ಮುಂಬಯಿ : ಭೀಕರ ಅವಘಡದಲ್ಲಿ ಭಾರತ ತಂಡದ ವಿಕೆಟ್ಕೀಪರ್ ಬ್ಯಾಟರ್ ರಿಷಭ್ ಪಂತ್ ಪವಾಡಸದೃಶ ಪಾರಾಗಿದ್ದಾರೆ. ಆದರೂ ಅವರಿಗೆ ಸಾಮಾನ್ಯ ರೂಪದ ಗಾಯಗಳಾಗಿವೆ. ಬೆನ್ನಿನ ಚರ್ಮ ಸುಟ್ಟು ಹೋಗಿರುವ ಕಾರಣ ಪ್ಲಾಸ್ಟಿಕ್ ಸರ್ಜರಿಯ ಅವಶ್ಯಕತೆಯಿದೆ. ಮಂಡಿಗೆ ಆಗಿರುವ ಗಾಯಕ್ಕೆ ಸರ್ಜರಿ ಕೂಡ ಬೇಕಾಗಿದೆ. ಹೀಗಾಗಿ ಅವರನ್ನು ಡೆಹ್ರಾಡೂನ್ನಿಂದ ಮುಂಬಯಿಯ ಕೋಕಿಲಾಬೆನ್ ದೀರೂ ಬಾಯಿ ಅಂಬಾನಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿನ ತಜ್ಞ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ.
ಏಷ್ಯಾ ಕಪ್ ವೇಳೆ ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಅವರು ಮಂಡಿ ನೋವಿನ ಸಮಸ್ಯೆ ಎದುರಿಸಿದ್ದರು. ಅವರಿಗೆ ಮುಂಬಯಿನಲ್ಲಿ ಸರ್ಜರಿ ಮಾಡಲಾಗಿತ್ತು. ಶಸ್ತ್ರ ಚಿಕಿತ್ಸೆ ಬಳಿಕ ಅವರನ್ನೂ ಸುಧಾರಿಸಿಕೊಂಡಿಲ್ಲ. ಇನ್ನೂ ಕೆಲವು ದಿನಗಳ ವಿಶ್ರಾಂತಿ ಬಳಿಕ ತಂಡಕ್ಕೆ ಮರಳಬಹುದು. ಕಳೆದ ಸೆಪ್ಟೆಂಬರ್ನಲ್ಲಿ ಅವರಿಗೆ ಗಾಯವಾಗಿತ್ತು. ಅಲ್ಲಿಂದ ನಾಲ್ಕು ತಿಂಗಳು ಕಳೆದಿದ್ದು ಇನ್ನೂ ಪುನಶ್ಚೇತನದ ಅಗತ್ಯವಿದೆ. ಇದೀಗ ರಿಷಭ್ ಪಂತ್ ಅವರಿಗೂ ಜಡೇಜಾ ಅವರಿಗೆ ಆದಷ್ಟೆ ಗಾಯಗಳಾಗಿವೆ ಎನ್ನಲಾಗಿದೆ. ಹೀಗಾಗಿ ಅವರಿಗೂ ಕನಿಷ್ಠ 6 ತಿಂಗಳ ವಿಶ್ರಾಂತಿ ಅಗತ್ಯವಿದೆ ಎನ್ನಲಾಗಿದೆ.
ವೈದ್ಯರ ಮೂಲವೊಂದು ಈ ಬಗ್ಗೆ ಮಾಹಿತಿ ನೀಡಿದ್ದು, ಜಡೇಜಾ ಅವರಿಗೆ ಆದಷ್ಟೇ ಸ್ವರೂಪದ ಗಾಯ ರಿಷಭ್ ಪಂತ್ಗೂ ಆಗಿದೆ. ಹೀಗಾಗಿ ತಕ್ಷಣದಲ್ಲೇ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕಾಗುತ್ತದೆ. ಜತೆಗೆ ಆರು ತಿಂಗಳಿಗೂ ಅಧಿಕ ಕಾಲ ವಿಶ್ರಾಂತಿ ಬೇಕಾಗುತ್ತದೆ ಹೇಳಿದೆ.
ಪ್ರತಿಯೊಬ್ಬರ ದೇಹವೂ ವಿಭಿನ್ನವಾಗಿರುತ್ತದೆ. ಆದರೂ ರಿಷಭ್ ಪಂತ್ಗೂ ಶಸ್ತ್ರ ಚಿಕಿತ್ಸೆ ಅಗತ್ಯವಿದೆ. ಸುಧಾರಣೆಯಾಗಲೂ ಸಾಕಷ್ಟು ಸಮಯ ಬೇಕಾಗಬಹುದು ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.
ಡಿಸೆಂಬರ್ 30ರಂದು ರಿಷಭ್ ಪಂತ್ ಅವರು ಕಾರು ಅವಘಡಕ್ಕೆ ಒಳಗಾಗಿತ್ತು. ಘಟನೆಯಲ್ಲಿ ಅವರು ಸ್ವಲ್ಪದರಲ್ಲೇ ಜೀವ ಸಹಿತ ಪಾರಾಗಿದ್ದರು. ಅಲ್ಲಿಂದ ಅವರು ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಮುಂಬಯಿಗೆ ಕರೆದುಕೊಂಡು ಬರಲಾಗಿದೆ.
ಇದನ್ನೂ ಓದಿ | Rishabh Pant | ಹೆಚ್ಚಿನ ಚಿಕಿತ್ಸೆಗೆ ರಿಷಭ್ ಪಂತ್ ಮುಂಬೈಗೆ ಶಿಫ್ಟ್; ಶ್ಯಾಮ್ ಶರ್ಮಾ ಮಾಹಿತಿ