ಮುಂಬಯಿ: ಟೀಮ್ ಇಂಡಿಯಾಕ್ಕೆ(Team India) ಎರಡು ವಿಶ್ವ ಕಪ್ಗಳನ್ನು ಗೆದ್ದು ಕೊಟ್ಟ ಮಹೇಂದ್ರ ಸಿಂಗ್(MS Dhoni) ಧೋನಿ ಅವರು ಭಾರತ ತಂಡಕ್ಕೆ ನಾಯಕನಾಗಿದ್ದು ಹೇಗೆ ಎಂಬ ವಿಚಾರವನ್ನು ಮಾಜಿ ಆಟಗಾರ ದಿಲೀಪ್ ವೆಂಗ್ಸರ್ಕರ್(Dilip Vengsarkar) ಬಹಿರಂಗಪಡಿಸಿದ್ದಾರೆ.
2007ರಲ್ಲಿ ನಡೆದಿದ್ದ ಐಸಿಸಿ ಏಕ ದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಲೀಗ್ ಹಂತದಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ತಂಡವನ್ನು ಮುನ್ನಡೆಸಿದ್ದ ರಾಹುಲ್ ದ್ರಾವಿಡ್(rahul dravid) ಅವರು ಈ ಸೋಲಿನಿಂದ ಕಂಗೆಟ್ಟು ತಕ್ಷಣ ನಾಯಕತ್ವದಿಂದ ಕೆಳಗಿಳಿದರು.
ಟೂರ್ನಿಯ ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದ ಭಾರತ ಲೀಗ್ ಹಂತದಲ್ಲಿ ತನಗಿಂತ ಕೆಳಗಿನ ಶ್ರೇಯಾಂಕದ ಶ್ರೀಲಂಕಾ, ಬಾಂಗ್ಲಾದೇಶದ ವಿರುದ್ಧವೂ ಸೋತು ತೀವ್ರ ಮುಖಭಂಗಕ್ಕೆ ಒಳಗಾಗಿತ್ತು. ತಂಡದಲ್ಲಿ ಸಚಿನ್, ದ್ರಾವಿಡ್, ಗಂಗೂಲಿ, ಸೆಹವಾಗ್, ಲಕ್ಷಣ್ ಸೇರಿ ಹಲವು ಬಲಿಷ್ಠ ಆಟಗಾರರನ್ನು ನೆಚ್ಚಿಕೊಂಡಿದ್ದರೂ ಭಾರತ ಅಂತ್ಯತ ಕಳಪೆ ಪ್ರದರ್ಶನ ತೋರಿ ಎಲ್ಲಡೆ ಟೀಕೆಗೆ ಗುರಿಯಾಗಿತ್ತು.
ನಾಯಕತ್ವದಿಂದ ದ್ರಾವಿಡ್ ಅವರು ಕೆಳಗಿಳಿದ ಬಳಿಕ ಅಂದಿನ ಶರದ್ ಪವಾರ್ ನೇತೃತ್ವದ ಬಿಸಿಸಿಐ ಸಚಿನ್ ತೆಂಡೂಲ್ಕರ್(sachin tendulkar) ಅವರಿಗೆ ನಾಯಕನಾಗುವಂತೆ ಮನವಿ ಮಾಡಿತ್ತು. ಆದರೆ ಸಚಿನ್ ಇದಕ್ಕೆ ಒಪ್ಪಿಕೊಳ್ಳದೆ ಮಹೇಂದ್ರ ಸಿಂಗ್ ಧೋನಿ ಅವರ ಹೆಸರನ್ನು ಸೂಚಿಸಿದರು. ಅಚ್ಚರಿ ಎಂದರೆ ಧೋನಿಗಿಂತ ಅಂದು ತಂಡದಲ್ಲಿದ್ದ ಹಿರಿಯ ಆಟಗಾರರಾದ ಯುವರಾಜ್ ಸಿಂಗ್, ಸೆಹವಾಗ್ ಅವರನ್ನು ಕೈಬಿಟ್ಟು ಸಚಿನ್ ಅವರು ಧೋನಿ ಹೆಸರನ್ನು ಸೂಚಿಸಿದರು. ಈ ಮೂಲಕ ಧೋನಿ ಭಾರತ ತಂಡದ ನಾಯಕನಾದರು ಎಂದು ದಿಲೀಪ್ ವೆಂಗ್ಸರ್ಕರ್ ಹೇಳಿದರು.
ಇದನ್ನೂ ಓದಿ MS Dhoni: ಓ ಕ್ಯಾಪ್ಟನ್, ಮೈ ಕ್ಯಾಪ್ಟನ್! ಧೋನಿಗೆ ಹೀಗೆ ಅಂದಿದ್ದೇಕೆ ಚೆನ್ನೈ ಸೂಪರ್ ಕಿಂಗ್ಸ್?
“ಆಟಗಾರನ ಕ್ರಿಕೆಟ್ ಕೌಶಲ, ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಈ ಎಲ್ಲ ಗುಣ ಧೋನಿ ಅವರಲ್ಲಿದೆ ಎಂದು ಹೇಳುವ ಮೂಲಕ ಸಚಿನ್ ಅವರು ಧೋನಿಗೆ ಭಾರತ ತಂಡದ ನಾಯಕತ್ವ ನೀಡುವಂತೆ ಬಿಸಿಸಿಐಗೆ ಮನವರಿಕೆ ಮಾಡಿದ್ದರು. ಸಚಿನ್ ಅವರ ಸಲಹೆಯಂತೆ ಧೋನಿಗೆ 2007ರ ಚೊಚ್ಚಲ ಟಿ20 ವಿಶ್ವ ಕಪ್ಗೆ ನಾಯಕತ್ವ ನೀಡಲಾಯಿತು. ಧೋನಿ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಕಪ್ ಎತ್ತಿ ಮೆರೆದಾಡಿದರು. ಬಳಿಕ 2011ರ ಏಕದಿನ ವಿಶ್ವ ಕಪ್ನಲ್ಲಿಯೂ ಭಾರತ ತಂಡವನ್ನು ಚಾಂಪಿಯನ್ ಪಟ್ಟ ಅಲಂಕರಿಸುವಂತೆ ಮಾಡಿದರು. ಭಾರತ ಕ್ರಿಕೆಟ್ ಕಂಡ ಅತ್ಯಂತ ಶ್ರೇಷ್ಠ ನಾಯಕರ ಸಾಲಿನಲ್ಲಿ ಧೋನಿಗೆ ಈಗ ವಿಶೇಷ ಸ್ಥಾನಮಾನವಿದೆ” ಎಂದು ಹೇಳುವ ಮೂಲಕ ಧೋನಿ ಭಾರತ ತಂಡಕ್ಕೆ ನಾಯಕನಾದ ಸಂಗತಿಯನ್ನು ಅಂದಿನ ಬಿಸಿಸಿಐ ಅಧಿಕಾರಿಯಾಗಿದ್ದ ವೆಂಗ್ಸರ್ಕರ್ ಬಿಚ್ಚಿದ್ದಾರೆ.