ಲಕ್ನೋ: ಪ್ಲೇ ಆಫ್ ಹೊಸ್ತಿಲಲ್ಲಿ ಬಂದು ನಿಂತಿರುವ ಮುಂಬೈ ಇಂಡಿಯನ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಆಹ್ವಾನ ಪಡೆದಿದೆ. ಇದು ಪ್ರಸಕ್ತ ಋತುವಿನ ಐಪಿಎಲ್ನಲ್ಲಿ ಇತ್ತಂಡಗಳ ಮೊದಲ ಮುಖಾಮುಖಿ. ಕಳೆದ ವರ್ಷ ನಡೆದ ಎರಡೂ ಪಂದ್ಯಗಳಲ್ಲಿಯೂ ಲಕ್ನೋ ಜಯ ಸಾಧಿಸಿತ್ತು.
ಪಿಚ್ ರಿಪೋರ್ಟ್ ಹೇಗಿದೆ?
ಭಾರತ ರತ್ನ ಶ್ರೀ ಅಟಲ್ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿರುವ ಪಿಚ್ ಹಾಲಿ ಆವೃತ್ತಿಯಲ್ಲಿ ವಿಭಿನ್ನವಾಗಿ ವರ್ತಿಸಿದ ಪಿಚ್. ಬೇರೆಲ್ಲ ಪಿಚ್ಗಳಲ್ಲಿ ರನ್ ಮಳೆ ಸುರಿಯುತ್ತಿದ್ದರೆ ಇಲ್ಲಿ ಬೌಲರ್ಗಳು ಮೆರೆದಾಡಿದ್ದರು. ನಿಧಾನಗತಿಯ ಹಾಗೂ ಸ್ಪಿನ್ ಬೌಲಿಂಗ್ಗೆ ಹೆಚ್ಚು ಅವಕಾಶಗಳನ್ನು ಸೃಷ್ಟಿಸಿತ್ತು. ಬ್ಯಾಟರ್ಗಳು ರನ್ ಗಳಿಸಲು ಹೆಣಗಾಡಿದ್ದಾರೆ. ಸದ್ಯ ಈ ಪಂದ್ಯದಲ್ಲಿ ಪಿಚ್ ಯಾರಿಗೆ ನೆರವು ನೀಡಲಿದೆ ಎಂದು ಕಾದು ನೋಡಬೇಕಿದೆ.
ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ನಿರಾಶಾದಾಯಕ ಫಲಿತಾಂಶಗಳ ನಂತರ ಲಕ್ನೋ ಮೂಲದ ಫ್ರಾಂಚೈಸಿ ತನ್ನ ಹಿಂದಿನ ಪಂದ್ಯದಲ್ಲಿ ಅಗತ್ಯ ಗೆಲುವನ್ನು ಸಾಧಿಸಿತ್ತು. ಆದಾಗ್ಯೂ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಹೀಗಾಗಿ ಮುಂಬಯಿ ವಿರುದ್ಧದ ಪಂದ್ಯದಲ್ಲಿ ಗೆದ್ದು ಪ್ಲೇಆಫ್ ಸ್ಥಾನವನ್ನು ಖಚಿತಪಡಿಸುವ ಉದ್ದೇಶವನ್ನು ಹೊಂದಿದೆ.
ಕಳೆದ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡ ನಿರ್ಣಾಯಕ ಪಂದ್ಯಕ್ಕೆ ಸಜ್ಜಾಗಿದೆ. ರೋಹಿತ್ ಶರ್ಮಾ ಪಡೆಯ ಬ್ಯಾಟ್ಸ್ಮನ್ಗಳು ಅತ್ಯುತ್ಸಾಹದಲ್ಲಿದ್ದಾರೆ. ಸ್ಫೋಟಕ ಬ್ಯಾಟಿಂಗ್ ನಡೆಸಿ ಎದುರಾಳಿ ತಂಡವನ್ನು ನಡುಗಿಸುತ್ತಿದ್ದಾರೆ. ಹೀಗಾಗಿ ತವರು ನೆಲದಲ್ಲಿ ಗೆಲುವಿಗಾಗಿ ಕಾದಿರುವ ಲಕ್ನೊ ತಂಡಕ್ಕೂ ಸೋಲಿನ ರುಚಿ ತೋರಿಸುವ ಉದ್ದೇಶ ಹೊಂದಿದೆ.
ಕಳೆದ ಋತುವಿನಲ್ಲಿ ಲಕ್ನೊ ವಿರುದ್ಧ ಆಡಿದ್ದ ಎರಡೂ ಪಂದ್ಯಗಳಲ್ಲಿ ಮುಂಬಯಿ ತಂಡ ಸೋಲು ಕಂಡಿತ್ತು. ಇದೀಗ ಅದಕ್ಕೆ ಸೇಡು ತೀರಿಸಿಕೊಳ್ಳುವುದಕ್ಕೆ ಮುಂದಾಗಿದೆ. ಒಂದು ವೇಳೆ ಈ ಪಂದ್ಯದಲ್ಲಿ ಗೆದ್ದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರ ಎರಡನೇ ಸ್ಥಾನಕ್ಕೇರಲಿದೆ.
ಇದನ್ನೂ ಓದಿ IPL 2023: ಆರ್ಸಿಬಿ ತಂಡಕ್ಕೆ ಔತಣಕೂಟ ನೀಡಿದ ವಿರುಷ್ಕಾ ದಂಪತಿ
ಸಂಭಾವ್ಯ ತಂಡಗಳು
ಲಕ್ನೊ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ (ನಾಯಕ), ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೊಯ್ನಿಸ್ , ನಿಕೋಲಸ್ ಪೂರನ್, ಅಮಿತ್ ಮಿಶ್ರಾ, ಯಶ್ ಠಾಕೂರ್, ರವಿ ಬಿಷ್ಣೋಯ್, ಯುಧ್ವೀರ್ ಸಿಂಗ್ ಚರಕ್, ಅವೇಶ್ ಖಾನ್.
ಮುಂಬಯಿ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ) , ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ನೇಹಲ್ ವಧೇರಾ, ವಿಷ್ಣು ವಿನೋದ್, ಟಿಮ್ ಡೇವಿಡ್, ಕ್ಯಾಮೆರಾನ್ ಗ್ರೀನ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್ಡಾರ್ಫ್, ಕುಮಾರ್ ಕಾರ್ತಿಕೇಯ.