ಬರ್ಮಿಂಗ್‌ಹ್ಯಾಮ್: ಆ್ಯಶಸ್ ಸರಣಿಯ(Ashes 2023) ಮೊದಲ ಟೆಸ್ಟ್ ಪಂದ್ಯದಲ್ಲಿ ರೋಚಕ ಘಟ್ಟಕ್ಕೆ ಬಂದು ನಿಂತಿದ್ದು ಅಂತಿಮ ದಿನವಾದ ಮಂಗಳವಾರ ಪ್ಯಾಟ್ ಕಮಿನ್ಸ್ ಪಡೆ 174 ರನ್ ಗಳಿಸಿದರೆ ಗೆಲುವು ದಾಖಲಿಸಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಭಾಗವಾಗಿರುವ ಈ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಸ್ಪಿನ್ ಬೌಲರ್ ನಥಾನ್ ಲಿಯೋನ್(Nathan Lyon) ಅವರು ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ(icc test championship) 150 ಪ್ಲಸ್ ವಿಕೆಟ್ ಕಿತ್ತ ವಿಶ್ವದ ಮೊದಲ ಬೌಲರ್ ಎಂಬ ಖ್ಯಾತಿಗೆ ನಥಾನ್ ಲಿಯೋನ್ ಪಾತ್ರರಾಗಿದ್ದಾರೆ. ದ್ವಿತೀಯ ಇನಿಂಗ್ಸ್‌ನಲ್ಲಿ 4 ವಿಕೆಟ್ ಕೆಡವುವ ಮೂಲಕ ಲಿಯೋನ್ ಈ ಮೈಲುಗಲ್ಲು ಸ್ಥಾಪಿಸಿದರು. ಒಟ್ಟಾರೆಯಾಗಿ ಅವರು ಎರಡೂ ಇನಿಂಗ್ಸ್ ಸೇರಿ 8 ವಿಕೆಟ್ ಉರುಳಿಸಿದ್ದಾರೆ. ಸದ್ಯ 35 ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯವನ್ನಾಡಿ 152* ವಿಕೆಟ್ ಪಡೆದಿದ್ದಾರೆ.
ಈ ಸಾಧನೆಯ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ ಅವರು ದ್ವಿತೀಯ ಸ್ಥಾನದಲ್ಲಿದ್ದಾರೆ. ಅವರು 141 ವಿಕೆಟ್ ಪಡೆದಿದ್ದಾರೆ. ಭಾರತ ಸ್ಪಿನ್ನರ್ ಆರ್ ಅಶ್ವಿನ್(Ravichandran Ashwin) ಮೂರನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ 132 ವಿಕೆಟ್ ಕಬಳಿಸಿದ್ದಾರೆ.
ಕೊಹ್ಲಿ, ಸಚಿನ್ ದಾಖಲೆ ಮುರಿದ ರೂಟ್
ಜೋ ರೂಟ್ ಈ ಪಂದ್ಯದಲ್ಲಿ ಸ್ಟಂಪ್ ಔಟ್ ಆಗುವ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್(test records) ಜೀವನದಲ್ಲಿ ಮೊಟ್ಟ ಮೊದಲ ಬಾರಿ ಸ್ಟಂಪ್ ಔಟ್ ಆದರು. ಈ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರ ದಾಖಲೆ ಮುರಿಯುವ ಜತೆಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿಡಿ ವಿಲಿಯರ್ಸ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಮೊದಲ ಇನಿಂಗ್ಸ್‌ನಲ್ಲಿ ಅಜೇಯ ಶತಕ ಬಾರಿಸಿ ಮಿಂಚಿದ್ದ ರೂಟ್ ದ್ವಿತೀಯ ಇನಿಂಗ್ಸ್‌ನಲ್ಲಿ 46 ರನ್ ಗಳಿಸಿ ಸ್ಟಂಪ್ಔಟ್ ಆದರು. ಇದೇ ವೇಳೆ ಅವರು ವಿಶೇಷ ದಾಖಲೆಯೊಂದನ್ನು ಬರೆದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಪಂಪ್ ಔಟ್ ಆಗುವ ಮುನ್ನ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಎರಡನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಜತೆಗೆ ಸಚಿನ್ ಮತ್ತು ಕೊಹ್ಲಿಯ ದಾಖಲೆಯನ್ನು ಮುರಿದರು. ಈ ಸಾಧಕರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಶಿವನಾರಯಣ್ ಚಂದ್ರಪಾಲ್ ಅಗ್ರ ಸ್ಥಾನದಲ್ಲಿದ್ದಾರೆ.
A brilliant start to the #Ashes for Nathan Lyon 👏
— ICC (@ICC) June 20, 2023
More ➡️ https://t.co/6gYNqs50uz pic.twitter.com/nYAIN0jeY7
ಕೊಹ್ಲಿ, ವಿಲಿಯರ್ಸ್ ದಾಖಲೆ ಸರಿಗಟ್ಟಿದ ರೂಟ್
ಎರಡು ಮಾದರಿಯ ಕ್ರಿಕೆಟ್‌ನಲ್ಲಿ 50ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಗಳಿಸಿದ ಮೂರನೇ ಬ್ಯಾಟರ್ ಎಂಬ ಹಿರಿಮೆಗೂ ರೂಟ್ ಪಾತ್ರರಾಗಿದ್ದಾರೆ. ಆ ಮೂಲಕ ಎಬಿಡಿ ವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ರೂಟ್ ಸರಿಗಟ್ಟಿದ್ದಾರೆ.