ಮುಂಬಯಿ : ಐಪಿಎಲ್‌ನ (Cricket League) ಅತ್ಯಂತ ಯಶಸ್ವಿ ತಂಡವಾಗಿರುವ ಮುಂಬಯಿ ಇಂಡಿಯನ್ಸ್ ಫ್ರಾಂಚೈಸಿ ಮಾಲೀಕರು ತಮ್ಮ ಕ್ರಿಕೆಟ್‌ನ ಮೇಲಿನ ಪ್ರೀತಿಯನ್ನು ಜಗತ್ತಿನೆಲ್ಲೆಡೆ ವಿಸ್ತರಿಸಲು ಮುಂದಾಗಿದ್ದರೆ. ಅದಕ್ಕಾಗಿ ಮುಂದಿನ ವರ್ಷದಿಂದ ಯುಎಇ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಲಿರುವ ಎರಡ ಕ್ರಿಕೆಟ್ ಲೀಗ್‌ಗಳಲ್ಲಿ ತಂಡಗಳನ್ನು ಖರೀದಿಸಿದ್ದಾರೆ. ಯುಎಇ ಲೀಗ್‌ನಲ್ಲಿ ಆಡಲಿರುವ ತಂಡಕ್ಕೆ ಮುಂಬಯಿ ಎಮಿರೇಟ್ಸ್ ಎಂದು ಹೆಸರು ಇಡಲಾಗಿದ್ದು, ದಕ್ಷಿಣ ಆಫ್ರಿಕಾದ ಲೀಗ್ ತಂಡಕ್ಕೆ ಮುಂಬಯಿ ಕೇಪ್‌ಟೌನ್ ಎಂದು ಕರೆಯಲಾಗಿದೆ. ಎರಡೂ ಲೀಗ್‌ಗಳ ತಂಡ ಖರೀದಿಗೆ ಆಯಾ ದೇಶಗಳ ಕ್ರಿಕೆಟ್ ಸಂಸ್ಥೆಗಳು ಇತ್ತೀಚೆಗೆ ಬಿಡ್ ಕರೆದಿತ್ತು. ಅವುಗಳಲ್ಲಿ ಎರಡು ಪ್ರಮುಖ ತಂಡಗಳನ್ನು ಖರೀದಿ ಮಾಡಲು ರಿಲಯನ್ಸ್ ಸಂಸ್ಥೆ ಯಶಸ್ವಿಯಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನೀತು ಅಂಬಾನಿ ಒಡೆತದ ಮುಂಬಯಿ ಇಂಡಿಯನ್ಸ್ ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಬಲಿಷ್ಠ ಆಟಗಾರರನ್ನು ಒಳಗೊಂಡಿರುವ ಈ ತಂಡಕ್ಕಾಗಿ ರಿಲಯನ್ಸ್ ಸಂಸ್ಥೆ ಸಾಕಷ್ಟು ದುಡ್ಡು ವ್ಯಯಿಸುತ್ತದೆ. ರಿಲಯನ್ಸ್ ಇಂಡಸ್ಟ್ರಿಗೆ ಸೇರಿದ ಕಂಪನಿಗಳ ಬ್ರಾಂಡ್ ಬಿಲ್ಡಿಂಗ್ ಕಾರ್ಯವನ್ನು ಈ ತಂಡಗಳ ಮೂಲಕ ಮಾಡುತ್ತಿದೆ. ಅದೇ ಮಾದರಿಯಲ್ಲಿ ಯುಎಇ ಮತ್ತು ದಕ್ಷಿಣ ಆಫ್ರಿಕಾದಲ್ಲೂ ಕ್ರಿಕೆಟ್ ಮೂಲಕ ತಮ್ಮ ಉದ್ಯಮವನ್ನು ಗಟ್ಟಿ ಮಾಡಲು ಮುಂದಾಗಿದೆ.
