ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ(MS Dhoni) ಭಾರತ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ ಮತ್ತು ವಿಕೆಟ್‌ಕೀಪರ್. ಈ ಮಾತಲ್ಲಿ ಯಾವುದೇ ಅತಿಶಯೋಕ್ತಿಯಲ್ಲ. ಟಿ20, ಏಕದಿನ, ಟೆಸ್ಟ್‌ನಲ್ಲಿ ನಾಯಕನಾಗಿ, ಬ್ಯಾಟ್ಸ್‌ಮನ್ ಆಗಿ, ವಿಕೆಟ್ ಕೀಪರ್ ಆಗಿ ಎಲ್ಲದರಲ್ಲೂ ಧೋನಿ(dhoni birthday) ಸೈ ಎನಿಸಿಕೊಂಡವರು. ಇದೀಗ ಅವರಿಗೆ 42ನೇ ವರ್ಷದ ಜನ್ಮದಿನದ ಸಂಭ್ರಮ. ಅವರ ಹುಟ್ಟುಹಬ್ಬವನ್ನು ರಿಷಭ್ ಪಂತ್(rishabh pant) ಅವರು ವಿಶೇಷವಾಗಿ ಆಚರಿಸಿಕೊಂಡು ಗಮನಸೆಳೆದಿದ್ದಾರೆ.
ವಿಶ್ವ ಕ್ರಿಕೆಟ್‌ನಲ್ಲಿ ದಾಖಲೆಗಳ ವೀರನಾಗಿ, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾಗ ಮುಂದೆ ವಿಕೆಟ್ ಕೀಪರ್ ಯಾರು? ಎನ್ನುವಂತಹ ಪ್ರಶ್ನೆಗಳು ಬಿಸಿಬಿಸಿ ಚರ್ಚೆಯ ವಿಷಯವಾಗಿತ್ತು. ಅಂತಹ ಪ್ರಶ್ನೆಗೆ ಉತ್ತರವಾಗಿ ಸಿಕ್ಕಿದ್ದೇ ರಿಷಭ್ ಪಂತ್. ಧೋನಿ(rishabh pant and dhoni) ಬಳಿಕ ಭಾರತ ತಂಡದ ಕೀಪಿಂಗ್ ಜವಾಬ್ದಾರಿಯನ್ನು ಅತಿ ಕಿರಿಯ ವಯಸ್ಸಿನಲ್ಲಿಯೇ ಹೆಗಲ ಮೇಲೆ ಹೊತ್ತುಕೊಂಡ ಈ ಯುವ ಆಟಗಾರ ಪಂತ್ ಆರಂಭದಲ್ಲಿ ಅಷ್ಟಾಗಿ ನಿರೀಕ್ಷಿತ ಮಟ್ಟದಲ್ಲಿ ಕೀಪಿಂಗ್ ನಡೆಸುವಲ್ಲಿ ವಿಫಲರಾಗಿದ್ದರು. ಆ ಸಮಯದಲ್ಲಿ ಧೋನಿ ಅವರು ಪಂತ್ಗೆ ಬೆನ್ನುಲುಬಾಗಿ ನಿಂತು ಅವರಿಗೆ ಕೀಪಿಂಗ್ ಕೌಶಲವನ್ನು ಹೇಳಿಕೊಟ್ಟರು. ಇಲ್ಲಿಂದ ಆರಂಭವಾದ ಇವರ ಅಣ್ಣ ತಮ್ಮನಂತಹ ಬಾಂಧವ್ಯ ಸದಾ ಮುಂದುವರಿಯುತ್ತಲೇ ಬಂದಿದೆ. ಧೋನಿಯ ಮನೆ ಸದಸ್ಯರಲ್ಲಿ ಒಬ್ಬರಾಗಿದ್ದಾರೆ ಪಂತ್.
ಧೋನಿ ಮನೆಯ ಯಾವುದೇ ವಿಶೇಷ ಕಾರ್ಯಕ್ರಮದಲ್ಲೂ ಪಂತ್ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಅಣ್ಣನ ಸ್ಥಾನದಲ್ಲಿರುವ ಧೋನಿಗೆ ಪಂತ್ ಅವರು ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ಪಂತ್ ಸದ್ಯ ಬೆಂಗಳೂರಿನ ಎನ್ಸಿಎಯಲ್ಲಿ ಫಿಟ್ನೆಸ್ ತರಬೇತಿ ಪಡೆಯುತ್ತಿದ್ದಾರೆ. ಎನ್ಸಿಎಯಲ್ಲಿಯೇ ಪಂತ್ ಅವರು ಕೇಕ್ ಮೇಲೆ ಧೋನಿಯ ಸಣ್ಣ ಕಟೌಟ್ ನಿಲ್ಲಿಸಿ ಕೇಕ್ ಕತ್ತರಿಸಿದ್ದಾರೆ. “ನೀವು ನಮ್ಮ ಬಳಿ ಇಲ್ಲವಾದರೂ ನಾನು ನಿಮಗೋಸ್ಕರ ಕೇಕ್ ಕತ್ತರಿಸಿದ್ದೇನೆ, ಹುಟ್ಟುಹಬ್ಬದ ಶುಭಾಶಯಗಳು ಮಾಹಿ ಬಾಯ್” ಎಂದು ಬರೆದುಕೊಂಡಿದ್ದಾರೆ. ಈ ಫೋಟೊವನ್ನು ಪಂತ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ Rishabh Pant: ಮರುಹುಟ್ಟಿನ ದಿನಾಂಕ ಘೋಷಿಸಿದ ರಿಷಭ್ ಪಂತ್
ಕಳೆದ ವರ್ಷ ಧೋನಿ ಪರಿವಾರದೊಂದಿಗೆ ಪಂತ್ ಅವರು ದುಬೈಯಲ್ಲಿ ಕ್ರಿಸ್ಮಸ್ ಪಾರ್ಟಿಯಲ್ಲಿ ಪಾಲ್ಗೊಂಡು ಮರಳಿ ಭಾರತಕ್ಕೆ ಬಂದು ತಾಯಿಗೆ ಹೊಸ ವರ್ಷದ ಸರ್ಪ್ರೈಸ್ ನೀಡಲೆಂದು ದೆಹಲಿಯಿಂದ ಡೆಹ್ರಾಡೂನ್ಗೆ ತೆರಳುತ್ತಿದ್ದ ವೇಳೆ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್ ಪಂತ್ ಪಾರಾಗಿದ್ದರು. ಡೆಹ್ರಾಡೂನ್ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನೀಡಲಾಗಿತ್ತು. ಪ್ರಸ್ತುತ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದು ಮುಂದಿನ ವರ್ಷ ಕ್ರಿಕೆಟ್‌ಗೆ ಮರಳುವ ವಿಶ್ವಾಸದಲ್ಲಿದ್ದಾರೆ.