Site icon Vistara News

Ishan Kishan: ‘ತಂತ್ರಗಳಿಗೆ ಅವಕಾಶವಿಲ್ಲ’; ಇಶಾನ್​ ಕಿಶನ್​ಗೆ ಎಚ್ಚರಿಕೆ ನೀಡಿದ ಜಯ್​ ಶಾ

Ishan kishan

ಮುಂಬಯಿ: ಟೀಮ್​ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್(Ishan Kishan) ರಣಜಿ ಟ್ರೋಫಿಯನ್ನು ಆಡದಿರುವ ನಿರ್ಧಾರಕ್ಕಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ಸಮಯದಲ್ಲಿ ಇಶಾನ್ ತಮ್ಮ ಮಾನಸಿಕ ಯೋಗಕ್ಷೇಮಕ್ಕಾಗಿ ವಿರಾಮವನ್ನು ಬಯಸಿ, ಬಳಿಕ ಅವರು ರಾಷ್ಟ್ರೀಯ ತಂಡಕ್ಕೆ ಹಿಂತಿರುಗಲಿಲ್ಲ. ಅವರು ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗೆ ತರಬೇತಿ ನಡೆಸುತ್ತಿದ್ದಾರೆ. ರಾಷ್ಟ್ರೀಯ ತಂಡದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಅವರು ಇಶಾನ್ ಕಿಶನ್ ಕ್ರಿಕೆಟ್ ಆಡಿ ಬರಬೇಕು ಎಂಬ ಮಾತಿನ ಹೊರತಾಗಿಯೂ ಅವರು ರಣಜಿ ಟ್ರೋಫಿ ಪಂದ್ಯಗಳನ್ನು ಕಳೆದುಕೊಳ್ಳುವುದನ್ನು ಮುಂದುವರೆಸಿದ್ದಾರೆ. ಇದೀಗ ಬಿಸಿಸಿಐ(BCCI) ಕಾರ್ಯದರ್ಶಿ ಜಯ್​ ಶಾ(Jay Shah) ಖಡಕ್​ ಎಚ್ಚರಿಕೆ ನೀಡಿದ್ದಾರೆ.

“ಆಯ್ಕೆ ಸಮಿತಿ ಅಧ್ಯಕ್ಷರು, ಕೋಚ್ ಮತ್ತು ನಾಯಕ ಒಬ್ಬ ಆಟಗಾರ ರೆಡ್ ಬಾಲ್ ಕ್ರಿಕೆಟ್ ಆಡಲು ಬಯಸಿದರೆ ನೀವು ಆಡಲೇಬೇಕು. ಇಲ್ಲಿ ಯಾವುದೇ ತಂತ್ರಗಳಿಗೆ ಅವಕಾಶವಿಲ್ಲ(‘ನಖ್ರೆ ನಹಿ ಚಲೇಂಗೆ’). ಮತ್ತು ಇಶಾನ್ ಕಿಶನ್ ಅವರಿಗೆ ಸಂಬಂಧಿಸಿದಂತೆ, ಅವರು ಕಿರಿಯರಾಗಿದ್ದಾರೆ, ನಾನು ಅವರ ಬಗ್ಗೆ ನಿರ್ದಿಷ್ಟವಾಗಿ ಹೇಳುತ್ತಿಲ್ಲ ಏಕೆಂದರೆ ಇದು ಎಲ್ಲ ಆಟಗಾರರಿಗೆ ಏಕರೂಪವಾಗಿ ಅನ್ವಯಿಸುತ್ತದೆ” ಎಂದು ಜಯ್​ ಶಾ ಹೇಳಿದ್ದಾರೆ.

ಟೀಮ್​ ಇಂಡಿಯಾ ಪರ ಅವಕಾಶ ವಂಚಿತರಾಗಿದ್ದರೂ ಕೂಡ ಹಿರಿಯ ಆಟಗಾರರಾದ ಚೇತೇಶ್ವರ ಪೂಜಾರ, ಅಜಿಂಕ್ಯ ಸೇರಿ ಹಲವು ಆಟಗಾರರು ಈಗಲೂ ಕೂಡ ದೇಶೀಯ ಕ್ರಿಕೆಟ್​ ಆಡುತ್ತಿದ್ದಾರೆ. ಹೀಗಿರುವಾಗ ಯುವ ಆಟಗಾರರಿಗೆ ಆಡಲು ಏನು ಸಮಸ್ಯೆ ಎಂದು ಬಿಸಿಸಿಐ ಕಳೆದ ವಾರ ಪ್ರಶ್ನೆ ಮಾಡಿತ್ತು. ಅಲ್ಲದೆ ದೇಶೀಯ ಕ್ರಿಕೆಟ್​ ಆಡಿದರೆ ಮಾತ್ರ ಐಪಿಎಲ್​ ಟೂರ್ನಿಯಲ್ಲಿ ಆಡುವ ಅವಕಾಶ ಎಂದು ಹೇಳಿತ್ತು.

