ಮುಂಬಯಿ: ಹಾರ್ದಿಕ್ ಪಾಂಡ್ಯ(Hardik Pandya) ಮತ್ತು ನತಾಸಾ ಸ್ಟಾಂಕೋವಿಕ್(Nataša Stanković) ದಂಪತಿಗಳ ವಿಚ್ಛೇದನದ ಬಗ್ಗೆ ನಡೆಯುತ್ತಿರುವ ವದಂತಿಗಳ ಮಧ್ಯೆ ಪಾಂಡ್ಯ ಅವರ ಪತ್ನಿ ನತಾಶಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಗ ಅಗಸ್ತ್ಯ ಪಾಂಡ್ಯ ಜತೆಗಿನ ಫೋಟೊಗಳನ್ನು ಹಂಚಿಕೊಂಡು “ಕೆಲವು ಸಂತೋಷದ ಕ್ಷಣಗಳು” ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ಮತ್ತೆ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ನತಾಶ ತನ್ನ ಮಗನೊಂದಿಗೆ ಇರುವ ಮತ್ತು ಕಾರಿನಲ್ಲಿ ಪ್ರಯಾಣಿಸುವ ಸೇರಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ, ಅಗಸ್ತ್ಯ ಜತೆಗೆ ಹಾಯಾಗಿ ನಿದ್ದೆ ಮಾಡುತ್ತಿರುವ ಫೋಟೊವನ್ನು ಕಾಣಬಹುದು. 2ನೇ ಫೋಟೊದಲ್ಲಿ ಲಿಫ್ಟ್‌ನಲ್ಲಿ ಕನ್ನಡಿ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವು, ಮತ್ತೊಂದು ಫೋಟೋದಲ್ಲಿ ತಮ್ಮ ಮಗ ಪುಷ್-ಅಪ್ ಮಾಡುತ್ತಿರುವ ವೀಡಿಯೊವನ್ನು ಸಹ ಪೋಸ್ಟ್ ಮಾಡಿದ್ದಾರೆ. ಇದಕ್ಕೆ “ಕೆಲವು ಸಂತೋಷದ ಕ್ಷಣಗಳು” ಎಂದು ಬರೆದಿದ್ದಾರೆ. ಮತ್ತೊಂದೆಡೆ, ಹಾರ್ದಿಕ್ ಪಾಂಡ್ಯ ತಮ್ಮ ಹೊಸ ಹೇರ್ ಕಟ್ಟಿಂಗ್ನ ಫೋಟೊವನ್ನು ತಮ್ಮ ಸ್ಟೋರಿಯಲ್ಲಿ ಹಾಕಿದ್ದಾರೆ. ಇವರಿಬ್ಬರ ಪೋಸ್ಟ್ ನೋಡುವಾಗ ಈ ಜೋಡಿ ಬೇರೆಯಾಗುವುದು ಖಚಿತ ಎಂದು ನೆಟ್ಟಿಗರು ಮತ್ತೆ ಹೇಳತೊಡಗಿದ್ದಾರೆ.
ನತಾಶ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ವಿಚ್ಛೇದನದ ವದಂತಿಗಳು ಕೆಲವು ದಿನಗಳಿಂದ ಭಾರೀ ಚರ್ಚೆಯಾಗುತ್ತಿದೆ. ಆದರೆ, ದಂಪತಿ ಈ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಕಳೆದ ವಾರ ನತಾಶ ಒಂದು ಬಿಳಿ ಬಣ್ಣದ ಬಟ್ಟೆ ತೊಟ್ಟು ಒಂದು ಕಪ್ ಬ್ಲ್ಯಾಕ್ ಚಹಾದ ಫೋಟೊವನ್ನು ಸ್ಟೋರಿಯಲ್ಲಿ ಹಾಕಿದ್ದರು.
ಕೆಲವು ದಿನಗಳ ಹಿಂದೆ ವಿಚ್ಛೇದನದ ಸುದ್ದಿಯ ನಡುವೆ, ನತಾಶಾ ಮೊದಲ ಬಾರಿಗೆ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದರು. ಬಾಲಿವುಡ್ ಉದಯೋನ್ಮುಖ ನಟಿ ದಿಶಾ ಪಟಾನಿ ಅವರ ಬಾಯ್ಫ್ರೆಂಡ್ ಎಂದು ಹೇಳಿಕೊಳ್ಳಲಾಗುತ್ತಿರುವ ವ್ಯಕ್ತಿಯ ಜತೆ ಕಾಣಿಸಿಕೊಂಡಿದ್ದರು. ಈ ವೇಳೆ ನತಾಶಗೆ ಪಾಪರಾಜಿಗಳು ಪಾಂಡ್ಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ನತಾಶ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದರು. ಇದಾದ ಬಳಿಕ ನತಾಶಾ ಅವರು ಯೇಸುವಿನ ಚಿತ್ರವನ್ನು ಹಂಚಿಕೊಂಡಿದ್ದರು. ಯೇಸು ತನ್ನ ಜಾಡನ್ನು ಹಿಂಬಾಲಿಸಿದಾಗ ಕುರಿಮರಿ ಮುಂದಾಳತ್ವ ವಹಿಸುತ್ತಿರುವ ಫೋಟೊ ಇದಾಗಿತ್ತು. ಈ ಫೋಟೊವನ್ನು ಕಂಡಾಗ ಈ ಜೋಡಿ ಶೀಘ್ರದಲ್ಲೇ ದೂರವಾಗುವುದು ಖಚಿತ ಎನ್ನುವಂತಿತ್ತು. ಅಲ್ಲದೆ ವಿಚ್ಛೇದನದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ ಶೇ. 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗಬಹುದು ಎಂದು ವರದಿಯಾಗಿತ್ತು.
ಹಾರ್ದಿಕ್ ಮತ್ತು ನತಾಶಾ ಕಳೆದ 2020ರಲ್ಲೇ ರಿಜಿಸ್ಟರ್ ರೀತಿಯಲ್ಲಿ ವಿವಾಹವಾಗಿದ್ದರು. ಮದುವೆಗೂ ಮುನ್ನವೇ ನತಾಶಾ ಅವರು ಗರ್ಭಿಣಿ ಆಗಿದ್ದರು. ಈ ಜೋಡಿಗೆ ಒಬ್ಬ ಪುತ್ರನಿದ್ದಾನೆ. ಈತನ ಹೆಸರು ಅಗಸ್ತ್ಯ. ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್ ಸಂಪ್ರದಾಯದಂತೆ ಹಾರ್ದಿಕ್ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇವರ ವಿವಾಹ ಸಮಾರಂಭದಲ್ಲಿ ಕೊಹ್ಲಿ-ಅನುಷ್ಕಾ, ರಾಹುಲ್-ಅಥಿಯಾ, ರಾಕಿಣಗ್ ಸ್ಟಾರ್ ಯಶ್ ಸೇರಿ ಹಲವು ಗಣ್ಯರೂ ಭಾಗಿಯಾಗಿದ್ದರು.