ಮುಂಬಯಿ: 16ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿ ಒಂದು ದಿನ ಕಳೆಯುವ ಮುನ್ನವೇ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮುಂಬಯಿಯ ಕೋಲ್ಕಿಲಾಬೆನ್ ಆಸ್ಪತ್ರೆಯಲ್ಲಿ ಮೊಣಕಾಲಿನ ತಪಾಸಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಧೋನಿ ಅವರು ಐಪಿಎಲ್ ಆರಂಭಕ್ಕೂ ಮುನ್ನವೇ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದರು. ಆದರೂ ಅವರು ಒಂದು ಪಂದ್ಯಕ್ಕೂ ವಿಶ್ರಾಂತಿ ಪಡೆಯದೆ ಕಾಲಿಗೆ ಬೇಂಡೆಜ್ ಕಟ್ಟಿಕೊಂಡೇ ನೋವಿನ ಮಧ್ಯೆಯೂ ಆಡುತ್ತಿದ್ದರು. ಇದೀಗ ಐಪಿಎಲ್ ಮುಗಿದಿದೆ ಹೀಗಾಗಿ ಅವರು ತಮ್ಮ ಕಾಲಿನ ನೋವಿಗೆ ಕೋಲ್ಕಿಲಾಬೆನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಅವರು ಆಸ್ಪತ್ರೆಗೆ ತೆರಳಿದ್ದು ಎಂದು ವರದಿಯಾಗಿದೆ.
ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ರಿಷಭ್ ಪಂತ್ ಅವರು ಕಾಲಿನ ಶಸ್ತ್ರಚಿಕಿತ್ಸೆಯನ್ನು ಇದೇ ಆಸ್ಪತ್ರೆಯಲ್ಲಿ ಮಾಡಲಾಗಿತ್ತು. ಸದ್ಯ ಅವರು ಚೇತರಿಕೆಯ ಹಾದಿಯಲ್ಲಿದ್ದಾರೆ. ಇದೀಗ ಧೋನಿ ಕೂಡ ಅಗತ್ಯಬಿದ್ದರೆ ಇಲ್ಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಧೋನಿ ಒಂದು ವಾರಗಳ ಕಾಲ ಇಲ್ಲಿ ತಪಾಸಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ IPL 2023 : ನಿರಾಸೆ ನಡುವೆಯೂ ಚೆನ್ನೈಗೆ ಶಹಬ್ಬಾಸ್ ಹೇಳಿದ ಗುಜರಾತ್ ಟೈಟನ್ಸ್ ನಡೆಗೆ ಮೆಚ್ಚುಗೆ
MS Dhoni is likely to be admitted in Kokilaben hospital next week due to multiple injuries that he is carrying including the major knee injury.
— DIPTI MSDIAN (@Diptiranjan_7) May 31, 2023
ಈ ಬಾರಿಯ ಐಪಿಎಲ್ ಬಳಿಕ ಧೋನಿ ವಿದಾಯ ಹೇಳುತ್ತಾರೆ ಎನ್ನಲಾಗಿತ್ತು ಆದರೆ ಧೋನಿ ಅವರು ತಂಡ ಚಾಂಪಿಯನ್ ಆದ ಬಳಿಕ ಮಾತನಾಡಿ ಮುಂದಿನ ಒಂದು ಆವೃತ್ತಿಯ ಐಪಿಎಲ್ನಲ್ಲಿ ಆಡಬೇಕೆಂದಿದ್ದೇನೆ, ಆದರೆ ಇದಕ್ಕೆ ನನ್ನ ದೇಹ ಸ್ಪಂದಿಸಬೇಕು ಎಂದು ಹೇಳಿದ್ದರು. ಇದೇ ಕಾರಣಕ್ಕೆ ಅವರು ಮುಂದಿನ ಆವೃತ್ತಿಗೂ ಮುನ್ನವೇ ಕಾಲಿನ ಗಾಯಕ್ಕೆ ಸಂಪೂರ್ಣ ಚಿಕಿತ್ಸೆ ಪಡೆಯಲು ಮುಂದಾಗಿರುವಂತೆ ಕಾಣುತ್ತಿದೆ.