ಕರಾಚಿ : ಎದೆ ನೋವಿನಿಂದ ಆಸ್ಪತ್ರೆ ಸೇರಿರುವ ಪಾಕಿಸ್ತಾನ ತಂಡದ ಬೌಲರ್ ನಾಸಿಮ್ ಶಾ ಅವರಿಗೆ ನ್ಯುಮೋನಿಯಾ ಜತೆಗೆ ಕೊರೊನಾ ಸೋಂಕು ಕೂಡ ತಗುಲಿದೆ ಎಂಬುದಾಗಿ ವರದಿಯಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಪಾಕಿಸ್ತಾನ ತಂಡದ ಸದಸ್ಯರಾಗಿದ್ದ ಅವರು ಏಕಾಏಕಿ ಎದೆನೋವು ಹಾಗೂ ಜ್ವರದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆಯಲ್ಲಿ ಅವರಿಗೆ ನ್ಯುಮೋನಿಯಾ ಬಂದಿರುವುದು ಪತ್ತೆಯಾಗಿತ್ತು. ಇದೀಗ ಅವರಿಗೆ ಕೊರೊನಾ ಸೋಂಕು ಕೂಡ ಬಂದಿದೆ ಎನ್ನಲಾಗಿದೆ.
“ನಾಸಿಮ್ ಶಾ ಅವರು ನ್ಯುಮೋನಿಯಾ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಅವರು ವಾಸಿಯಾಗಿದ್ದಾರೆ. ಅವರು ಹೋಟೆಲ್‌ಗೆ ವಾಪಸಾಗಿದ್ದು, ಕೋವಿಡ್-೧೯ ಮಾರ್ಗಸೂಚಿಯನ್ನು ಪಾಲಿಸಲಿದ್ದಾರೆ ಎಂಬುದಾಗಿ ಹೇಳಲಾಗಿದೆ.
ಪಾಕಿಸ್ತಾನ ತಂಡ ಮುಂದಿನ ಸೋಮವಾರ ನ್ಯೂಜಿಲೆಂಡ್‌ಗೆ ತೆರಳಲಿದ್ದು, ಅಲ್ಲಿಗೆ ತ್ರಿಕೋನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಆದರೆ ಆ ತಂಡದಲ್ಲಿ ನಾಸಿಮ್ ಶಾ ಪಾಲ್ಗೊಳ್ಳಲಿದ್ದಾರಾ ಎಂಬುದನ್ನು ಪಿಸಿಬಿ ಖಾತ್ರಿಪಡಿಸಿಲ್ಲ.
ಪಾಕಿಸ್ತಾನ ತಂಡ ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಏಳು ಪಂದ್ಯಗಳ ಸರಣಿಯಲ್ಲಿ ೩-೨ ಮುನ್ನಡೆ ಹೊಂದಿದೆ. ಶುಕ್ರವಾರ ಹಾಗೂ ಭಾನುವಾರ ಉಳಿದೆರಡು ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ | Pak vs Eng | ಸರಣಿಯ ನಡುವೆ ಎದೆ ನೋವು ಉಂಟಾಗಿ ಅಸ್ವಸ್ಥಗೊಂಡ ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲರ್