ಚೆನ್ನೈ: ಟೀಮ್ ಇಂಡಿಯಾದ ಹಿರಿಯ ಆಟಗಾರ, ಟೆಸ್ಟ್ ಸ್ಪೆಷಲಿಸ್ಟ್ ಮುರಳಿ ವಿಜಯ್(Murali Vijay) ಬಿಸಿಸಿಐ ಜತೆಗಿನ ಸಂಬಂಧ ಬಹುತೇಕ ಅಂತ್ಯಗೊಂಡಿದೆ ಎಂದು ಹೇಳಿದ್ದಾರೆ. ಈ ಮೂಲಕ ತಂಡದಲ್ಲಿ ಅವಕಾಶ ನೀಡದ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
ಸ್ಪೋರ್ಟ್ಸ್‌ಸ್ಟಾರ್ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಮುರಳಿ ವಿಜಯ್, ಬಿಸಿಸಿಐ ಜತೆಗಿನ ತಮ್ಮ ಸಂಬಂಧ ಬಹುತೇಕ ಮುಗಿದಿದೆ. ಹಾಗೂ ವಿದೇಶದಲ್ಲಿ ಆಡುವ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಪರ್ಧಾತ್ಮಕ ಕ್ರಿಕೆಟ್ ಆಡಬೇಕೆಂದು ಬಯಕೆ ನನ್ನಲಿದೆ ಎಂದು ಹೇಳಿದ್ದಾರೆ.
ಮಾಧ್ಯಮದವರು ಸಮಸ್ಯೆ ಬಗೆ ಹರಿಸಬೇಕು
ಭಾರತದಲ್ಲಿ ಕ್ರಿಕೆಟಿಗರಿಗೆ 30 ವರ್ಷ ವಯಸ್ಸಾದ ಬಳಿಕ ಜನರು 80 ವರ್ಷ ವಯಸ್ಸಾದವರಂತೆ ನೋಡುತ್ತಾರೆ. ಒಂದು ಪಂದ್ಯದಲ್ಲಿ ಆಡದಿದ್ದರೂ ಆತನಿಗೆ ವಯಸ್ಸಾಯಿತು ಇನ್ನು ಆತನಿಂದ ಆಡಲು ಕಷ್ಟ ಎಂಬ ಟೀಕೆಗಳು ಬರುತ್ತದೆ. ಇದು ಕೇವಲ ನನ್ನ ಒಬ್ಬನ ವಿಚಾರದಲ್ಲಿ ಈ ಮಾತನ್ನು ಹೇಳಿತ್ತಿಲ್ಲ ಎಲ್ಲ ಕ್ರಿಕೆಟಿಗರಿಗೂ ಈ ಅನುಭವವಾಗಿದೆ. ಆದ್ದರಿಂದ ಈ ವಿಷಯದ ಬಗ್ಗೆ ಮಾಧ್ಯಮದವರು ಹೆಚ್ಚಿನ ಗಮನ ಹರಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮುರಳಿ ವಿಜಯ್ ಮನವಿ ಮಾಡಿದ್ದಾರೆ.
ಅವಕಾಶ ಸಿಕ್ಕರೆ ಶ್ರೇಷ್ಠ ಪ್ರದರ್ಶನ ತೋರುವೆ
ಪ್ರಸ್ತುತ ನನಗೆ ಆಡುವ ಒಂದು ಅವಕಾಶ ನೀಡಿದರೂ, ನಾನು ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ. ಆದರೆ ಅನಿರೀಕ್ಷಿತವಾಗಿ ನನಗೆ ಅವಕಾಶಗಳು ಸಿಗುತ್ತಿಲ್ಲ. ಹಾಗಾಗಿ ಹೊರಗಡೆಯ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದೇನೆ. ಎಂದು ಹೇಳುವ ಮೂಲಕ ಸದ್ಯದಲ್ಲೇ ಭಾರತ ಕ್ರಿಕೆಟ್ಗೆ ವಿದಾಯ ಹೇಳಿ ವಿದೇಶಿ ಲೀಗ್ನಲ್ಲಿ ಆಡುವ ಸೂಚನೆ ನೀಡಿದ್ದಾರೆ.
ಭಾರತ ತಂಡದ ಪರ 61 ಟೆಸ್ಟ್ ಪಂದ್ಯಗಳಾಡಿರುವ ಮುರಳಿ ವಿಜಯ್ 3,982 ರನ್ ಹಾಗೂ 17 ಏಕದಿನ ಪಂದ್ಯಗಳಿಂದ 339 ರನ್ ಗಳಿಸಿದ್ದಾರೆ. 2018ರಲ್ಲಿ ಪರ್ತ್‌ನಲ್ಲಿ ತಮ್ಮ ವೃತ್ತಿ ಜೀವನದ ಕೊನೆಯ ಟೆಸ್ಟ್ ಪಂದ್ಯವಾಡಿದ ಬಳಿಕ ಅವರು ಭಾರತ ತಂಡದ ಪರ ಆಡಿಲ್ಲ.
ಇದನ್ನೂ ಓದಿ | IND VS SL | ಅಂತಿಮ ಏಕದಿನ; ಕ್ಲೀನ್ ಸ್ವೀಪ್ ಮುಖಭಂಗದಿಂದ ಪಾರಾದೀತೇ ಪ್ರವಾಸಿ ಶ್ರಿಲಂಕಾ?