ಹೊಸದಿಲ್ಲಿ: ಒಂದಲ್ಲ ಒಂದು ದಿನ 90 ಮೀಟರ್ ದೂರದ ಗುರಿಯನ್ನು ಮುಟ್ಟುವ ನಿರೀಕ್ಷೆಯಿದೆ. ಆದರೆ ಪದಕ ಗೆಲ್ಲುವುದು ಅದಕ್ಕಿಂತ ಮುಖ್ಯ ಎಂದು ನೀರಜ್ ಚೋಪ್ರಾ (Neeraj Chopra) ಹೇಳಿದ್ದಾರೆ. 88.17 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ (javelin throw) ಮೂಲಕ ಅಥ್ಲೆಟಿಕ್ಸ್‌ನಲ್ಲಿ ದೇಶದ ಮೊದಲ ವಿಶ್ವ ಚಾಂಪಿಯನ್ ಆಗಿರುವ ನೀರಜ್ ಚೋಪ್ರಾ, ಇದೀಗ ಜಾವೆಲಿನ್ ಎಸೆತದ ಎಲ್ಲ ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ (world championship) ಅಗ್ರ ರ್ಯಾಂಕಿಂಗ್ ಹೊಂದಿದ್ದಾರೆ.
ಇವರಿಗಿಂತ ನಂತರ ಸ್ಥಾನದಲ್ಲಿರುವ ಅರ್ಷದ್ ನದೀಮ್ ಮತ್ತು ಜಾಕುಬ್ ವಡ್ಲೆಜ್ ಕ್ರಮವಾಗಿ 87.82 ಮೀ ಮತ್ತು 86.67 ಮೀ ದೂರಕ್ಕೆ ಜಾವೆಲಿನ್ ಎಸೆದಿದ್ದಾರೆ. ನೀರಜ್ ಅವರಿಗಿಂತ ಮೊದಲು ಇತಿಹಾಸದಲ್ಲಿ ಹಲವರು 90 ಮೀಟರ್ ದೂರಕ್ಕೆ ಜಾವೆಲಿನ್ ಎಸೆತಗೈದು ದಾಖಲೆ ಸೃಷ್ಟಿಸಿದ್ದಾರೆ.
ನೀರಜ್ ಚೋಪ್ರಾ ಅವರ ಶೈಲಿ ಇಂದು ಕ್ರೀಡಾಭಿಮಾನಿಗಳಿಗೆ ಪರಿಚಿತವಾಗಿದೆ. ಮುಖದ ಮೇಲಿನ ಬೆವರಿನ ಮಿನುಗು, ಓಟ ಪ್ರಾರಂಭಿಸಿದಾಗ ಲಯಬದ್ಧವಾಗಿ ಪುಟಿಯುವ ತಲೆಕೂದಲು, ಶಕ್ತಿಯುತವಾದ ಎಸೆತ, ಜಾವೆಲಿನ್ ಬಿಡುಗಡೆಯ ನಂತರದ ಘರ್ಜನೆ ಇತ್ಯಾದಿ. ದಿನದಿಂದ ದಿನಕ್ಕೆ ಅವರ ಎಸೆತ ಶ್ರೇಷ್ಠ ಮತ್ತು ಸ್ಥಿರವಾಗುತ್ತ ಹೋಗಿದೆ. ಅವರು ಪ್ರತಿ ಬಾರಿ ದೊಡ್ಡ ಸ್ಪರ್ಧೆಗೆ ಇಳಿದಾಗಲೂ, ಅವರಿಂದ ಸಾಕಷ್ಟು ನಿರೀಕ್ಷಿಸಲಾಗುತ್ತದೆ. ಟೋಕಿಯೋದಲ್ಲಿ, ಜ್ಯೂರಿಚ್‌ನಲ್ಲಿ, ಗೋಲ್ಡ್ ಕೋಸ್ಟ್‌ನಲ್ಲಿ, ಜಕಾರ್ತಾದಲ್ಲಿ ಅವರ ಮೇಲಿಟ್ಟ ನಿರೀಕ್ಷೆಯನ್ನು ನಿಜ ಮಾಡಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಳು ಪ್ರಾರಂಭವಾದ 40 ವರ್ಷಗಳ ನಂತರ ಅಂಜು ಬಾಬಿ ಜಾರ್ಜ್ ಭಾರತಕ್ಕೆ ಮೊದಲ ಕಂಚಿನ ಪದಕವನ್ನು ಗೆದ್ದಿದ್ದರು. ಇದಾಗಿ 20 ವರ್ಷಗಳ ನಂತರ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯನೊಬ್ಬ ಜಾವೆಲಿನ್‌ನಲ್ಲಿ ಚಿನ್ನದ ಡಬಲ್ ಅನ್ನು ಸಾಧಿಸಿದ್ದಾರೆ.
