ಲಕ್ನೋ: ದಕ್ಷಿಣ ಆಫ್ರಿಕಾಕ್ಕೆ ಸೋಲಿನ ಶಾಕ್ ನೀಡಿದ ನೆದರ್ಲೆಂಡ್ ತಂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಕಣಕ್ಕಿಳಿಯಲು ಸಿದ್ಧವಾಗಿದೆ. ಶನಿವಾರ ನಡೆಯುವ ವಿಶ್ವಕಪ್ನ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾದ ಸವಾಲು ಎದುರಿಸಲಿದೆ.
ಡಚ್ಚರು ಬಲಿಷ್ಠ
ಹೆಚ್ಚಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ಅನುಭವ ಹೊಂದಿರದಿದ್ದರೂ. ಡಚ್ಚರ ಆಟ ನೋಡುವಾಗ ಎಂತಹ ಅನುಭವಿ ತಂಡವೂ ಇವರ ಪ್ರದರ್ಶನಕ್ಕೆ ತಲೆಬಾಗಲೇ ಬೇಕು. ಆಡುವ ಬಳಗದ 11 ಮಂದಿಯೂ ಬ್ಯಾಟಿಂಗ್ ಮತ್ತು ಬೌಲಿಂಗ್ ನಡೆಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇದಕ್ಕೆ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಫಲಿತಾಂಶವೇ ಸಾಕ್ಷಿ. ಆರಂಭಿಕ ಆಟಗಾರರು ಬೇಗನೆ ವಿಕೆಟ್ ಕೈಚೆಲ್ಲಿದರೂ 7ನೇ ಕ್ರಮಾಂಕದಲ್ಲಿ ಆಡಿದ ನಾಯಕ ಸ್ಕಾಟ್ ಎಡ್ವರ್ಡ್ಸ್ ಮತ್ತು 9ನೇ ಕ್ರಮಾಂಕದಲ್ಲಿ ಆಡಿದ ವ್ಯಾನ್ ಡೆರ್ ಮೆರ್ವೆ ಸೇರಿಕೊಂಡು ಉತ್ತಮ ಜತೆಯಾಟ ನಡೆಸಿ ಆಫ್ರಿಕಾನ್ನರ ಗರ್ವಭಂಗ ಮಾಡಿದ್ದರು.
ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಲಂಕಾ
ಲಂಕಾ ತಂಡ ಆಡಿದ ಮೂರು ಪಂದ್ಯಗಳ್ಲಲಿಯೂ ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೇಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ಪಂದ್ಯದಲ್ಲಾದರೂ ಗೆದ್ದು ಖಾತೆ ತೆರೆಯುವುದು ಲಂಕಾದ ಪ್ರಮುಖ ಗುರಿಯಾಗಿದೆ. ಲಂಕಾ ತಂಡದಲ್ಲಿರುವ ದೊಡ್ಡ ಸಮಸ್ಯೆ ಎಂದರೆ ಬೌಲಿಂಗ್. ಯಾರೂ ಕೂಡ ಅನುಭವಿ ಬೌಲರ್ಗಳಿಲ್ಲ. ಎಲ್ಲ ಐಪಿಎಲ್ ತಳಿಗಳು. ಇನ್ನು ಬ್ಯಾಟಿಂಗ್ ವಿಚಾರಕ್ಕೆ ಬಂದರೆ ಆರಂಭಿಕರು ಮೊದಲ ವಿಕೆಟ್ಗೆ 150 ರನ್ ಜತೆಯಾಟ ನೀಡಿದರು. ಆ ಬಳಿಕದ ಆಟಗಾರರು ನಾಟಕೀಯ ಕುಸಿತ ಕಾಣುತ್ತಿದ್ದಾರೆ. ಒಟ್ಟಾರೆ ಲಂಕಾ ತಂಡದಲ್ಲಿ ಅನುಭವಿ ಆಟಗಾರರು ಇಲ್ಲದೇ ಇರುವುದು ದೊಡ್ಡ ಹೊಡೆತ.
ಮುಖಾಮುಖಿ
ನೆದರ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಇದುವರೆಗೆ ಏಕದಿನ ಕ್ರಿಕೆಟ್ನಲ್ಲಿ 5 ಬಾರಿ ಮುಖಾಮುಖಿಯಾಗಿದೆ. ಆಡಿದ ಐದೂ ಪಂದ್ಯಗಳಲ್ಲಿಯೂ ಲಂಕಾ ಮೇಲುಗೈ ಸಾಧಿಸಿದೆ. ವಿಶ್ವಕಪ್ನಲ್ಲಿ ಇತ್ತಂಡಗಳದ್ದು ಇದು ಮೊದಲ ಮುಖಾಮುಖಿಯಾಗಿದೆ.
