Site icon Vistara News

T20 World Cup 2024: ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದ ನೇಪಾಳ-ಒಮಾನ್

The Nepal players greet the crowd after qualifying for the semi-finals

ಬೆಂಗಳೂರು: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯುವ 2024ರ ಪುರುಷರ ಟಿ20 ವಿಶ್ವಕಪ್​ಗೆ ನೇಪಾಳ ಮತ್ತು ಒಮಾನ್(Nepal and Oman) ಅರ್ಹತೆ ಪಡೆದಿವೆ. ಏಷ್ಯಾ ವಲಯದ ಅರ್ಹತಾ ಟೂರ್ನಿಯಲ್ಲಿ ಫೈನಲ್ ತಲುಪುವ ಮೂಲಕ ಇತ್ತಂಡಗಳು ಈ ಸಾಧನೆ ಮಾಡಿದೆ.

ಒಮಾನ್ ತಂಡವು ಸೆಮಿಫೈನಲ್​ನಲ್ಲಿ ಬಹ್ರೈನ್​ ತಂಡವನ್ನು ಸೋಲಿಸಿದರೆ, ಮತ್ತೊಂದು ಸೆಮಿಫೈನಲ್​ನಲ್ಲಿ ನೇಪಾಳವು ಯುಎಇ ತಂಡವನ್ನು ಮಣಿಸಿ ಫೈನಲ್​ ಪ್ರವೇಶ ಪಡೆಯುತು. ಫೈನಲ್ ಪ್ರವೇಶ ಪಡೆಯುತ್ತಿದ್ದಂತೆ ಮುಂದಿನ ವರ್ಷದ ಪುರುಷರ ಟಿ20 ಟೂರ್ನಿಗೂ ಅರ್ಹತೆ ಪಡೆಯುತು. ನೇಪಾಳ ತಂಡ ಈ ಬಾರಿಯ ಏಷ್ಯಾಕಪ್​ ಟೂರ್ನಿಯಲ್ಲಿ ಅತ್ಯಮೋಘ ಪ್ರದರ್ಶನ ತೋರುವ ಮೂಲಕ ಗಮನಸೆಳೆದಿತ್ತು. ಹೀಗಾಗಿ ಮುಂದಿನ ಟಿ20ಯಲ್ಲಿ ತಂಡದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಲಾಗಿದೆ.

18 ತಂಡಗಳು ಅಂತಿಮ

ಚುಕುಟು ಮಾದರಿಯ ವಿಶ್ವಕಪ್​ ಟೂರ್ನಿಗೆ ಈಗಾಗಲೇ 18 ತಂಡಗಳು ತಮ್ಮ ಸ್ಥಾನಗಳನ್ನು ಅಂತಿಮಗೊಳಿಸಿವೆ. ಕೊನೆಯ ಎರಡು ಸ್ಥಾನಗಳನ್ನು ಮುಂದಿನ ತಿಂಗಳು ನಡೆಯುವ ಆಫ್ರಿಕಾ ಕ್ವಾಲಿಫೈಯರ್‌ ಟೂರ್ನಿಯಲ್ಲಿ ನಿರ್ಧರಿಸಲಾಗುತ್ತದೆ.

ಸ್ವರೂಪ ಬದಲು

ಹಿಂದಿನ ಆವೃತ್ತಿಗಳಿಗಿಂತ ಈ ಬಾರಿ ಟೂರ್ನಿ ವಿಭಿನ್ನ ಸ್ವರೂಪವನ್ನು ಹೊಂದಿದೆ. ಸೂಪರ್ 12 ತಂಡಗಳು ಸೇರಿ 20 ತಂಡಗಳನ್ನು ತಲಾ 5 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೂಪರ್ 8ಗೆ ಅರ್ಹತೆ ಪಡೆಯುತ್ತವೆ. ಸೂಪರ್ 8 ತಂಡಗನ್ನು ತಲಾ ನಾಲ್ಕರ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆಯಲಿವೆ. ಬಳಿಕ ಫೈನಲ್ ನಡೆಯಲಿದೆ.

20 ತಂಡಗಳು ಭಾಗಿ

2022ರ ಆವೃತ್ತಿಯಲ್ಲಿ 12 ತಂಡಗಳು ಭಾಗಿಯಾಗಿದ್ದವು. ಆದರೆ 2024ರ ಟೂರ್ನಿಯಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ. ಹೀಗಾಗಿ ಅರ್ಹತಾ ಪಂದ್ಯಗಳನ್ನು ನಡೆಸಲಾಗುತ್ತದೆ. ಯುರೋಪ್​ ವಲಯದ ಅರ್ಹತಾ ಪಂದ್ಯಗಳಲ್ಲಿ ಐರ್ಲೆಂಡ್​ ಮತ್ತು ಸ್ಕಾಟ್ಲೆಂಡ್ ಈಗಾಗಲೇ ಅಗ್ರ 2 ತಂಡಗಳಾಗಿ ಅರ್ಹತೆ ಪಡೆದಿದ್ದರೆ, ಪಪುವಾ ನ್ಯೂಗಿನಿ ಕೂಡ ಪಟ್ಟಿಯಲ್ಲಿದೆ. ಈಗಾಗಲೇ ಅಗ್ರ 8 ತಂಡಗಳು ಸೇರಿದಂತೆ ಹನ್ನೆರಡು ದೇಶಗಳು ಸ್ಪರ್ಧೆಗೆ ಅರ್ಹತೆ ಪಡೆದಿವೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನೆದರ್ಲ್ಯಾಂಡ್ಸ್, ನ್ಯೂಜಿಲ್ಯಾಂ​ಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ. ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ತಂಡಗಳು ಸ್ಥಾನ ಪಡೆದಿವೆ.

