ಹರಾರೆ: ನೆದರ್ಲೆಂಡ್ಸ್ ತಂಡ ಐಸಿಸಿ ಏಕ ದಿನ ವಿಶ್ವಕಪ್ನಲ್ಲಿ (World Cup 2023) ತನ್ನ ಸ್ಥಾನವನ್ನು ಕಾಯ್ದಿರಿಸಿದೆ. ಡಚ್ ತಂಡವು ಮೆಗಾ ಟೂರ್ನಮೆಂಟ್ ಗೆ ತಮ್ಮ ಸ್ಥಾನವನ್ನು ಭದ್ರಪಡಿಸಿದ 10ನೇ ಮತ್ತು ಕೊನೆಯ ತಂಡ ಎನಿಸಿಕೊಂಡಿತು. ಆರೆಂಜ್ ಬ್ರಿಗೇಡ್ 12 ವರ್ಷಗಳ ಸುದೀರ್ಘ ಅವಧಿಯ ನಂತರ ದೊಡ್ಡ ಸ್ಪರ್ಧೆಗೆ ಅರ್ಹತೆ ಪಡೆಯಿತು. ಕುತೂಹಲಕಾರಿ ಸಂಗತಿಯೆಂದರೆ, 2011ರಲ್ಲಿ ಭಾರತ ಆತಿಥ್ಯ ವಹಿಸಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನೆದರ್ಲೆಂರ್ಡ್ಸ್ ತಂಡ ಅರ್ಹತೆ ಪಡೆದಿತ್ತು. ಆ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
WHAT. A. GAME 🤯
— ICC Cricket World Cup (@cricketworldcup) July 6, 2023
Bas de Leede produces an all-round performance for the ages to take Netherlands to #CWC23 🌟#SCOvNED: https://t.co/nlt6bUsALj pic.twitter.com/RDAtBtsLJi
ಪಂದ್ಯದಲ್ಲಿ ಅಧ್ಬುತ ಪ್ರದರ್ಶನ ನೀಡಿದ ಬಾಸ್ ಡಿ ಲೀಡ್ ಅವರು ಐದು ವಿಕೆಟ್ ಪಡೆಯುವ ಜತೆಗೆ 92 ಎಸೆತಗಳಲ್ಲಿ 123 ರನ್ ಗಳಿಸುವ ಮೂಲಕ ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ತಮ್ಮ ತಂಡದ ಸ್ಥಾನ ಭದ್ರಪಡಿಸಿದರು. ಸ್ಕಾಟ್ಲೆಂಡ್ ತಂಡವನ್ನು 4 ವಿಕೆಟ್ ಗಳಿಂದ ಸೋಲಿಸುವಲ್ಲಿ ಡಿ ಲೀಡ್ ನಿರ್ಣಾಯಕ ಪಾತ್ರ ವಹಿಸಿದರು.
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡ ಬ್ರಾಂಡನ್ ಮೆಕ್ ಮುಲ್ಲನ್ 110 ಎಸೆತಗಳಲ್ಲಿ 106 ರನ್ಗಳ ನೆರವಿನಿಂದ 277 ರನ್ ಪೇರಿಸಿತ್ತು. ರಿಚಿ ಬೆರಿಂಗ್ಟನ್ 84 ಎಸೆತಗಳಲ್ಲಿ 64 ರನ್ ಗಳಿಸಿದರು. ಬಾಸ್ ಡಿ ಲೀಡ್ 52 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು. ಇದಕ್ಕೆ ಉತ್ತರವಾಗಿ ಆಡಿದ ನೆದರ್ಲೆಂಡ್ಸ್ ತಂಡದ ಪರ ಡಿ ಲೀಡ್ ಮಿಂಚಿದರು. 123 ರನ್ಗಳ ಅವರ ಇನಿಂಗ್ಸ್ನಲ್ಲಿ 7 ಬೌಂಡರಿಗಳು ಮತ್ತು 5 ಸಿಕ್ಸರ್ಗಳು ಸೇರಿಕೊಂಡಿವೆ.
ನಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇತ್ತು. ಆದರೆ, ಅರ್ಧ ಪಂದ್ಯ ಮುಕ್ತಾಯಗೊಂಡಾಗ ಓವರ್ಗೆ 10ರಿಂದ 12 ರನ್ಗಳ ಬೇಕಾಗಿದ್ದವು. ಹೀಗಾಗಿ ಟಿ20 ಮೋಡ್ನಲ್ಲಿ ಆಡಿದೆವು. ಮ್ಯಾಕ್ಸಿ ಮತ್ತು ವಿಕ್ರಮ್ ಉತ್ತಮ ತಳಪಾಯ ಹಾಕಿಕೊಟ್ಟಿದ್ದರು. ಅದನ್ನು ಮುಂದುವರಿಸುವ ಕೆಲಸ ನನ್ನದಾಗಿತ್ತು. ಅದನ್ನು ಮಾಡಿ ಮುಗಿಸಿದೆವು. ಭಾರತಕ್ಕೆ ವಿಶ್ವ ಕಪ್ನಲ್ಲಿ ಆಡಲು ಹೋಗುತ್ತಿದ್ದೇವೆ ಎಂಬುದು ಸಂತಸದ ವಿಷಯ. ಈ ಖುಷಿಗಾಗಿ ದೊಡ್ಡ ಪಾರ್ಟಿ ಮಾಡಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಬಾಸ್ ಡಿ ಲೀಡ್ ಪುರುಷರ ಏಕದಿನ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಐದು ವಿಕೆಟ್ ಮತ್ತು ಶತಕ ಗಳಿಸಿದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸೂಪರ್ ಸಿಕ್ಸ್ ನಿಂದ ಮೆಗಾ ಟೂರ್ನಮೆಂಟ್ ಗೆ ಶ್ರೀಲಂಕಾ ಕೂಡ ಅರ್ಹತೆ ಪಡೆದುಕೊಂಡಿತ್ತು.