ನವದೆಹಲಿ: ಬುಧವಾರ ನಡೆಯುವ ಭಾರತ ಮತ್ತು ಅಫಘಾನಿಸ್ತಾನ(India vs Afghanistan) ನಡುವಣ ಪಂದ್ಯವನ್ನು ಬ್ಯಾಟಲ್ ಆಫ್ ಕೊಹ್ಲಿ vs ನವೀನ್ ಉಲ್ ಹಕ್ ಎಂದೇ ಬಣಿಸಲಾಗಿದೆ. ಇದಕ್ಕೆ ಕಾರಣ ಉಭಯ ಆಟಗಾರರು ಈ ಬಾರಿಯ ಐಪಿಎಲ್ನಲ್ಲಿ ಕಿತ್ತಾಟ ನಡೆಸಿದ್ದು. ಇದೀಗ ಇದರ ಮುಂದುವರಿದ ಭಾಗ ವಿಶ್ವಕಪ್ನಲ್ಲಿಯೂ ಕಾಣಸಿಗಲಿದೆ. ಈ ಮನರಂಜನೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.
ನವೀನ್ ಉಲ್ ಹಕ್(Naveen-ul-Haq) 16ನೇ ಆವೃತ್ತಿಯ ಐಪಿಎಲ್ ವೇಳೆ ವಿರಾಟ್ ಕೊಹ್ಲಿ(Naveen-ul-Haq and virat kohli) ಜತೆ ಕಿರಿಕ್ ಮಾಡಿದ್ದರು. ಇದಕ್ಕೆ ಗಂಭೀರ್ ಕೂಡ ಸಾಥ್ ನೀಡಿದ್ದರು. ಬಳಿಕ ನವೀನ್ ಅವರು ಕೊಹ್ಲಿ(virat kohli) ಔಟಾದಾಗಲೆಲ್ಲ ಟ್ವೀಟರ್ನಲ್ಲಿ ಕೆಣಕುತ್ತಿದ್ದರು. ಇದು ಕೊಹ್ಲಿ ಅಭಿಮಾನಿಗಳನ್ನು ಕೆರಳುವಂತೆ ಮಾಡಿತ್ತು. ಆ ಬಳಿಕ ನವೀನ್ ಯಾವುದೇ ಪಂದ್ಯ ಆಡಲಿಳಿದರೂ ಆಗ ಕೊಹ್ಲಿ ಅಭಿಮಾನಿಗಳು ಜೋರಾಗಿ ಕೊಹ್ಲಿಯ ಹೆಸರನ್ನು ಕೂಗುವ ಮೂಲಕ ನವೀನ್ಗೆ ಕಾಟ ಕೊಡಲಾರಂಭಿಸಿದ್ದಾರೆ.
ಶನಿವಾರ ಧರ್ಮಶಾಲದಲ್ಲಿ ನಡೆದಿದ್ದ ವಿಶ್ವಕಪ್ನ(icc world cup 2023) ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ನವೀನ್ ಉಲ್ ಹಕ್ ಫೀಲ್ಡಿಂಗ್ ನಡೆಸುತ್ತಿದ್ದ ವೇಳೆ ಗ್ಯಾಲರಿಯಲ್ಲಿದ್ದ ಕೊಹ್ಲಿ ಅಭಿಮಾನಿಗಳು ಕೊಹ್ಲಿ..ಕೊಹ್ಲಿ ಎಂದು ಜೋರಾಗಿ ಕೂಗುವ ಮೂಲಕ ನವೀನ್ಗೆ ಕಾಡಿದ್ದರು. ಈ ವಿಡಿಯೊ ವೈರಲ್ ಆಗಿತ್ತು. ಇದೀಗ ಭಾರತ ವಿರುದ್ಧದ ಪಂದ್ಯದಲ್ಲಿ ಅವರಿಗೆ ಮತ್ತೆ ಇಂತಹ ಸಂಕಷ್ಟ ಎದುರಾಗುವುದು ನಿಶ್ಚಿತ.
