ಭುವನೇಶ್ವರ: ಏಷ್ಯನ್ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಬೀರೇಂದ್ರ ಲಾಕ್ರಾ ವಿರುದ್ದ ಕೊಲೆ ಅರೋಪವೊಂದು ಕೇಳಿ ಬಂದಿದೆ. ಅವರ ಗೆಳೆಯನ ತಂದೆಯೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಭಾರತ ತಂಡದ ಡಿಫೆಂಡರ್ ಆಗಿರುವ ಬೀರೇಂದ್ರ ಅವರು ಇತ್ತೀಚೆಗೆ ತಮ್ಮ ನಿವೃತ್ತಿ ನಿರ್ಧಾರದಿಂದ ಹೊರ ಬಂದು ನಾಯಕತ್ವ ವಹಿಸಿಕೊಂಡಿದ್ದರು. ಅಲ್ಲದೆ, ತಂಡ ನಾಯಕತ್ವ ವಹಿಸಿದ್ದ ಏಷ್ಯನ್ ಕಪ್‌ನಲ್ಲಿ ಭಾರತ ಕಂಚಿನ ಪದಕ ಗೆದ್ದಿತ್ತು.
ಈ ನಡುವೆ ಅವರ ಗೆಳೆಯ ಆನಂದ್ ಕುಮಾರ್ ಟೊಪ್ಪೊ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಆನಂದ್ ಅವರ ತಂದೆ, ತಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬೀರೇಂದ್ರ ಲಾಕ್ರಾ ಅವರ ಪಿತೂರಿಯಿಂದ ಮೃತಪಟ್ಟಿದ್ದಾರೆ. ಹೀಗಾಗಿ ಮಗನ ಸಾವಿಗೆ ಲಾಕ್ರಾ ಅವರೇ ಹೊಣೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೀರೆಂದ್ರ ಲಾಕ್ರಾ, ಮಂಜೀತ್ ಟೇಟೆ ಹಾಗೂ ತಮ್ಮ ಪುತ್ರ ಆನಂದ್ ಗೆಳೆಯರು. ಇದೀಗ ಅವರ ನಡುವೆ ವೈಮನಸ್ಸು ಏರ್ಪಟ್ಟಿದೆ. ತಮ್ಮ ಪುತ್ರ ಮದುವೆಯಾದ ಎರಡು ವಾರಗಳ ಬಳಿಕ ಫ್ಲಾಟ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಮಗ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಲಾಕ್ರಾ ಅವರ ಒತ್ತಡವೇ ಕಾರಣ ಎಂದು ಆರೋಪಿಸಿದ್ದಾರೆ.
“ಬೀರೇಂದ್ರ ಲಾಕ್ರಾ ಅವರು ಒಡಿಶಾ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಹಂತದ ಅಧಿಕಾರಿಯಾಗಿದ್ದಾರೆ. ಹೀಗಾಗಿ ತಮ್ಮ ಪ್ರಭಾವ ಬಳಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Century ಬಾಯ್ ಹೂಡಾ ಬೆನ್ನು ತಟ್ಟಿದ ಹಿರಿಯ ಕ್ರಿಕೆಟಿಗರು ಯಾರ‍್ಯಾರು?