ಪಾಣಿಪತ್‌ನ ಖಂಡ್ರಾ ಗ್ರಾಮದ 25 ವರ್ಷದ ನೀರಜ್, ಬುಡಾಪೆಸ್ಟ್‌ನ ನೆಮ್ಜೆಟಿ ಅಟ್ಲೆಟಿಕೈ ಕೊಜ್‌ಪಾಂಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದರು. 2021ರ ಒಲಿಂಪಿಕ್ ಚಾಂಪಿಯನ್ ಆಗಿ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಮೊದಲ ಅಥ್ಲೆಟಿಕ್ ಪದಕ ಪಡೆದರು. ಇದೀಗ ವಿಶ್ವ ಚಾಂಪಿಯನ್ ಆಗಿದ್ದಾರೆ. ಅವರ ಮೊದಲ ಎಸೆತ ಫೌಲ್ ಆಗಿತ್ತು. ಎರಡನೆಯ ಎಸೆತದಲ್ಲಿ ಜಾವೆಲಿನ್ ಪೂರ್ಣ ದೂರವನ್ನು ಕ್ರಮಿಸುವ ಮೊದಲೇ ಅವರ ಗರ್ಜನೆ ಹೊರಬಿದ್ದಿತ್ತು. ಎರಡು ವರ್ಷಗಳ ಹಿಂದೆ ಟೋಕಿಯೊದಲ್ಲಿ ಮಾಡಿದ್ದಂತೆಯೇ, ಈ ಸಲವೂ ಜಾವೆಲಿನ್ ಬಹುದೂರ ಕ್ರಮಿಸಿತು ಎಂಬುದನ್ನು ಅವರು ಎಸೆತದ ಕ್ಷಣದಲ್ಲೇ ತಿಳಿದರು. 88.17 ಮೀ ಸ್ಪರ್ಧೆಯ ಆರಂಭಿಕ ಮಾನದಂಡವಾಗಿತ್ತು. ಇತರರು ಇದನ್ನು ಮುರಿಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.
“ನನಗಷ್ಟೇ ಅಲ್ಲ, ಎಲ್ಲಾ ಎಸೆತಗಾರರಿಗೂ ಇದು ತಿಳಿದಿದೆ. ನಾವು ಎಷ್ಟು ತರಬೇತಿ ಪಡೆಯುತ್ತೇವೆಂದರೆ, ಉತ್ತಮ ಎಸೆತ ಯಾವುದು ಎಂಬುದು ಜಾವೆಲಿನ್ ನಮ್ಮ ಕೈ ಬಿಟ್ಟಾಗಲೇ ಸಹಜವಾಗಿ ತಿಳಿಯುತ್ತದೆ. ಇದು ಡೇನಿಯಲ್ ಸ್ಟಾಲ್ (ಡಿಸ್ಕಸ್ ಚಾಂಪಿಯನ್) ಮತ್ತು ರಿಯಾನ್ ಕ್ರೌಸರ್ (ಶಾಟ್‌ಪುಟ್ ವಿಜೇತ) ಅವರಿಗೂ ಗೊತ್ತಿದೆ. ಎಸೆತ ಇನ್ನಷ್ಟು ದೂರ ಹೋಗಬೇಕಿತ್ತು ಎಂದು ಭಾವಿಸಿದೆ. ಆದರೆ 88.17 ಮೀ.ನೊಂದಿಗೆ ಸಂತೋಷಪಟ್ಟೆʼʼ ಎಂದರು ಚೋಪ್ರಾ.