ಒಂದೇ ಮಾದರಿಯ ಜರ್ಸಿ
ಈಗ ಖರಿದಿ ಮಾಡಿರುವ ಮುಂಬಯಿ ಯುಎಇ ಹಾಗೂ ಮುಂಬಯಿ ಕೇಪ್‌ಟೌನ್ ತಂಡಗಳ ಜರ್ಸಿ, ಐಪಿಎಲ್‌ನ ಮುಂಬಯಿ ಇಂಡಿಯನ್ಸ್ ತಂಡದ ಜರ್ಸಿ ಮಾದರಿಯಲ್ಲೇ ಇರಲಿದೆ ಎಂದು ಫ್ರಾಂಚೈಸಿ ಹೇಳಿದೆ. ಆದರೆ, ಕೆಲವೊಂದು ಗೆರೆಗಳಲ್ಲಿ ವ್ಯತ್ಯಾಸವಿರಲಿದೆ. ಆಯಾಯ ನಗರವನ್ನು ಸೂಚಿಸುವ ಬಣ್ಣವನ್ನು ಜರ್ಸಿಯ ಗೆರೆಗಳಲ್ಲಿ ಬಳಸಿಕೊಳ್ಳಲಾಗುತ್ತದೆ ಎಂದು ಫ್ರಾಂಚೈಸಿಯ ಮೂಲಗಳು ತಿಳಿಸಿವೆ.
ಏನನ್ನುತ್ತಾರೆ ನೀತಾ ಅಂಬಾನಿ
ಮುಂಬಯಿ ಇಂಡಿಯನ್ಸ್ ತಂಡದ ಮಾಲೀಕರಾಗಿರುವ ನೀತಾ ಅಂಬಾನಿ ಅವರು ಕ್ರಿಕೆಟ್ ಅನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತಾರೆ. ಮುಂಬಯಿ ಇಂಡಿಯನ್ಸ್ ತಂಡ ಆಡುವ ವೇಳೆ ಪ್ರತಿ ಬಾರಿಯೂ ಅವರು ಮೈದಾನದಲ್ಲಿ ಕಾಣಿಸಿಕೊಳ್ಳುವುದೇ ಅದಕ್ಕೆ ಸಾಕ್ಷಿ. ಆಂತೆಯೇ ಅವರು ಹೊಸ ತಂಡಗಳ ಖರೀದಿ ಬಗ್ಗೆಯೂ ಹರ್ಷ ವ್ಯಕ್ತಪಡಿಸಿದ್ದಾರೆ. “ಇದು ಕ್ರಿಕೆಟ್ ಪರಂಪರೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಕಾರ್ಯವಾಗಿದೆ. ಅಂತೆಯೇ ಎರಡೂ ತಂಡಗಳು ಸಮಾನವಾಗಿ ಬೆಳೆಯಲಿದೆ,” ಎಂದು ಹೇಳಿದ್ದಾರೆ.
ಮುಂದಿನ ವಾರ ಹರಾಜು
ಎರಡೂ ತಂಡಗಳಿಗೆ ಆಟಗಾರರ ಖರೀದಿ ಪ್ರಕ್ರಿಯೆ ಮುಂದಿನ ವಾರ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅಂತೆಯೇ ಪ್ರಮುಖ ಆಟಗಾರರು ಈ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೀಗ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ವಿಶ್ವದ ಪ್ರಮುಖ ೩೦ ಆಟಗಾರರು ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಭಾರತ ಫ್ರಾಂಚೈಸಿಗಳದ್ದೇ ಕಾರುಬಾರು
ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೀಗ್‌ನಲ್ಲಿ ಭಾರತದ್ದೇ ಕಾರು ಬಾರು ಜೋರಾಗಿದೆ. ಮುಂಬಯಿ ಇಂಡಿಯನ್ಸ್ ಸೇರಿದಂತೆ ಐಪಿಎಲ್‌ನ ಆರು ಫ್ರಾಂಚೈಸಿಗಳು ಇಲ್ಲಿ ತಂಡಗಳನ್ನು ಖರೀದಿ ಮಾಡಿದ. ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಖನೌ ಸೂಪರ್ ಜಯಂಟ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಫ್ರಾಂಚೈಸಿಗಳನ್ನು ತಮ್ಮದಾಗಿಸಿಕೊಂಡಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ |ದ್ವಿಪಕ್ಷೀಯ ಸರಣಿಗಳು ಕೈಬಿಡಿ, ಐಪಿಎಲ್‌ನಂಥ ಕ್ರಿಕೆಟ್ ಲೀಗ್ ಆಡಿಸಿ ಎಂಬ ಸಲಹೆ ಕೊಟ್ಟ Ravi Shastri