ಹವಾಮಾನ ವರದಿ
ಲಕ್ನೋದಲ್ಲಿ ಶೇ.45ರಷ್ಟು ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವೆ ಇಲ್ಲಿ ನಡೆದ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಇದೀಗ ಈ ಪಂದ್ಯಕ್ಕೂ ಮಳೆಯ ಭೀತಿ ಕಾಡಿದೆ. ಒಂದೊಮ್ಮೆ ಮಳೆಯಿಂದ ಸಂಪೂರ್ಣವಾಗಿ ಪಂದ್ಯ ನಡೆಯದೇ ಇದ್ದರೆ ಇತ್ತಂಡಗಳಿಗೂ ತಲಾ ಒಂದು ಅಂಕ ದೊರೆಯಲಿದೆ. ಏಕೆಂದರೆ ಲೀಗ್ ಪಂದ್ಯಗಳಿಗೆ ಮೀಸಲು ದಿನ ಇಲ್ಲ. ಕೇವಲ ಸೆಮಿ ಮತ್ತು ಫೈನಲ್ ಪಂದ್ಯಕ್ಕೆ ಮಾತ್ರ ಮೀಸಲು ದಿನ ನಿಗದಿ ಪಡಿಸಲಾಗಿದೆ.
ಇದನ್ನೂ ಓದಿ Virat Kohli: ಪಂದ್ಯದ ಬಳಿಕ ಜಡೇಜಾಗೆ ಕ್ಷಮೆ ಕೇಳಿದ ವಿರಾಟ್ ಕೊಹ್ಲಿ
ಪಿಚ್ ರಿಪೋರ್ಟ್
ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನ ಪಿಚ್ ಆರಂಭದಲ್ಲಿ ಬ್ಯಾಟಿಂಗ್ ನಡೆಸಲು ಸೂಕ್ತವಾಗಿದ್ದರೂ ಆ ಬಳಿಕ ಸಂಪೂರ್ಣ ಬೌಲಿಂಗ್ ಸ್ನೇಹಿಯಾಗಲಿದೆ. ಬಡಬಡನೆ ವಿಕೆಟ್ ಉದುರಿ ಹೋಗುತ್ತದೆ. ಇದಕ್ಕೆ ಇಲ್ಲಿ ನಡೆದ ಈ ಹಿಂದಿನ ಪಂದ್ಯಗಳ ಫಲಿತಾಂಶವೇ ಉತ್ತಮ ನಿದರ್ಶನ. ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ತಂಡ ಸುಮಾರು 15 ಓವರ್ಗೆ 80 ರಿಂದ 90 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿರುತ್ತದೆ. ಆ ಬಳಿಕ ಬೌಲರ್ಗಳು ಅದರಲ್ಲೂ ವೇಗಿಗಳು ಸಂಪೂರ್ಣ ಹಿಡಿತ ಸಾಧಿಸಿ ವಿಕೆಟ್ ಕೀಳುತ್ತಾರೆ. ಹೀಗಾಗಿ ಉಭಯ ತಂಡಗಳು ವೇಗದ ಬೌಲಿಂಗ್ಗೆ ಹೆಚ್ಚಿನ ಮಹತ್ವದ ನೀಡಬಹುದು.
ಸಂಭಾವ್ಯ ತಂಡಗಳು
ಶ್ರೀಲಂಕಾ: ಕುಸಲ್ ಪೆರೇರ, ಪಾತುಂ ನಿಸ್ಸಾಂಕ, ಕುಸಲ್ ಮೆಂಡಿಸ್(ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ,, ದುನಿತ್ ವೆಲ್ಲಲಗೆ, ಮಥೀಶ ಪತಿರಣ, ದಿಲ್ಶನ್ ಮಧುಶಂಕ, ಕಸುನ್ ರಜಿತ. ಚಾಮಿಕಾ ಕರುಣಾರತ್ನೆ.
ನೆದರ್ಲೆಂಡ್ಸ್: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓ ಡೌಡ್, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್, ಬಾಸ್ ಡಿ ಲೀಡೆ, ತೇಜಾ ನಿಡಮನೂರು, ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.