ಅಹಮದಾಬಾದ್ : ಅತ್ಯಾಧುನಿಕ ಸೌಲಭ್ಯಗಳು ಸೇರಿದಂತೆ ನಾನಾ ವೈಶಿಷ್ಟ್ಯಗಳನ್ನು ಹೊಂದಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ ಮತ್ತೊಂದು ವಿಶೇಷ ದಾಖಲೆ ಸೃಷ್ಟಿಸಿದೆ. ಈ ಕ್ರೀಡಾಂಗಣವೀಗ ವಿಶ್ವದ ಅತ್ಯಂತ ದೊಡ್ಡ ಕ್ರೀಡಾ ಕಾಂಪ್ಲೆಕ್ಸ್ ಎಂಬ ಗಿನ್ನೆಸ್ ದಾಖಲೆ ಬರೆದಿದೆ. ಇದು ಸಾಧ್ಯವಾಗಿದ್ದು ಕಳೆದ ಅವೃತ್ತಿಯ ಐಪಿಎಲ್ (IPL 2022) ಪಂದ್ಯದ ಮೂಲಕ.
ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳ ನಡುವಿನ ಐಪಿಎಲ್ ಫೈನಲ್ ಪಂದ್ಯ ೨೦೨೨ರ ಮೇ ೨೯ರಂದು ನಡೆದಿತ್ತು. ಆ ಪಂದ್ಯವನ್ನು ವೀಕ್ಷಿಸಲು ಒಟ್ಟು 101,566 ಪ್ರೇಕ್ಷಕರು ಬಂದಿದ್ದರು. ಈ ಮೂಲಕ ಏಕಕಾಲಕ್ಕೆ ಅತಿ ಹೆಚ್ದು ಕ್ರೀಡಾಪ್ರೇಮಿಗಳಿಗೆ ಪ್ರವೇಶವಕಾಶ ಕಲ್ಪಿಸಿಕೊಟ್ಟ ಸ್ಟೇಡಿಯಮ್ ಎಂಬ ವಿಶ್ವ ದಾಖಲೆಯನ್ನು ಮಾಡಿದೆ.
ಗಿನ್ನೆಸ್ ದಾಖಲೆ ಮಾಡಿರುವ ವಿಚಾರವನ್ನು ಬಿಸಿಸಿಐ ಅಧಿಕೃತ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅದನ್ನು ರಿ ಟ್ವೀಟ್ ಮಾಡಿಕೊಂಡ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, “ಕಳೆದ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದ ವೇಳೆ ಒಟ್ಟು 101,566 ಪ್ರೇಕ್ಷಕರಿಗೆ ಕ್ರಿಕೆಟ್ ವೀಕ್ಷಣೆಗೆ ಅವಕಾಶ ಮಾಡಿಕೊಡುವ ಮೂಲಕ ನರೇಂದ್ರ ಮೋದಿ ಸ್ಟೇಡಿಯಮ್ ಗಿನ್ನೆಸ್ ದಾಖಲೆ ಮಾಡಿದ್ದು, ಆ ಸಾಧನೆಯ ಫಲಕವನ್ನು ಸ್ವೀಕರಿಸಲು ಹೆಮ್ಮೆಯಾಗುತ್ತಿದೆ. ಇದನ್ನು ಸಾಧ್ಯವಾಗಿಸಿದ ಕ್ರಿಕೆಟ್ ಅಭಿಮಾನಿಗಳಿಗೆ ಧನ್ಯವಾದಗಳು,” ಎಂದು ಬರೆದುಕೊಂಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಬಳಗ ನಿಗದಿತ ೨೦ ಓವರ್‌ಗಳಲ್ಲಿ ೧೩೦ ರನ್ ಪೇರಿಸಿದರೆ, ಗುಜರಾತ್ ಟೈಟಾನ್ಸ್ ತಂಡ ಇನ್ನೂ ೧೧ ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿ ಗೆಲುವು ಸಾಧಿಸಿತ್ತು.
ಇದನ್ನೂ ಓದಿ | Jay Shah | ಐಸಿಸಿ ಕ್ರಿಕೆಟ್ ಸಮಿತಿಯಲ್ಲೂ ಜಯ್ ಶಾ ದರ್ಬಾರು; ಹಣಕಾಸು ಸಮಿತಿ ಮುಖ್ಯಸ್ಥರಾಗಿ ಆಯ್ಕೆ