Site icon Vistara News

Murali Sreeshankar: ಒಲಿಂಪಿಕ್ಸ್‌ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತ; ಟೂರ್ನಿಯಿಂದ ಹೊರಬಿದ್ದ ಪದಕ ಭರವಸೆಯ ಕ್ರೀಡಾಪಟು

murali sreeshankar

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್‌(Paris Olympics)​ ಕ್ರೀಡಾಕೂಡ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇನ್ನು 98 ದಿನಗಳು ಮಾತ್ರ ಬಾಕಿ ಉಳಿದಿವೆ. ಟೂರ್ನಿಗೆ ಅರ್ಹತೆ ಪಡೆದ ಎಲ್ಲ ದೇಶದ ಕ್ರೀಡಾಪಟುಗಳು ಕಠಿಣ ಅಭ್ಯಾಸದ ಮೂಲಕ ತಯಾರಿ ನಡೆಸುತ್ತಿದ್ದಾರೆ. ಆದರೆ, ಭಾರತಕ್ಕೆ ಹಿನ್ನಡೆಯ ಸುದ್ದಿಯೊಂದು ಲಭಿಸಿದೆ. ಪದಕ ಭರವಸೆ ಇರಿಸಿದ್ದ ಖ್ಯಾತ ಲಾಂಗ್‌ ಜಂಪರ್‌(long jump) ಮುರಳಿ ಶ್ರೀಶಂಕರ್‌(Murali Sreeshankar) ಅವರು ತರಬೇತಿ ಪಡೆಯುವ ವೇಳೆ ಮೊಣಕಾಲಿನ ಗಾಯಕ್ಕೆ ಒಳಗಾದ ಕಾರಣ ಒಲಿಂಪಿಕ್ಸ್‌ನಿಂದ ಹೊರಗುಳಿಯಲಿದ್ದಾರೆ.

ಏಷ್ಯನ್‌ ಮತ್ತು ಕಾಮನ್ವೆಲ್ತ್‌ ಗೇಮ್ಸ್‌ ಬೆಳ್ಳಿ ಪದಕ ವಿಜೇತ ಶ್ರೀಶಂಕರ್‌ 2023ರ ಏಷ್ಯನ್‌ ಅತ್ಲೆಟಿಕ್‌ ಕೂಟದಲ್ಲಿ ದಾಖಲೆಯ 8.37 ಮೀ. ದೂರ ಹಾರುವ ಮೂಲಕ ಬೆಳ್ಳಿ ಪದಕ ಜಯಿಸಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರು. ಒಲಿಂಪಿಕ್ಸ್​ನಲ್ಲಿಯೂ ಉತ್ತಮ ಪ್ರದರ್ಶನ ತೋರಿ ಪದಕವೊಂದನ್ನು ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ, ಇದೀಗ ಗಾಯಗೊಂಡು ಅವರ ಪದಕ ಗೆಲ್ಲುವ ಕನಸು ಕಮರಿದೆ. ಒಲಿಂಪಿಕ್ಸ್​ ಜುಲೈ 26 ರಿಂದ ಆಗಸ್ಟ್‌ 11ರವರೆಗೆ ನಡೆಯಲಿದೆ.

