ದಾಖಲೆಗಳನ್ನು ಮುರಿಯಬಹುದಾಗಿತ್ತು ಎಂಬುದು ನನಗೆ ಖಾತ್ರಿಯಿದೆ. ಅವರು ಸಾಕಷ್ಟು ಟ್ರೋಫಿಗಳನ್ನು ಗೆದ್ದಿದ್ದಾರೆ ಆದರೆ ವೈಯಕ್ತಿಕವಾಗಿ ಅವರು ಟ್ರೋಫಿಗಳಿಗಾಗಿ ತಮ್ಮ ಅಂತಾರಾಷ್ಟ್ರೀಯ ರನ್​ಗಳನ್ನು, ಬ್ಯಾಟಿಂಗ್‌ ಕ್ರಮಾಂಕವನ್ನು ತ್ಯಾಗ ಮಾಡಿದ್ದಾರೆ” ಎಂದು ಗಂಭೀರ್ ಸ್ಟಾರ್ ಸ್ಪೋರ್ಟ್ಸ್​​ನಲ್ಲಿ ಹೇಳಿದ್ದರು.

ಧೋನಿಯ ನಾಯಕತ್ವದ ಜವಾಬ್ದಾರಿಗಳನ್ನು ವಹಿಸಿಕೊಳ್ಳದೇ ಹೋಗಿದ್ದರೆ ಹಲವಾರು ವೈಯಕ್ತಿಕ ದಾಖಲೆ ಮಾಡಬಹುದಾಗಿತ್ತು. ಅವರ ಜವಾಬ್ದಾರಿಗಳು ವೈಯಕ್ತಿಕ ಬ್ಯಾಟಿಂಗ್ ಸಾಧನೆಗಳನ್ನು ಮರೆ ಮಾಡಿವೆ ಎಂದು ಗಂಭೀರ್ ಹೇಳಿದ್ದರು. ಧೋನಿ ನಾಯಕತ್ವದಲ್ಲಿರದಿದ್ದರೆ ಅವರು ಹಲವಾರು ಏಕದಿನ ದಾಖಲೆಗಳನ್ನು ಸೃಷ್ಟಿಸಬಹುದಾಗಿತ್ತು ಎಂದಿದ್ದರು. ಯಾವಾಗಲೂ ಮಹೇಂದ್ರ ಸಿಂಗ್‌ ಧೋನಿ ಅವರನ್ನು ಟೀಕಿಸುತ್ತಿದ್ದ ಗೌತಮ್‌ ಗಂಭೀರ್‌, ಅಚ್ಚರಿ ಎಂಬಂತೆ ಹೊಗಳಿದ್ದರು.

Exit mobile version