ಕೊಲಂಬೊ: ಭಾರತ ವಿರುದ್ದ ಸೂಪರ್-4 ಪಂದ್ಯದ ವೇಳೆ ಗಾಯಗೊಂಡು ಪಂದ್ಯದಿಂದ ಹೊರಗುಳಿದಿದ್ದ ಪಾಕಿಸ್ತಾನ ಯುವ ವೇಗಿ ನಸೀಮ್ ಶಾ(Naseem Shah) ಏಷ್ಯಾಕಪ್(Asia Cup 2023) ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮುಂದಿನ ಪಂದ್ಯಗಳಿಗೆ ನಸೀಮ್ ಅಲಭ್ಯರಾಗಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.
ಸೋಮವಾರ ಭಾರತ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ನಡೆಸುವ ವೇಳೆ ನಸೀಮ್ ಶಾ ಭುಜದ ನೋವಿಗೆ ತುತ್ತಾಗಿದ್ದರು. ಬಳಿಕ ಅವರು ಮೈದಾನ ತೊರೆದು ಪಂದ್ಯವನ್ನು ಆಡಿರಲಿಲ್ಲ. ಇದೀಗ ಅವರು ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಅಲಭ್ಯತೆ ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಪಾಕಿಸ್ತಾನ ತಂಡ ಫೈನಲ್ ಪ್ರವೇಶಿಸಬೇಕಿದ್ದರೆ. ಗುರುವಾರ ನಡೆಯುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗೆಲ್ಲಲ್ಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಈ ಮಧ್ಯೆ ಸ್ಟಾರ್ ಆಟಗಾರ ಟೂರ್ನಿಯಿಂದ ಹೊರಬಿದ್ದಿರುವುದು ತಂಡಕ್ಕೆ ಇನ್ನಷ್ಟು ದೊಡ್ಡ ಹೊಡೆದ ನೀಡಿದೆ.
ಜಮಾನ್ ಖಾನ್ ಬದಲಿ ಆಟಗಾರ
ಮತ್ತೊಂದೆಡೆ ಹ್ಯಾರಿಸ್ ರವೂಫ್ ಕೂಡ ಗಾಯದಿಂದಾಗಿ ಭಾರತ ವಿರುದ್ಧದ ಪಂದ್ಯವನ್ನು ಸಂಪೂರ್ಣವಾಗಿ ಆಡಿರಲಿಲ್ಲ. ಅವರು ಕೂಡ ಫಿಟ್ ಆಗಿದ್ದಾರೆಯೇ ಎಂಬ ಖಚಿತತೆಯೂ ಇಲ್ಲದಿರುವುದು ಪಾಕ್ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಟೂರ್ನಿಯಿಂದ ಹೊರಬಿದ್ದ ನಸೀಮ್ ಶಾ ಬದಲಿಗೆ ಜಮಾನ್ ಖಾನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ವಿಶ್ರಾಂತಿ
ವಿಶ್ವಕಪ್ ಟೂರ್ನಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ನಸೀಮ್ ಶಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅವರ ಆರೋಗ್ಯದ ಕುರಿತಂತೆ ವೈದ್ಯಕೀಯ ಸಿಬ್ಬಂದಿ ತೀವ್ರ ನಿಗಾ ಇಟ್ಟಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನಸೀಮ್ ಶಾ ಇನ್ಸ್ವಿಂಗ್ ಮತ್ತು ಔಟ್ ಸ್ವಿಂಗ್ ಮೂಲಕ ಬ್ಯಾಟರ್ಗಳಿಗೆ ಕಾಡುತ್ತಿದ್ದರು. ಅದರಲ್ಲೂ ಭಾರತ ವಿರುದ್ಧ ರೋಹಿತ್ ಶರ್ಮ ಅವರಿಗೆ ಮೇಡನ್ ಓವರ್ ಎಸೆದು ಮಿಂಚಿದ್ದರು. 20 ವರ್ಷದ ನಸೀಮ್ ಶಾ ಪಾಕಿಸ್ತಾನ ಪರ 14 ಏಕದಿನ ಪಂದ್ಯವನ್ನು ಆಡಿ 32 ವಿಕೆಟ್ ಪಡೆದಿದ್ದಾರೆ. 33 ಕ್ಕೆ 5 ವಿಕೆಟ್ ಪಡೆದದ್ದು ಗರಿಷ್ಠ ಸಾಧನೆಯಾಗಿದೆ. 19 ಟಿ20 ಪಂದ್ಯ ಆಡಿ 15 ವಿಕೆಟ್ ಪಡೆದಿದ್ದಾರೆ.
JUST IN: Naseem Shah has been ruled out of the remainder of #AsiaCup2023 with a shoulder injury – Pakistan have called up Zaman Khan as his replacement 🇵🇰 pic.twitter.com/GShL8iV8v3
— ESPNcricinfo (@ESPNcricinfo) September 13, 2023
ಪಾಕಿಸ್ತಾನ ಹಾಗೂ ಶ್ರೀಲಂಕಾ ಪಂದ್ಯದ ವೇಳೆ ಗೆಲುವು ಸಾಧಿಸುವ ತಂಡವು ಯಾವುದೇ ಅಡೆತಡೆ ಇಲ್ಲದೆ ಸುಲಭವಾಗಿ ಫೈನಲ್ ತಲುಪಲಿದೆ. ರನ್‌ರೇಟ್ ಲೆಕ್ಕಾಚಾರದ ಭಿಡೆಯೇ ಇಲ್ಲದೆ ಗೆಲ್ಲುವ ತಂಡವು ಫೈನಲ್‌ಗೆ ಲಗ್ಗೆ ಇಡಲಿದೆ. ಪಾಕ್ ಹಾಗೂ ಶ್ರೀಲಂಕಾ ತಲಾ ಎರಡು ಪಂದ್ಯ ಆಡಿದ್ದು, ತಲಾ ಒಂದರಲ್ಲಿ ಸೋತು 2 ಅಂಕ ಗಳಿಸಿವೆ. ಹಾಗಾಗಿ, ಗೆದ್ದ ತಂಡವು 4 ಅಂಕ ಪಡೆದು ಫೈನಲ್ ಕದನಕ್ಕೆ ಅರ್ಹತೆ ಪಡೆಯಲಿದೆ.
ಇದನ್ನೂ ಓದಿ IND vs PAK: ಭಾರತ ಫಿಕ್ಸಿಂಗ್ ಮಾಡುತ್ತಿದೆ ಎಂದ ನೆಟ್ಟಿಗರಿಗೆ ಜಾಡಿಸಿದ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್
ಪಾಕ್ ಪರಿಷ್ಕೃತ ತಂಡ
ಬಾಬರ್ ಅಜಂ (ನಾಯಕ), ಶಾದಾಬ್ ಖಾನ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಸೌದ್ ಶಕೀಲ್ (ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಮಾತ್ರ) ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರಾವುಫ್, ಶಾಹೀನ್ ಅಫ್ರಿದಿ, ತಯ್ಯಬ್ ತಾಹಿರ್, ಮೊಹಮ್ಮದ್ ಹ್ಯಾರಿಸ್, ಫಹೀಮ್ ಅಶ್ರಫ್, ಮೊಹಮ್ಮದ್ ವಾಸಿಮ್, ಜಮಾನ್ ಖಾನ್.