ಒಲಿಂಪಿಕ್ಸ್​ನಲ್ಲಿ ಭಾರತೀಯ ಅಥ್ಲೀಟ್​ಗಳಿಗೆ ಮನೆ ಊಟ

ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ಗೇಮ್ಸ್‌ ವಿಲೇಜ್‌ನಲ್ಲಿ ಎಲ್ಲ ಅಥ್ಲೀಟ್​ಗಳಿಗೆ ಭಾರತೀಯ ಶೈಲಿಯ ಊಟ ಸಿಗಲಿದೆ. ರೋಟಿ, ದಾಲ್‌, ಆಲೂ ಗೋಬಿ, ಚಿಕನ್‌ ಇತ್ಯಾದಿ ಭಾರತೀಯ ಖಾದ್ಯಗಳು ಸಿಗಲಿದೆ. ಪ್ರತಿ ಬಾರಿಯೂ ಜಾಗತಿಕ ಕ್ರೀಡಾಕೂಟಗಳಲ್ಲಿ ಭಾರತೀಯ ಅಥ್ಲೀಟ್‌ಗಳಿಗೆ ದೊಡ್ಡ ಸಮಸ್ಯೆ ಎದುರಾಗುತ್ತಿದ್ದು ಆಹಾರ. ಟೋಕಿಯೊ ಒಲಿಂಪಿಕ್ಸ್​ನಲ್ಲಿಯೂ ಭಾರತೀಯ ಅಥ್ಲೀಟ್​ಗಳು ಸರಿಯಾದ ಪೌಷ್ಟಿಕಾಂಶ ಆಹಾರ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ವಿದೇಶಿ ಅಥ್ಲೀಟ್‌ಗಳಿಗೆ ಈ ಸಮಸ್ಯೆ ಎದುರಾಗುವುದಿಲ್ಲ. ಏಕೆಂದರೆ ಅವರು ಅಕ್ಕಿಯಿಂದ ತಯಾರಿಸಿದ ಆಹಾರವನ್ನು ಅಷ್ಟಾಗಿ ಸೇವಿಸುವುದಿಲ್ಲ. ಈ ಬಾರಿ ಭಾರತೀಯ ಅಥ್ಲೀಟ್​ಗಳ ಆಹಾರದ ದೊಡ್ಡ ಸಮಸ್ಯೆ ಬಗೆಹರಿದಂತಿದೆ. ದಕ್ಷಿಣ ಏಷ್ಯಾದ ಖಾದ್ಯಗಳನ್ನು ಸೇರಿಸಲು ಸಂಘಟಕರಿಗೆ ಭಾರತೀಯ ಒಲಿಂಪಿಕ್‌ ಸಂಸ್ಥೆ ಮನವಿ ಮಾಡಿದೆ. ಈ ಮನವಿಯನ್ನು ಸಂಘಟಕರು ಒಪ್ಪಿಕೊಂಡಿರುವುದಾಗಿ ಒಲಿಂಪಿಕ್ಸ್‌ನ ಭಾರತ ತಂಡ ಉಪ ಮುಖ್ಯಾಧಿಕಾರಿಯಾಗಿರುವ ಶಿವ ಕೇಶವನ್‌ ತಿಳಿಸಿದ್ದಾರೆ.

ಇದನ್ನೂ ಓದಿ Paris Olympics 2024: ಒಲಿಂಪಿಕ್ಸ್​ಗಾಗಿ ಸರ್ಕಾರಿ ಕಟ್ಟಡದಿಂದ ನೂರಾರು ವಲಸಿಗರ ತೆರವು

ಗೇಮ್ಸ್‌ ವಿಲೇಜ್‌ನಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾ ವಿಜ್ಞಾನ ಕೇಂದ್ರವನ್ನೂ ಐಒಎ ಸ್ಥಾಪಿಸುತ್ತಿದೆ. ಇಲ್ಲಿ ಅಥ್ಲೀಟ್‌ಗಳಿಗೆ ಅಗತ್ಯವಿರುವ ವೈದ್ಯಕೀಯ ನೆರವು, ಔಷಧ ಒದಗಿಸಲು ಭಾರತದಿಂದಲೇ ವೈದ್ಯಕೀಯ ಉಪಕರಣಗಳನ್ನು ಕೂಡ ಐಒಎ ಪ್ಯಾರಿಸ್‌ಗೆ ಕೊಂಡೊಯ್ಯುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪದಕ ಗೆಲ್ಲುವುದು ಭಾರತದ ಪ್ರಮುಖ ಗುರಿಯಾಗಿದೆ. ಟೋಕಿಯೊದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಈ ಬಾರಿ ಇನ್ನೂ ಹೆಚ್ಚಿನ ಪದಕ ಗೆಲ್ಲುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಲವು ಕ್ರೀಡಾ ಯೋಜನೆಗಳನ್ನು ಜಾರಿಗೆ ತಂದಿತ್ತು. ಇದರ ಫಲಿತಾಂಶ ಇನ್ನೇನು ಕೆಲವೇ ತಿಂಗಳಲ್ಲಿ ಲಭಿಸಲಿದೆ.

Exit mobile version