Site icon Vistara News

WPL 2023 : ಮುಂಬಯಿ ಇಂಡಿಯನ್ಸ್​ ಅಜೇಯ, ಡೆಲ್ಲಿ ವಿರುದ್ಧ 8 ವಿಕೆಟ್ ಭರ್ಜರಿ ಜಯ

Mumbai Indians are unbeaten, 8-wicket win over Delhi

#image_title

ಮುಂಬಯಿ: ಸಾಂಘಿಕ ಹೋರಾಟ ನಡೆಸಿದ ಮುಂಬಯಿ ಇಂಡಿಯನ್ಸ್​ ತಂಡ ಮಹಿಳೆಯರ ಪ್ರೀಮಿಯರ್​ ಲೀಗ್​ (WPL 2023) ಏಳನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್​ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಹರ್ಮನ್​ಪ್ರೀತ್ ಕೌರ್ ಬಳಗ ಹ್ಯಾಟ್ರಿಕ್ ವಿಜಯ ದಾಖಲಿಸಿತಲ್ಲದೆ, ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿತು. ಯಸ್ತಿಕಾ ಭಾಟಿಯಾ ಮುಂಬಯಿ ಪರ 41 ರನ್​ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.

ಇಲ್ಲಿನ ಡಿವೈ ಪಾಟೀಲ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ತಂಡ 18 ಓವರ್​ಗಳಲ್ಲಿ 105 ರನ್​ಗಳಿಗೆ ಆಲ್​ಔಟ್ ಆಯಿತು. ಗುರಿ ಬೆನ್ನಟ್ಟಿದ ಮುಂಬಯಿ ಇಂಡಿಯನ್ಸ್​ 15 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 109 ರನ್​ ಬಾರಿಸಿತು. ಆರಂಭಿ ಬ್ಯಾಟರ್ ಹೇಲಿ ಮ್ಯಾಥ್ಯೂಸ್​ (32), ನ್ಯಾಟ್​ ಸೀವರ್​ ಬ್ರಂಟ್​ ಅಜೇಯ 23 ರನ್ ಬಾರಿಸಿದರೆ ನಾಯಕಿ ಹರ್ಮನ್​ಪ್ರೀತ್ ಕೌರ್​ 11 ರನ್​ಗಳ ಕೊಡುಗೆ ಕೊಟ್ಟರು.

ಅದಕ್ಕಿಂತ ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಬಳಗ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ನಾಯಕಿ ಮೆಗ್​ಲ್ಯಾನಿಂಗ್​ (43) ಹೊರತುಪಡಿಸಿದರೆ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಕಾರಣ ಡೆಲ್ಲಿ ತಂಡಕ್ಕೆ ಹಿನ್ನಡೆ ಉಂಟಾಯಿತು. ಆರಂಭಿಕ ಬ್ಯಾಟರ್​ ಶಫಾಲಿ ವರ್ಮಾ 2 ರನ್​ಗೆ ವಿಕೆಟ್​ ಒಪ್ಪಿಸಿದರೆ ಅಲೀಸ್ ಕಾಪ್ಸಿ 6 ರನ್ ಗಳಿಸಿ ಔಟಾದರು. ಮರಿಜನ್​ ಕಾಪ್​ 2 ರನ್​ಗೆ ವಿಕೆಟ್​ ಒಪ್ಪಿಸಿದರು.

ಇದನ್ನೂ ಓದಿ : WPL 2023 : ಆರ್​ಸಿಬಿ ಮಣಿಸಿದ ನಡುವೆಯೇ ಗುಜರಾತ್​ ಜಯಂಟ್ಸ್​ ತಂಡಕ್ಕೆ ಆಘಾತ, ನಾಯಕಿ ಟೂರ್ನಿಯಿಂದ ಔಟ್​​

ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರೋಡ್ರಿಗಸ್ (25) ಇನಿಂಗ್ಸ್​ ಕಟ್ಟುವ ಪ್ರಯತ್ನ ಮಾಡಿದರೂ ದೊಡ್ಡ ಮೊತ್ತ ಪೇರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಜೆಸ್ ಜೊನಾಸೆನ್ 2 ರನ್​, ತಾನಿಯಾ ಭಾಟಿಯಾ 4 ರನ್​ ಹಾಗೂ ಮಿನ್ನು ಮಣಿ ಶೂನ್ಯಕ್ಕೆ ಔಟಾದರು. ರಾಧಾ ಯಾದವ್​ 10 ರನ್​ ಕೊಡುಗೆ ಕೊಟ್ಟರೆ ಶಿಖಾ ಪಾಂಡೆ 4 ರನ್​ ಗಳಿಸಿದರು.

ಮುಂಬಯಿ ತಂಡದ ಪರ ಬೌಲಿಂಗ್​ನಲ್ಲಿ ಸೈಕಾ ಇಶಾಕ್​ 13 ರನ್​ಗಳಿಗೆ 3 ವಿಕೆಟ್​ ಪಡೆದರೆ, ಇಸ್ಸಿ ವಾಂಗ್​ 10 ರನ್​ ನೀಡಿ 3 ವಿಕೆಟ್ ಉರುಳಿಸಿದರು. ಹೇಲಿ ಮ್ಯಾಥ್ಯೂಸ್​ 19 ರನ್​ಗೆ 3 ವಿಕೆಟ್​ ಉರುಳಿಸಿದರು.

Exit mobile version