̤ರಾಂಚಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮಗೆದುರಾಗಿರುವ Knee pain ಸಮಸ್ಯೆ ನಿವಾರಣೆಗೆ ನಾಟಿ ವೈದ್ಯರೊಬ್ಬರಿಂದ ಚಿಕಿತ್ಸೆ ಪಡೆದಿರುವುದು ವೈರಲ್ ಅಗಿದೆ. ಅಚ್ಚರಿಯೆಂದರೆ ಚಿಕಿತ್ಸೆ ನೀಡಿರುವ ವೈದ್ಯರಿಗೆ ತಾವು ಔಷಧ ಕೊಟ್ಟಿರುವುದು ಖ್ಯಾತ ಕ್ರಿಕೆಟಿಗನಿಗೆ ಎಂಬುದೇ ಗೊತ್ತಿರಲಿಲ್ಲವಂತೆ.
ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದರೂ, ಐಪಿಎಲ್‌ನಲ್ಲಿ ಅಭಿಯಾನ ಮುಂದುವರಿಸಿದ್ದಾರೆ. ಮುಂದಿನ ವರ್ಷವೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವುದಾಗಿ ಅವರು ಘೋಷಿಸಿದ್ದಾರೆ. ಏತನ್ಮಧ್ಯೆ, ಅವರು ಎರಡೂ ಕಾಲುಗಳ ಮಂಡಿ ನೋವಿಗೆ ಒಳಗಾಗಿದ್ದಾರೆ. ಅದಕ್ಕಾಗಿ ನಾಟಿ ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ.
ಫೇಮಸ್ ವೈದ್ಯರು
ಮಹೇಂದ್ರ ಸಿಂಗ್ ಧೋನಿಗೆ ಚಿಕಿತ್ಸೆ ನೀಡಿರುವ ವೈದ್ಯರು ಸ್ಥಳೀಯವಾಗಿ ಸಾಕಷ್ಟು ಜನಪ್ರಿಯ ಎಂದು ಹೇಳಲಾಗುತ್ತಿದೆ. ಅವರು ತಾವೇ ಸಿದ್ಧಪಡಿಸಿದ ಔಷಧವನ್ನು ಹಾಲಿನಲ್ಲಿ ಮಿಶ್ರಣ ಮಾಡಿ ಕುಡಿಯಲು ಕೊಟ್ಟು ರೋಗ ವಾಸಿ ಮಾಡುತ್ತಾರೆ. ಈ ಔಷಧವನ್ನು ಪಡೆಯಲು ಹಲವು ಬಾರಿ ಭೇಟಿ ನೀಡಬೇಕಾಗುತ್ತದೆ. ಅಂತೆಯೇ ಧೋನಿ ಮೊದಲ ಬಾರಿ ತೆರಳಿ ಔಷಧ ತೆಗೆದುಕೊಂಡಿದ್ದಾರೆ. ಮುಂದೆ ಯಾವಾಗ ಹೋಗುತ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲ.
ರೋಗಿಗಳಿಂದ ಸೆಲ್ಫಿ
ಧೋನಿ ನಾಟಿ ವೈದ್ಯರಲ್ಲಿಗೆ ಹೋಗುತ್ತಿದ್ದಂತೆ ಅಲ್ಲಿಗೆ ಅದಾಗಲೇ ಬಂದಿದ್ದ ರೋಗಿಗಳಿಗೆ ಸ್ಟಾರ್ ಕ್ರಿಕೆಟಿಗ ಬಂದಿದ್ದು ಗೊತ್ತಾಗಿದೆ. ತಕ್ಷಣ ಅವರೆಲ್ಲರೂ ಸೆಲ್ಫಿಗಾಗಿ ಮುಗಿ ಬಿದ್ದಿದ್ದಾರೆ. ಆ ವೇಳೆ ವೈದ್ಯರಿಗೆ ತಮ್ಮಲ್ಲಿಗೆ ಚಿಕಿತ್ಸೆಗೆ ಬಂದಿರುವುದು ಧೋನಿ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: IPL 2022: ಸಿಎಸ್‌ಕೆ ಕ್ಯಾಪ್ಟನ್ ಸ್ಥಾನಕ್ಕೆ ಧೋನಿ ರಾಜೀನಾಮೆ, ಚೆನ್ನೈ ತಂಡದ ನೂತನ ನಾಯಕನಾಗಿ ಜಡೇಜಾ ನೇಮಕ