ಇದನ್ನೂ ಓದಿ ಭಾರತ-ಆಫ್ಘನ್ ಪಂದ್ಯಕ್ಕೆ ಮಳೆ ಕಾಟ ಇದೆಯೇ?; ಪಿಚ್ ರಿಪೋರ್ಟ್, ಸಂಭಾವ್ಯ ತಂಡ ಹೀಗಿದೆ
ಕೊಹ್ಲಿಯ ತವರೂರು
ಅಷ್ಟಕ್ಕೂ ಈ ಪಂದ್ಯ ನಡೆಯುವುದು ಕೊಹ್ಲಿಯ ತವರಾದ ಡೆಲ್ಲಿಯಲ್ಲಿ. ಹೀಗಾಗಿ ಅವರ ಅಭಿಮಾನಿಗಳ ಸಂಖ್ಯೆ ತುಸು ಹೆಚ್ಚಾಗಿಯೇ ಇರಲಿದೆ. ಈ ಮಧ್ಯೆ ನವೀನ್ ಅವರು ಅಪ್ಪಚ್ಚಿಯಾಗುವುದು ಖಚಿತ. ನವೀನ್ ಉಲ್ ಹಕ್ ಅವರ ಎಸೆತಗಳನ್ನು ಕೊಹ್ಲಿ ಬೆಂಡೆತ್ತಲು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾದು ಕಾಯುತ್ತಿದ್ದಾರೆ. ಫೀಲ್ಡಿಂಗ್ ನಡೆಸುವಾಗಲು ನವೀನ್ಗೆ ಚಿತ್ರ ಚಿಂಸೆ ನೀಡುವುದು ಕೊಹ್ಲಿ ಅಭಿಮಾನಿಗಳ ಯೋಜನೆಯಾಗಿದೆ. ಒಟ್ಟಾರೆ ನಾಳೆ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಕೊಹ್ಲಿಯ ಹೆಸರು ಗುಂಯ್ ಗುಟ್ಟಲಿದೆ.
ಐಪಿಎಲ್ ವೇಳೆ ಕೊಹ್ಲಿ ಜತೆ ಕಿರಿಕ್
ಮೇ 1ರಂದು ಲಕ್ನೋದ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ(virat kohli) ಮತ್ತು ನವೀನ್ ಉಲ್-ಹಕ್ ಮಧ್ಯೆ ಮೈದಾನದಲ್ಲಿಯೇ ಕಿರಿಕ್ ಆಗಿತ್ತು. ಬಳಿಕ ಪಂದ್ಯ ಮುಗಿದ ಬಳಿಕ ಗಂಭೀರ್ ಅವರು ಇದೇ ವಿಚಾರವಾಗಿ ಕೊಹ್ಲಿ ಜತೆ ವಾಗ್ವಾದ ನಡೆಸಿದ್ದರು. ಈ ಘಟನೆ ನಡೆದ ಬಳಿಕ ನವೀನ್ ಅವರು ವಿರಾಟ್ ಕೊಹ್ಲಿ ಮತ್ತು ಆರ್ಸಿಬಿ ಸೋತ ಬಳಿಕ ಮಾವಿನ ಹಣ್ಣಿನ ಫೋಟೊ ಹಾಕಿ ಪರೋಕ್ಷವಾಗಿ ಟ್ರೋಲ್ ಮಾಡಿದ್ದರು. ಇಲ್ಲಿಂದ ಆರಂಭಗೊಂಡ ಈ ಸಮರವನ್ನು ಮುಂದೆ ವಿರಾಟ್ ಅಭಿಮಾನಿಗಳು ಮುಂದುವರಿಸಿದ್ದರು.
ಕೊನೆಯ ವಿಶ್ವಕಪ್ ಟೂರ್ನಿ
24 ವರ್ಷದ ವೇಗಿ ನವೀನ್ ಉಲ್ ಹಕ್ಗೆ ಇದು ಕೊನೆಯ ವಿಶ್ವಕಪ್ ಟೂರ್ನಿ. ಕೂಟ ಮುಗಿದ ಬಳಿಕ ಅವರು ಅಂತಾರಾಷ್ಟ್ರೀಯ ಏಕದಿನಕ್ಕೆ ನಿವೃತ್ತಿ ಹೇಳಲಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನವೇ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದರು. ಟಿ20 ಕ್ರಿಕೆಟ್ ಕಡೆ ಹೆಚ್ಚಿನ ಗಮನ ನೀಡುವ ಸಲುವಾಗಿ ಅವರು ಏಕದಿನ ಕ್ರಿಕೆಟ್ಗೆ ಗುಡ್ಬೈ ಹೇಳುತ್ತಿರುವುದಾಗಿ ತಿಳಿಸಿದ್ದರು. ನವೀನ್ ನಿವೃತ್ತಿ ಘೋಷಿದ ವೇಳೆಯೂ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಇದು ಕೊಹ್ಲಿಯ ಭಯದಿಂದಲೇ ಹೇಳಿದ ನಿವೃತ್ತಿಯಾಗಿದೆ ಎಂದಿದ್ದರು.