ಜೂನ್ 4 ರಿಂದ 30ರ ವರೆಗೆ ಟೂರ್ನಿ!

ಜೂನ್ 4 ರಿಂದ 30ರ ವರೆಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಪಂದ್ಯಗಳು ಆಯೋಜನೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಟೂರ್ನಿ ವೆಸ್ಟ್​ ಇಂಡೀಸ್​ ಮತ್ತು ಅಮೆರಿಕಾದ(West Indies And USA) ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಅಮೆರಿಕಾ ತಂಡ ಮೊದಲ ಬಾರಿಗೆ ಟಿ20 ವಿಶ್ವಕಪ್​ನಲ್ಲಿ ಸ್ಪರ್ಧಿಸಲಿದೆ.

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯದ ವಿಂಡೀಸ್​ ಈ ಬಾರಿ ಟೂರ್ನಿಯ ಆತಿಥ್ಯ ವಹಿಸಿಕೊಂಡ ಕಾರಣದಿಂದ ಪಂದ್ಯಾವಳಿಯಲ್ಲಿ ಸ್ಥಾನಪಡೆದಿದೆ. ಕ್ರಿಕ್ಇನ್ಫೊ ವರದಿ ಮಾಡಿರುವ ಪ್ರಕಾರ ಜೂನ್ 4 ರಿಂದ ಜೂನ್ 30ರ ವರೆಗೆ ಪಂದ್ಯಗಳು ನಡೆಯಲಿದ್ದು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿ(ಐಸಿಸಿ) ಅಮೆರಿಕಕ್ಕೆ ಭೇಟಿ ನೀಡಿದ್ದು ಐದು ಮೈದಾನಗಳನ್ನು ಶಾರ್ಟ್​ ಲಿಸ್ಟ್​ ಮಾಡಿದೆ ಎಂದು ತಿಳಿಸಿದೆ. ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯವೊಂದು ನಡೆಯಲಿದೆ.

ಇದನ್ನೂ ಓದಿ ICC World Cup 2023: ಕಿವೀಸ್​ಗೆ ಭಾರಿ ಆಘಾತ; ಸ್ಟಾರ್​ ಬೌಲರ್​ ಟೂರ್ನಿಯಿಂದ ಔಟ್​

ವರದಿ ಪ್ರಕಾರ ಮೋರಿಸ್ವಿಲ್ಲೆ, ಡಲ್ಲಾಸ್ ಮತ್ತು ನ್ಯೂಯಾರ್ಕ್ ಮೈದಾನಗಳನ್ನು ಪಂದ್ಯಗಳ ಆಯೋಜನೆಗೆ, ಫ್ಲೋರಿಡಾದ ಲಾಡರ್‌ಹಿಲ್ ಸ್ಟೇಡಿಯಂ ಅಭ್ಯಾಸ ಪಂದ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಕ್ರಿಕ್ಇನ್ಫೊ ವರದಿ ಮಾಡಿದೆ.

ಮಾರಿಸ್ವಿಲ್ಲೆ ಮತ್ತು ಡಲ್ಲಾಸ್ ಮೈದಾನಗಳಲ್ಲಿ ಈಗಾಗಲೇ ಮೇಜರ್ ಲೀಗ್ ಟಿ20 ಕ್ರಿಕೆಟ್‌ನ ಚೊಚ್ಚಲ ಆವೃತ್ತಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಹೀಗಾಗಿ ಈ ಮೈದಾನ ಕ್ರಿಕೆಟ್​ ಆಡಲು ಸೂಕ್ತವಾಗಿದೆ. ಆದ್ದರಿಂದ ಈ ಮೈದಾನಗಳು ಐಸಿಸಿಯಿಂದ ವಿಶೇಷ ಮಾನ್ಯತೆ ಪಡೆಯಬೇಕಿಲ್ಲ. ಶೀಘ್ರದಲ್ಲೇ ವೆಸ್ಟ್ ಇಂಡೀಸ್ ಕ್ರಿಕೆಟ್ ಮತ್ತು ಅಮೆರಿಕ ಕ್ರಿಕೆಟ್ ಸಂಸ್ಥೆಯ ಜತೆ ಐಸಿಸಿ ಮಾತುಕತೆ ನಡೆಸಿ ಮೈದಾನಗಳ ಮತ್ತು ವೇಳಾಪಟ್ಟಿ ಅಂತಿಮಗೊಳಿಸಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

Exit mobile version