ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ, ಭಾರತದ ನೀರಜ್ ಚೋಪ್ರಾ(Neeraj Chopra) ಈ ವರ್ಷ 90 ಮೀ. ದೂರ ಜಾವೆಲಿನ್ ಎಸೆಯುವುದು ನನ್ನ ಮೊದಲ ಗುರಿ ಎಂದು ಹೇಳಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ ನೀರಜ್ ಚೋಪ್ರಾ 2022 ರಲ್ಲಿ ನಿರೀಕ್ಷೆಗೆ ತಕ್ಕಂತೆ ಉತ್ತಮ ಪ್ರದರ್ಶನ ತೋರುವ ಮೂಲಕ ಹಲವು ಪ್ರಶಸ್ತಿ ಜಯಿಸಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಹಾಗೂ ಡೈಮಂಡ್ ಲೀಗ್ ಫೈನಲ್ಸ್‌ನಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ್ದರು.
ಇದೀಗ 90 ಮೀ. ದೂರ ಜಾವೆಲಿನ್ ಎಸೆಯುವ ಇರಾದೆಯೊಂದನ್ನು ನೀರಜ್ ಚೋಪ್ರಾ ವ್ಯಕ್ತಪಡಿಸಿದ್ದಾರೆ. ಕಳೆದ ಡೈಮಂಡ್ ಲೀಗ್‌ನಲ್ಲಿ ಅವರು 89.94 ಮೀ. ದೂರ ಜಾವೆಲಿನ್ ಎಸೆದಿದ್ದರು. ಆದರೆ ಕೇವಲ 6 ಸೆಂ.ಮೀ. ಅಂತರದಿಂದ 90 ಮೀ. ಸಾಧನೆಯನ್ನು ಕಳೆದುಕೊಂಡಿದ್ದರು.
ಸಂದರ್ಶನವೊಂದರಲ್ಲಿ ಮಾತನಾಡಿದ ನೀರಜ್ ಚೋಪ್ರಾ, ಕಳೆದ ವರ್ಷ 90 ಮೀ. ಸಾಧನೆಯನ್ನು ಕೇವಲ ಆರು ಸೆಂ.ಮೀ.ಗಳ ಅಂತರದಿಂದ ತಪ್ಪಿಸಿಕೊಂಡಿದ್ದೆ. ಜಾವೆಲಿನ್ ಎಸೆಯುವ ವೇಳೆ ನನ್ನ ಕಾಲನ್ನು ಅಲ್ಪ ಮುಂದಿಟ್ಟಿದ್ದರೂ, ಆ ಸಾಧನೆ ಮಾಡಬಹುದಿತ್ತು. ಆದರೆ ಈ ವರ್ಷ 90 ಮೀ. ಸಾಧನೆಯನ್ನು ಮಾಡುವ ಎಲ್ಲ ವಿಶ್ವಾಸ ನನ್ನಲ್ಲಿದೆ ಎಂದು ಹೇಳಿದ್ದಾರೆ.
“ನಿರೀಕ್ಷೆಗಳ ಭಾರ ನನ್ನ ಮೇಲೆ ಯಾವುದೇ ಪರಿಣಾಮ ಬೀರದು. ಒಂದು ದಿನ ಆ ಸಾಧನೆ ಮೂಡಿಬರಲಿದೆ. ಕಳೆದ ವರ್ಷವೇ ಇದು ಆಗಬೇಕಿತ್ತು. ಆದರೆ ಆ ಸಾಧನೆ ಮೂಡಿಬರಲು ದೇವರು ಒಂದು ಸೂಕ್ತ ಸಮಯ ಮತ್ತು ಸ್ಥಳವನ್ನು ನಿಗದಿಪಡಿಸಿರಬೇಕು” ಎಂದು ನೀರಜ್ ಅಭಿಪ್ರಾಯಪಟ್ಟಿದ್ದಾರೆ.
ಶ್ರೇಷ್ಠ ಪ್ರದರ್ಶನ ತೋರುವೆ
ಈ ಋತುವಿನಲ್ಲಿ ಮೂರು ಪ್ರಮುಖ ಕೂಟಗಳು ಇವೆ. ವಿಶ್ವ ಚಾಂಪಿಯನ್‌ಷಿಪ್, ಏಷ್ಯನ್ ಕ್ರೀಡಾಕೂಟ ಮತ್ತು ಡೈಮಂಡ್ ಲೀಗ್ ಫೈನಲ್‌ನಲ್ಲಿ ಶ್ರೇಷ್ಠ ಪ್ರದರ್ಶನ ತೋರಲು ಪ್ರಯತ್ನಿಸುವೆ. ಜತೆಗೆ ಈ ಟೂರ್ನಿಯಲ್ಲಿ ತೋರುವ ಪ್ರದರ್ಶನ ಮುಂದಿನ ವರ್ಷ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ಗೆ ಉತ್ತಮ ವೇದಿಕೆಯಾಗಲಿದೆ ಎಂದು ನೀರಜ್ ಚೋಪ್ರಾ ಹೇಳಿದರು.
ಇದನ್ನೂ ಓದಿ | Neeraj Chopra | ಒಂದು ಪರೋಟ ತಿಂದರೂ ಕೋಚ್ ದಂಡ ವಿಧಿಸುತ್ತಾರೆ; ನೀರಜ್ ಚೋಪ್ರಾ ಆರೋಪ