ಇದನ್ನೂ ಓದಿ Ishan Kishan: ಕೊನೆಗೂ ಆಲಸ್ಯ ಬಿಟ್ಟು ​ಕ್ರಿಕೆಟ್​ ಅಭ್ಯಾಸ ಆರಂಭಿಸಿದ ಇಶಾನ್​ ಕಿಶನ್​

ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದಿದ್ದ ಇಶಾನ್ ಕಿಶನ್(Ishan Kishan)​ ಇನ್ನೇನು ಸರಣಿ ಆರಂಭಕ್ಕೆ ಒಂದೆರಡು ದಿನಗಳು ಬಾಕಿ ಇರುವಾಗ ಮಾನಸಿಕ ಸಮಸ್ಯೆಯ ವಿಷಯವನ್ನು ಮುನ್ನೆಲೆಗೆ ತಂದು ಈ ಸರಣಿಯಿಂದ ಹಿಂದೆ ಸರಿದಿದ್ದರು. ರಜೆ ಪಡೆದಿದ್ದ ಇಶಾನ್​ ನೆರವಾಗಿ ಭಾರತಕ್ಕೆ ಬರುವ ಬದಲು ದುಬೈನಲ್ಲಿ ಇಳಿದು ಪಾರ್ಟಿಗೆ ಹೋಗಿದ್ದರು. ಬಳಿಕ ದ್ರಾವಿಡ್​ ಅವರು ರಣಜಿ ಆಡುವಂತೆ ಸೂಚನೆ ನೀಡಿದರೂ ಕೂಡ ಇದನ್ನು ಇಶಾನ್​ ಕಡೆಗಣಿಸಿದ್ದರು. ಹೀಗಾಗಿ ಶಿಸ್ತು ಕ್ರಮದ ಉಲ್ಲಂಘನೆಯಾಗಿರುವ ಕಾರಣ ಅವರನ್ನು ತಂಡಕ್ಕೆ ಪರಿಗಣಿಸಿಲ್ಲ ಎಂಬುದಾಗಿ ವರದಿಯಾಗಿತ್ತು.

ಈ ಋತುವಿನಲ್ಲಿ, ಫೆಬ್ರವರಿ 16ರಿಂದ ಜೆಮ್ಷೆಡ್ಪುರದಲ್ಲಿ ರಾಜಸ್ಥಾನ ವಿರುದ್ಧ ಜಾರ್ಖಂಡ್ನ ಉಳಿದ ಪಂದ್ಯವನ್ನು ಆಡಲು ಕಿಶನ್​ಗೆ ಸೂಚಿಸಲಾಗಿದೆ. ಮುಂದಿನ ವರ್ಷದಿಂದ ಐಪಿಎಲ್​ಗೆ ಅರ್ಹತೆ ಪಡೆಯಲು ಪ್ರತಿ ಋತುವಿನ ಮೊದಲು ಬೆರಳೆಣಿಕೆಯಷ್ಟು ಪಂದ್ಯಗಳನ್ನು ಆಡುವಂತೆ ಬಿಸಿಸಿಐ ಆಟಗಾರರಿಗೆ ನಿರ್ದೇಶಿಸಬಹುದು ಎಂದು ಮಂಡಳಿಯ ಮೂಲಗಳು ತಿಳಿಸಿವೆ.

ಇಶಾನ್ ಅವರ 1 ಕೋಟಿ ರೂ.ಗಳ ಗ್ರೇಡ್ ಸಿ ಕೇಂದ್ರ ಒಪ್ಪಂದದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿದುಬಂದಿದೆ. “ಕೇಂದ್ರ ಒಪ್ಪಂದಗಳ ಬಗ್ಗೆ ಇಲ್ಲಿಯವರೆಗೆ ಯಾವುದೇ ಚರ್ಚೆಗಳು ನಡೆದಿಲ್ಲ” ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ. ಇಶಾನ್ ತಮ್ಮ ರಾಜ್ಯ ತಂಡವಾದ ಜಾರ್ಖಂಡ್ ಪರ ಆಡುತ್ತಾರೆಯೇ ಅಥವಾ ಅವರು ಐಪಿಎಲ್​ಗೆ ಪುನರಾಗಮನ ಮಾಡುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.

Exit mobile version