Site icon Vistara News

Women’s Premier League : ಪ್ರೀಮಿಯರ್ ಲೀಗ್​ಗೆ ಕೋಚಿಂಗ್​ ಸಿಬ್ಬಂದಿಯನ್ನು ಪ್ರಕಟಿಸಿದ ಮುಂಬಯಿ ಇಂಡಿಯನ್ಸ್​

Charlotte Edwards

#image_title

ಮುಂಬಯಿ: ಮಾರ್ಚ್ ತಿಂಗಳಲ್ಲಿ ನಡೆಯಲಿರುವ ವಿಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ(Women’s Premier League) ಆಡಲಿರುವ ತನ್ನ ತಂಡದ ಕೋಚಿಂಗ್ ಬಳಗವನ್ನು ಮುಂಬಯಿ ಇಂಡಿಯನ್ಸ್​ ತಂಡ ಪ್ರಕಟಿಸಿದೆ. ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾರ್ಲೆಟ್​ ಎಡ್ವರ್ಡ್ಸ್ ಹೆಡ್​ ಕೋಚ್​ ಆಗಿ ನೇಮಕಗೊಂಡಿದ್ದಾರೆ. ಭಾರತ ತಂಡದ ಮಾಜಿ ವೇಗಿ ಜೂಲನ್ ಗೋಸ್ವಾಮಿಗೆ ತಂಡದ ಮೆಂಟರ್ ಮತ್ತು ಬೌಲಿಂಗ್ ಕೋಚ್ ಜವಾಬ್ದಾರಿ ನೀಡಲಾಗಿದೆ. ಭಾರತದ ಮಾಜಿ ಆಲ್​ರೌಂಡರ್​ ದೇವಿಕಾ ಪಾಲ್ಶಿಕಾರ್ ಬ್ಯಾಟಿಂಗ್ ಕೋಚ್ ಹಾಗೂ ತೃಪ್ತಿ ಚಂದಗಡ್ಕರ್ ಭಟ್ಟಾಚಾರ್ಯ ತಂಡದ ಮ್ಯಾನೇಜರ್ ಆಗಿ ನೇಮಕಗೊಂಡಿದ್ದಾರೆ.

‘ಶಾರ್ಲೆಟ್​ ಎಡ್ವರ್ಡ್ಸ್, ಜೂಲನ್ ಗೋಸ್ವಾಮಿ ಮತ್ತು ದೇವಿಕಾ ಪಾಲ್ಶಿಕಾರ್ ಅವರನ್ನು ಮುಂಬಯಿ ಇಂಡಿಯನ್ಸ್ ಕುಟುಂಬಕ್ಕೆ ಸ್ವಾಗತಿಸುತ್ತಿದ್ದೇನೆ. ಮಹಿಳೆಯರು ಕೇವಲ ಆಟದಲ್ಲಿ ಮಾತ್ರವಲ್ಲದೆ ಕೋಚ್​ಗಳು, ಆಡಳಿತಾಧಿಕಾರಿಗಳು ಮತ್ತು ತರಬೇತಿ ಸಿಬ್ಬಂದಿಯಾಗಿ ತೊಡಗಿಸಿಕೊಳ್ಳುತ್ತಿರುವುದು ಸಂತೋಷದ ವಿಷಯ ಎಂದು ಮುಂಬಯಿ ಇಂಡಿಯನ್ಸ್​ ತಂಡದ ಮುಖ್ಯಸ್ಥೆ ನೀತಾ ಅಂಬಾನಿ ಹೇಳಿದ್ದಾರೆ.

