Site icon Vistara News

Mumbai Indians | ಮುಂದಿನ ಆವೃತ್ತಿಯ ಐಪಿಎಲ್‌ಗೆ ಮುಂಬಯಿ ಇಂಡಿಯನ್ಸ್‌ ತಂಡಕ್ಕೆ ಬೌಷರ್‌ ಕೋಚ್

mumbai indians

ಮುಂಬಯಿ : ಮುಂದಿನ ಆವೃತ್ತಿಯ ಐಪಿಎಲ್‌ಗೆ ಮುಂಬಯಿ ಇಂಡಿಯನ್ಸ್‌ ತಂಡದ ಹೆಡ್‌ ಕೋಚ್‌ ಆಗಿ ದಕ್ಷಿಣ ಆಫ್ರಿಕಾ ತಂಡದ ಮಾಜಿ ವಿಕೆಟ್‌ಕೀಪರ್ ಬ್ಯಾಟರ್‌ ಮಾರ್ಕ್‌ ಬೌಷರ್‌ ನೇಮಕಗೊಂಡಿದ್ದಾರೆ. ಶುಕ್ರವಾರ ಫ್ರಾಂಚೈಸಿ ಈ ಮಾಹಿತಿಯನ್ನು ಖಚಿತಪಡಿಸಿದೆ. ೪೫ ವರ್ಷದ ಈ ಹಿರಿಯ ಕ್ರಿಕೆಟಿಗ ಶ್ರೀಲಂಕಾದ ಮಹೇಲ ಜಯವರ್ಧನೆ ಅವರ ಸ್ಥಾನವನ್ನು ತುಂಬಲಿದ್ದಾರೆ. ಲಂಕಾದ ಮಾಜಿ ಕ್ರಿಕೆಟಿಗ ಜಯವರ್ಧನೆ ಅವರನ್ನು ಮುಂಬಯಿ ಇಂಡಿಯನ್ಸ್‌ ಫ್ರಾಂಚೈಸಿ ಜಾಗತಿಕ ಪ್ರದರ್ಶನ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಿದೆ.

ಬೌಚರ್‌ ಅವರು ಪ್ರಸ್ತುತ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಹೆಡ್‌ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಮುಂದಿನ ಟಿ೨೦ ವಿಶ್ವ ಕಪ್‌ ಬಳಿಕ ಆ ಹುದ್ದೆಯಿಂದ ವಿಮುಖರಾಗುವುದಾಗಿ ಅವರು ಕಳೆದ ವಾರ ಘೋಷಿಸಿದ್ದರು. ಅಲ್ಲಿಂದ ಅವರು ಮುಂಬಯಿ ಇಂಡಿಯನ್ಸ್‌ ಬಳಗ ಸೇರಿಕೊಳ್ಳಲಿದ್ದಾರೆ

“ಮುಂಬಯಿ ಇಂಡಿಯನ್ಸ್‌ ತಂಡದ ಹೆಡ್‌ ಕೋಚ್‌ ಆಗಿ ನೇಮಕಗೊಂಡಿರುವುದಕ್ಕೆ ಸಂತಸವಾಗುತ್ತಿದೆ. ಈ ತಂಡವು ಹೊಂದಿರುವ ಗೆಲುವಿನ ದಾಖಲೆ ಹಾಗೂ ಯಶಸ್ಸಿನ ಇತಿಹಾಸವು, ಜಾಗತಿಕ ಕ್ರೀಡಾ ಕ್ಷೇತ್ರದ ಅತ್ಯಂತ ಸಮರ್ಥ ಫ್ರಾಂಚೈಸಿ ಎಂಬುದನ್ನು ಸಾಬೀತುಪಡಿಸಿದೆ,” ಎಂಬುದಾಗಿ ಬೌಷರ್‌ ನುಡಿದಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ಪರ ಆಡುವಾಗ ವಿಕೆಟ್‌ಕೀಪರ್ ಆಗಿ ಬೌಷರ್‌ ಉತ್ತಮ ದಾಖಲೆ ಹೊಂದಿದ್ದರು. ದ. ಆಫ್ರಿಕಾ ಪರ ಟೆಸ್ಟ್‌ ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳ ಪತನಕ್ಕೆ ಕಾರಣರಾದ ವಿಕೆಟ್‌ಕೀಪರ್ ಎಂಬ ದಾಖಲೆ ಹೊಂದಿದ್ದಾರೆ.

೨೦೧೯ರಲ್ಲಿ ಅವರು ದಕ್ಷಿಣ ಆಫ್ರಿಕಾ ತಂಡದ ಹೆಡ್‌ ಕೋಚ್‌ ಆಗಿ ನೇಮಕಗೊಂಡಿದ್ದರು. ಈ ಅವಧಿಯಲ್ಲಿ ೧೧ ಟೆಸ್ಟ್ ಜಯಗಳು, ೧೨ ಏಕದಿನ ಪಂದ್ಯಗಳ ಜಯ ಹಾಗೂ ೨೩ ಟಿ೨೦ ವಿಜಯ ಕಂಡಿದೆ.

ಇದನ್ನೂ ಓದಿ | MUMBAI INDIANS | ಮುಂಬಯಿ ಇಂಡಿಯನ್ಸ್ ಕೇಂದ್ರ ತಂಡಕ್ಕೆ ಜಯವರ್ಧನೆ, ಜಹೀರ್‌ ಖಾನ್‌

Exit mobile version