ಬೆಂಗಳೂರು: ಕೆಲವು ಕ್ರೀಡಾಪಟುಗಳ ಬಗ್ಗೆ ಬರೆಯುವಾಗ, ಓದುವಾಗ ಯಾವಾಗಲೂ ರೋಮಾಂಚನಗೊಳ್ಳುತ್ತೇವೆ. ಬೆಂಕಿ ಎಂಬ ಬಡತನದಲ್ಲಿ ಬೆಂದು ಕೊನೆಗೆ ಯಶಸ್ಸಿನ ಸಾಧನೆಯ ಗೌರಿಶಿಖರವನ್ನು ಏರಿ ಗೆಲುವಿನ ಬಾವುಟ ಹಾರಿಸಿದ ಅದೆಷ್ಟೋ ಕ್ರೀಡಾಪಟುಗಳಿದ್ದಾರೆ. ಇದೀಗ ಈ ಸಾಲಿಗೆ ಬಿಹಾರ ಮೂಲದ ಕ್ರಿಕೆಟಿಗ ಮುಖೇಶ್ ಕುಮಾರ್(Mukesh Kumar) ಸೇರ್ಪಡೆಗೊಂಡಿದ್ದಾರೆ.
ಹೌದು ಬಿಹಾರದಲ್ಲಿ ಜನಿಸಿದ ಮುಖೇಶ್ ಕುಮಾರ್ ಯಾವುದೇ ಶ್ರೀಮಂತ ಕುಟುಂಬದಲ್ಲಿ ಅಥವಾ ಕ್ರಿಕೆಟ್ ಹಿನ್ನೆಲೆಯಿಂದ ಬಂದ ಪ್ರತಿಭೆಯಲ್ಲ. ಕಠಿಣ ಪರಿಶ್ರಮದ ಮೂಲಕವೇ ಬೆಳೆದು ಬಂದು ಇದೀಗ ಲಂಕಾ ವಿರುದ್ಧದ ಸರಣಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದಿದ್ದಾರೆ. ಈ ಮೂಲಕ ತಮ್ಮ ಬದುಕಿನಲ್ಲಿ ಹೊಸ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಲ್ಲಿದ್ದಾರೆ.
ತಂದೆ ಟ್ಯಾಕ್ಸಿ ಡ್ರೈವರ್
ಮುಖೇಶ್ ಅವರ ತಂದೆ ವೃತ್ತಿಯಲ್ಲಿ ಟ್ಯಾಕ್ಸಿ ಡ್ರೈವರ್. ಬಡತನದಲ್ಲಿ ಬೆಳೆದ ಮುಖೇಶ್ಗೆ ಕ್ರಿಕೆಟ್ನಲ್ಲಿ ಆಸಕ್ತಿ ಇದ್ದರೂ ತಮ್ಮ ಕುಟುಂಬ ನಿರ್ವಹಣೆಗಾಗಿ ಆರಂಭದಲ್ಲಿ ಕೂಲಿ ಕೆಲಸವನ್ನು ಮಾಡುತಿದ್ದರು. ಜತೆಗೆ ತಮ್ಮ ನೆಚ್ಚಿನ ಕ್ರಿಕೆಟ್ ಆಟವನ್ನು ಬಿಡುವಿನ ವೇಳೆ ಆಡುತಿದ್ದರು. ಹೀಗೆ ಕಠಿಣ ಶ್ರಮದಿಂದ ಕ್ರಿಕೆಟ್ನಲ್ಲಿ ತನ್ನ ಬದುಕನ್ನು ಕಟ್ಟಿಕೊಂಡಿರುವ ಮುಕೇಶ್ ಇದೀಗ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.