ಜಾಗತಿಕ ಫೈನಲ್ ಪಂದ್ಯಗಳಲ್ಲಿ ಇದಕ್ಕಿಂತಲೂ ಹೆಚ್ಚು ದೂರ ಎಸೆದವರಿದ್ದಾರೆ. ಕಳೆದ ವರ್ಷ ಯೂಜೀನ್‌ನಲ್ಲಿ ಚೋಪ್ರಾರನ್ನು ಮಣಿಸಿ ಚಿನ್ನ ಪಡೆದ ಆಂಡರ್ಸನ್ ಪೀಟರ್ಸ್ 90 ಮೀ ಪ್ಲಸ್ ಥ್ರೋ ಮಾಡಿದ್ದರು. ಆದರೆ ಬುಡಾಪೆಸ್ಟ್‌ನಲ್ಲಿ ಅವರಿಗೆ ಫೈನಲ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಹನ್ನೊಂದು ಪುರುಷರು ಈ ಮೊದಲು ಜಾವೆಲಿನ್ ವಿಶ್ವ ಪ್ರಶಸ್ತಿ ಗೆಲ್ಲುವಾಗ ಚೋಪ್ರಾ ಅವರ ಎಸೆತಕ್ಕಿಂತ ಹೆಚ್ಚಿನ ದೂರ ಸಾಧಿಸಿದ್ದಾರೆ. ಇವರಲ್ಲಿ ಐವರು 90 ಮೀ ಪ್ಲಸ್ ಥ್ರೋಗಳನ್ನು ಮಾಡಿದ್ದಾರೆ.
90 ಮೀ. ಮಾರ್ಕ್‌ಗೆ ಚೋಪ್ರಾ 1.83 ಮೀ ದೂರದಲ್ಲಿ ಇದ್ದಾರೆ. ʼʼಒಂದು ದಿನ 90 ಮೀ ಎಸೆತ ಖಂಡಿತವಾಗಿ ಮಾಡಲಿದ್ದೇನೆ. ನಾನು ಅದನ್ನು ಕಾಲ ಮತ್ತು ಹಣೆಬರಹಕ್ಕೆ ಬಿಟ್ಟಿದ್ದೇನೆ. ನಾನು 2018ರಿಂದ 88 ಮೀ ಪ್ಲಸ್ ಎಸೆಯುತ್ತಿದ್ದೇನೆ. ದೂರದ ಬಗ್ಗೆ ಸಾಕಷ್ಟು ಯೋಚಿಸುತ್ತಿದ್ದೆ. ಆದರೆ ಈಗ ನಾನು ಗೆಲ್ಲಬೇಕು ಎಂದು ಭಾವಿಸುತ್ತೇನೆ. 90 ಮೀಟರ್ ದೂರಕ್ಕಿಂತ ಪದಕಗಳು ಮುಖ್ಯ” ಎಂದು ಚೋಪ್ರಾ ಹೇಳಿದ್ದಾರೆ.
“ಇದು ನನ್ನ ವೃತ್ತಿಜೀವನದಲ್ಲಿ ಮತ್ತು ಭಾರತೀಯ ಅಥ್ಲೆಟಿಕ್ಸ್‌ನಲ್ಲಿ ಒಂದು ದೊಡ್ಡ ಕ್ಷಣವಾಗಿದೆ. ಅಗ್ರ ಆರರೊಳಗೆ ಸ್ಥಾನ ಪಡೆದಿದ್ದಕ್ಕಾಗಿ ನಾನು ಡಿಪಿ ಮನು ಮತ್ತು ಕಿಶೋರ್ ಜೆನಾ ಅವರನ್ನು ಅಭಿನಂದಿಸಲು ಬಯಸುತ್ತೇನೆ. ಪುರುಷರ ರಿಲೇ ತಂಡವೂ ಫೈನಲ್‌ಗೆ ತಲುಪಿದೆ, ಆದ್ದರಿಂದ ಇದು ನಮಗೆ ಉತ್ತಮ ದಿನ” ಎಂದರು.