ಬೆಂಗಳೂರು : ತಮಿಳುನಾಡಿನ ಆರಂಭಿಕ ಬ್ಯಾಟರ್ ನಾರಾಯಣ್ ಜಗದೀಶನ್ ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಹಾಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅವರು ಅರುಣಾಚಲ ಪ್ರದೇಶ ತಂಡದ ವಿರುದ್ಧದ ಪಂದ್ಯದಲ್ಲಿ ಅವರು ಹಲವು ದಾಖಲೆಗಳನ್ನು ತಮ್ಮೆಸರಿಗೆ ಬರೆಸಿಕೊಂಡಿದ್ದಾರೆ.
ಜಗದೀಶನ್ ಅವರು ೧೪೧ ಎಸೆತಗಳಿಗೆ ೨೭೭ ರನ್ ಬಾರಿಸಿದ್ದು ಇದು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ದಾಖಲಾಗಿರುವ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಈ ಮೂಲಕ ಅವರು ೨೦೦೨ರಲ್ಲಿ ಇಂಗ್ಲೆಂಡ್‌ನ surrey ತಂಡದ ಅಲಿಸ್ಟರ್ ಬ್ರೌನ್ ಬಾರಿಸಿದ್ದ ೨೬೮ ರನ್‌ಗಳ ದಾಖಲೆಯನ್ನು ಮುರಿದಿದ್ದಾರೆ. ಇದೇ ವೇಳೆ ಅವರು ಏಕ ದಿನ ಮಾದರಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ೨೦೧೪ರಲ್ಲಿ ಸೃಷ್ಟಿಸಿದ್ದ ೨೬೪ ರನ್‌ಗಳ ದಾಖಲೆಯನ್ನೂ ಪುಡಿಗಟ್ಟಿದ್ದಾರೆ.
ಇದೇ ವೇಳೆ ಅವರು ಲಿಸ್ಟ್ ಎ ಕ್ರಿಕೆಟ್ ಪಂದ್ಯದಲ್ಲಿ ಸತತವಾಗಿ ಐದು ಶತಕಗಳನ್ನು ದಾಖಲಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಇದರೊಂದಿಗೆ ಸತತವಾಗಿ ನಾಲ್ಕು ಶತಕಗಳನ್ನು ಬಾರಿಸಿರುವ ಕುಮಾರ ಸಂಗಕ್ಕಾರ, ಅಲ್ವಿರೊ ಪೀಟರ್ಸನ್, ದೇವದತ್ ಪಡಿಕ್ಕಲ್ ಅವರ ದಾಖಲೆ ಮುರಿದಿದ್ದಾರೆ.
೨ ವಿಕೆಟ್‌ಗಳಿಗೆ ೫೦೬ ರನ್ ಬಾರಿಸಿರುವ ತಮಿಳುನಾಡು ತಂಡ, ಪುರುಷರ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ತಂಡವೊಂದು ಬಾರಿಸಿದ ಗರಿಷ್ಠ ಮೊತ್ತದ ದಾಖಲೆಯನ್ನೂ ಬರೆದಿದೆ. ಈ ಹಿಂದೆ ಇಂಗ್ಲೆಂಡ್ ತಂಡ ಐರ್ಲೆಂಡ್ ವಿರುದ್ಧ ೪ ವಿಕೆಟ್‌ಗಳಿಗೆ ೪೯೮ ರನ್ ಬಾರಿಸಿತ್ತು.
ಜಗದೀಶನ್ ಅವರು ಅರುಣಾಚಲ ಪ್ರದೇಶ ತಂಡದ ವಿರುದ್ಧ ೧೧೪ ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದಾರೆ. ಇದು ಕೂಡ ಜಂಟಿ ದಾಖಲೆಯಾಗಿದೆ. ಟ್ರಾವಿಡ್ ಹೆಡ್ ಈ ಹಿಂದೆ ೧೧೪ ಎಸೆತಗಳಲ್ಲಿಯೇ ೨೦೦ ರನ್ ಬಾರಿಸಿದ್ದರು.
ಜಗದೀಶನ್ ಅವರು ೧೪೧ ಎಸೆತಗಳಲ್ಲಿ ೧೯೬.೪ ಸ್ಟ್ರೈಕ್‌ರೇಟ್‌ನಂತೆ ೨೭೭ ರನ್ ಬಾರಿಸಿದ್ದಾರೆ. ಇದು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಬ್ಯಾಟರ್ ಒಬ್ಬರ ಗರಿಷ್ಠ ಸ್ಟ್ರೈಕ್ ರೇಟ್ ಎನಿಸಿಕೊಂಡಿದೆ. ಟ್ರಾವಿಡ್ ಹೆಡ್ ೧೮೧.೧ ಸ್ಟ್ರೈಕ್‌ರೇಟ್‌ನಂತೆ ೧೨೭ ಎಸೆತಗಳಿಗೆ ೨೩೦ ರನ್ ಬಾರಿಸಿದ್ದರು.
ಜಗದೀಶನ್ ಅವರು ಇದುವರೆಗೆ ಐದು ಶತಕಗಳನ್ನು ಬಾರಿಸಿದ್ದು, ವಿಜಯ್ ಹಜಾರೆ ಟ್ರೋಫಿಯ ಆವೃತ್ತಿಯೊಂದರಲ್ಲಿ ಬ್ಯಾಟರ್ ಒಬ್ಬರು ಬಾರಿಸಿದ ಅತಿ ಹೆಚ್ಚು ಶತಕಗಳಾಗಿವೆ. ವಿರಾಟ್‌ಕೊಹ್ಲಿ, ದೇವದತ್ ಪಡಿಕ್ಕಲ್, ಪೃಥ್ವಿ ಶಾ, ಋತುರಾಜ್ ಗಾಯಕ್ವಾಡ್ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ.
ಜಗದೀಶನ್ ಅವರು ತಮ್ಮ ಇನಿಂಗ್ಸ್‌ನಲ್ಲಿ ೧೫ ಶತಕ ಬಾರಿಸಿದ್ದು, ವಿಜಯ್ ಹಜಾರೆ ಟ್ರೋಫಿಯಲ್ಲಿ ಬ್ಯಾಟರ್ ಒಬ್ಬರು ಸಿಡಿಸಿದ ಗರಿಷ್ಠ ಸಿಕ್ಸರ್ ಎನಿಸಿದೆ. ಯಶಸ್ವಿ ಜೈಸ್ವಾಲ್ ಈ ಹಿಂದೆ ೧೨ ಸಿಕ್ಸರ್ ಬಾರಿಸಿದ್ದರು.
ಇದನ್ನೂ ಓದಿ | Vijay Hazare Trophy | ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ ತಮಿಳುನಾಡಿನ ಬ್ಯಾಟರ್