ಪಾಟ್ನಾ: ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿ ನಕಲಿ ಫೈನಾನ್ಸ್ ಕಂಪೆನಿ ಆರಂಭಿಸಿ ವಂಚಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಫೈನಾನ್ಸ್ ಕಂಪೆನಿಗೆ ಮಹೇಂದ್ರ ಸಿಂಗ್ ಧೋನಿ ರಾಯಭಾರಿ ಎಂದು ನಂಬಿಸಿ ಜನರಿಂದ ಹಣ ಹೂಡಿಕೆ ಮಾಡಿಸಿ ವಂಚನೆ ಮಾಡಲಾಗಿದೆ. ಬಂಧಿತರಿಂದ ಹಣ, ಮೊಬೈಲ್ ಫೋನ್, ಲ್ಯಾಪ್ಟಾಪ್ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ ?
ಕೆಲ ದುಷ್ಕರ್ಮಿಗಳು ಪಾಟ್ನಾದಲ್ಲಿ ಆನ್ಲೈನ್ನಲ್ಲಿ ನಕಲಿ ಫೈನಾನ್ಸ್ ಕಂಪೆನಿಯನ್ನು ತೆರೆದು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಬಳಿಕ ತಮ್ಮ ಕಂಪೆನಿಗೆ ಕ್ರಿಕೆಟಿಗ ಎಂ.ಎಸ್. ಧೋನಿ ಅವರು ರಾಯಭಾರಿಯಾಗಿದ್ದು ಅವರೂ ಕೂಡ ಈ ಕಂಪೆನಿಯಲ್ಲಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ಜನರನ್ನು ನಂಬಿಸಿದ್ದಾರೆ.
ಇದನ್ನು ನಂಬಿದ ಕೆಲವರು ಈ ನಕಲಿ ಫೈನಾನ್ಸ್ ಕಂಪೆನಿಯಿಂದ ಸಾಲ ಪಡೆಯುವ ಮುನ್ನ ಖಾತೆ ತೆರೆಯಲು, ಇನ್ಶೂರೆನ್ಸ್ ಮತ್ತು ಜಿಎಸ್ಟಿ ರೂಪದಲ್ಲಿ ಹಣ ಪಾವತಿ ಮಾಡಿದ್ದಾರೆ. ಬಳಿಕ ಸಾಲ ಕೇಳಲು ಮುಂದಾದಾಗ ಹಣ ನೀಡದೆ ವಂಚಿಸಿದ್ದಾರೆ. ಈ ಬಗ್ಗೆ ವಂಚನೆಗೊಳಗಾದವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕೇಸ್ ದಾಖಲಿಸಿದ ಬಳಿಕ ತನಿಖೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಮೊದಲು ಇಬ್ಬರನ್ನು ಬಂಧಿಸಿದ್ದರು. ಬಳಿಕ ಬಂಧಿತ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಮೂವರನ್ನು ಬಂಧಿಸಲಾಗಿದೆ. ಸದ್ಯ ಐವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ | Ms Dhoni | ಆಟೋಗ್ರಾಫ್ ಕೇಳಿದ ಅಭಿಮಾನಿಗೆ ಬೆನ್ನಿನ ಮೇಲೆ ಸಹಿ ಹಾಕಿದ ಧೋನಿ!