ಕೋಚ್​ಗಳ ವಿವರ

ಶಾರ್ಲೆಟ್ ಎಡ್ವರ್ಡ್ಸ್ 20 ವರ್ಷಗಳ ಕಾಲ ಇಂಗ್ಲೆಂಡ್​ ತಂಡದ ಪರವಾಗಿ ಆಡಿದ್ದರು. ಆ ತಂಡದ ನಾಯಕಿಯಾಗಿ ಏಕದಿನ ಮತ್ತು ಟಿ20 ವಿಶ್ವಕಪ್​ಗಳನ್ನು ಗೆದ್ದುಕೊಟ್ಟಿದ್ದಾರೆ. ಕಳೆದ 5 ವರ್ಷಗಳಿಂದ ಅವರು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ವಿವಿಧ ತಂಡಗಳ ಕೋಚ್ ವೃತ್ತಿ ಮಾಡಿದ್ದರು. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಆಯೋಜಿಸುವ ಮಹಿಳೆಯರ ದೇಶೀಯ ಟಿ20 ಕ್ರಿಕೆಟ್ ಟೂರ್ನಿಯು ಚಾರ್ಲೋಟ್ ಎಡ್ವರ್ಡ್ಸ್ ಕಪ್ ಎಂಬ ಹೆಸರು ಹೊಂದಿದೆ.

ಜೂಲನ್ ಗೋಸ್ವಾಮಿ ತಮ್ಮ ವೇಗದ ಬೌಲಿಂಗ್ ಮೂಲಕ ಭಾರತಕ್ಕೆ ಹಲವು ಗೆಲುವುಗಳನ್ನು ತಂದುಕೊಟ್ಟವರು. 20 ವರ್ಷಗಳ ವೃತ್ತಿಜೀವನದಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 350ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. ಅವರು ಮಾಜಿ ವಿಶ್ವದ ನಂಬರ್ ಒನ್ ಆಟಗಾರ್ತಿಯೂ ಹೌದು. ನಿವೃತ್ತಿಯ ಬಳಿಕ ಬಂಗಾಳದ ಮಹಿಳಾ ಕ್ರಿಕೆಟ್ ತಂಡದ ಮೆಂಟರ್ ಆಗಿ ಕೆಲಸ ಮಾಡಿದ್ದರು.

ಇದನ್ನೂ ಓದಿ : Virat Kohli: ವಿಮೆನ್ಸ್‌ ಪ್ರೀಮಿಯರ್‌ ಲೀಗ್‌: ತಂಡ ಖರೀದಿಗೆ ಸಂತಸ ವ್ಯಕ್ತಪಡಿಸಿದ ವಿರಾಟ್​ ಕೊಹ್ಲಿ

ದೇವಿಕಾ ಪಾಲ್ಶಿಕಾರ್ ಅವರು ಭಾರತ ತಂಡದ ಮಾಜಿ ಬಲಗೈ ಬ್ಯಾಟರ್ ಮತ್ತು ಬಲಗೈ ಲೆಗ್ ಸ್ಪಿನ್ನರ್. 2009ರಿಂದ 2012ರವರೆಗೆ ಅವರು ಅಸ್ಸಾಂ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹಾಗೂ ಕೋಚ್ ಆಗಿದ್ದರು. ನಿವೃತ್ತಿಯ ನಂತರದಲ್ಲಿ ಅವರು, 2014 ಮತ್ತು 2016ರ ನಡುವೆ ಭಾರತ ತಂಡದ ಸಹಾಯಕ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. 2018ರ ಏಷ್ಯನ್ ಕಪ್ ಜಯಿಸಿದ ಬಾಂಗ್ಲಾದೇಶ ತಂಡಕ್ಕೂ ಸಹಾಯಕ ಕೋಚ್ ಆಗಿ ನೆರವಾಗಿದ್ದರು. ಭಾರತದಲ್ಲಿ ವಿವಿಧ ದೇಶೀಯ ಕ್ರಿಕೆಟ್ ತಂಡಗಳಿಗೆ ತರಬೇತಿ ನೀಡಿದ್ದಾರೆ. 2022ರ ವಿಮೆನ್ಸ್ ಟಿ20 ಚಾಲೆಂಜ್ ಟೂರ್ನಿಯಲ್ಲಿ ಫೈನಲ್​​ಗೇರಿದ ವೆಲಾಸಿಟಿ ತಂಡಕ್ಕೂ ಮುಖ್ಯ ಕೋಚ್ ಆಗಿದ್ದರು .

ತೃಪ್ತಿ ಚಂದಗಡ್ಕರ್ ಭಟ್ಟಾಚಾರ್ಯ ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಹಾಗೂ ಮ್ಯಾನೇಜರ್ ಆಗಿದ್ದರು. ಎಂಸಿಎಯಲ್ಲಿ ಆಯ್ಕೆಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

Exit mobile version