ಐಪಿಎಲ್ನಲ್ಲೂ ಬೇಡಿಕೆ
ಬಂಗಾಲ ಪರ ದೇಶೀಯ ಕ್ರಿಕೆಟ್ ಆಡುವ ಮುಖೇಶ್ ಕಳೆದ ವಾರ ಕೊಚ್ಚಿಯಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ 5 ಕೋಟಿ ರೂಪಾಯಿಗೆ ಡೆಲ್ಲಿ ತಂಡ ಸೇರಿಕೊಂಡಿದ್ದರು. ಇದರ ಬೆನ್ನಲ್ಲೇ ಇದೀಗ ಭಾರತ ತಂಡಕ್ಕೂ ಎಂಟ್ರಿ ಸಿಕ್ಕಿದೆ. ಈ ಮೂಲಕ ಮುಖೇಶ್ ಬಾಳಲ್ಲಿ ಸಂತಸದ ದಿನಗಳು ಬರಲಾರಂಭಿಸಿದೆ. ಕಳೆದ ಸೀಸನ್‌ನಲ್ಲಿ ಮಾರಾಟವಾಗದೇ ಉಳಿದಿದ್ದ ಅವರು ಈ ಬಾರಿ 20 ಲಕ್ಷ ರೂ ಮೂಲ ಬೆಲೆಯೊಂದಿಗೆ ಹರಾಜಿಗಿಳಿದಿದ್ದರು. ಇಲ್ಲಿ ಮಾರಾಟವಾಗುತ್ತೇನೆ ಎಂಬ ನಿರೀಕ್ಷೆ ಅವರಿಗಿರಲಿಲ್ಲ. ಆದರೆ ಮುಖೇಶ್ ಅವರನ್ನು ಬರೋಬ್ಬರಿ 5.50 ಕೋಟಿ ರೂ.ನೀಡಿ ಡೆಲ್ಲಿ ತಂಡ ಖರೀದಿಸಿತ್ತು.
ಸೇನೆಗೆ ಸೇರಲು ಬಯಸಿದ್ದ ಮುಖೇಶ್
ಕ್ರಿಕೆಟ್ ಆಟದಲ್ಲಿ ಅಪಾರ ಆಸಕ್ತಿ ಇದ್ದರೂ ಕುಟುಂಬಕ್ಕೆ ಆಧಾರವಾಗುವ ನಿಟ್ಟಿನಲ್ಲಿ ಮುಖೇಶ್ ಸೇನೆಗೆ ಸೇರಲು ಬಯಸಿದ್ದರು. ಅದರಂತೆ ಸೇನಾ ನೇಮಕಾತಿಗೂ ಅರ್ಜಿ ಸಲ್ಲಿಸಿದ್ದರು. ಆದರೆ ಇಲ್ಲಿ ವಿಫಲರಾದ ಬಳಿಕ ಧೃಡ ನಿರ್ಧಾರ ಕೈಗೊಂಡ ಅವರು ತಮ್ಮ ಕಷ್ಟದ ಮಧ್ಯೆಯೂ ಕ್ರಿಕೆಟ್ ಆಟದಲ್ಲಿಯೇ ಮುಂದುವರಿಯಲು ಆರಂಭಿಸಿದರು. ಇದರ ಪ್ರತಿ ಫಲ ಇದೀಗ ದೊರೆತಿದೆ. ಅದೆಷ್ಟೋ ಕ್ರಿಕೆಟ್ ಆಟಗಾರರ ಕನಸಾದ ಟೀಮ್ ಇಂಡಿಯಾದಲ್ಲಿ, ಮುಕೇಶ್ ಸ್ಥಾನ ಪಡೆದಿದ್ದಾರೆ. ಲಂಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾದ ಅವರು ಆಡುವ ಬಳಗದಲ್ಲಿ ಅವಕಾಶ ಪಡೆದು ಉತ್ತಮ ಪ್ರದರ್ಶನ ತೋರುವಂತಾಗಲಿ ಎನ್ನುವುದು ಎಲ್ಲರ ಆಶಯವಾಗಿದೆ.
ಇದನ್ನೂ ಓದಿ | IND VS SL | ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಆರಂಭ; ಲಂಕಾ ಸರಣಿಯಿಂದ ಹಿರಿಯ ಆಟಗಾರರಿಗೆ ಕೊಕ್!