ಹರಾರೆ: ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಬೃಹತ್ ಮೊತ್ತದ ರೋಚಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನೆದರ್ಲೆಂಡ್ಸ್(West Indies vs Netherlands) ಐತಿಹಾಸಿಕ ಗೆಲುವು ದಾಖಲಿಸಿದೆ. ಸೂಪರ್ ಓವರ್ ತನಕ ಸಾಗಿದ ಈ ಪಂದ್ಯದಲ್ಲಿ ಲೋಗನ್ ವ್ಯಾನ್ ಬೀಕ್(Logan van Beek) ಅವರ ಅಸಾಮಾನ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನದ ಮುಂದೆ ವಿಂಡೀಸ್ ಮಂಡಿಯೂರಿತು.
ಸೋಮವಾರ ರಾತ್ರಿ ನಡೆದ ವಿಶ್ವ ಕಪ್ ಅರ್ಹತಾ ಟೂರ್ನಿಯ(ICC Cricket World Cup Qualifiers 2023) ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ನಿಕೋಲಸ್ ಪೂರನ್ ಅವರ ಅಜೇಯ ಸ್ಫೋಟಕ ಶತಕದ ನೆರವಿನಿಂದ 6 ವಿಕೆಟ್ಗೆ 374 ರನ್ ಪೇರಿಸಿತು. ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ದಿಟ್ಟ ರೀತಿಯಲ್ಲಿ ಹೋರಾಟ ನಡೆಸಿತು. ಅಂತಿಮ ಓವರ್ನಲ್ಲಿ ಗೆಲುವಿಗೆ 9 ರನ್ಗಳ ಸವಾಲು ಪಡೆಯಿತು. ಈ ವೇಳೆ ಕ್ರೀಸ್ನಲ್ಲಿದ್ದ ವ್ಯಾನ್ ಬೀಕ್ ಅವರು ಅಲ್ಜಾರಿ ಜೋಸೆಫ್ ಎಸೆದ ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದರು. ಮುಂದಿನ ಎಸೆತವನ್ನು ಸಿಂಗಲ್ ತೆಗೆದರು. ಮೂರನೇ ಎಸೆತದಲ್ಲಿ ಆರ್ಯನ್ ದತ್ ವಿಕೆಟ್ ಕೈಚೆಲ್ಲಿದರು. ಪಂದ್ಯ ಮತ್ತೆ ಪೈಪೋಟಿಗೆ ಜಾರಿತು. ನಾಲ್ಕನೇ ಎಸೆತದಲ್ಲಿ ಸಿಂಗಲ್ ದಾಖಲಾಯಿತು. ಅಂತಿಮ ಎರಡು ಎಸೆತಕ್ಕೆ ಮೂರು ರನ್ ಗಳಿಸಬೇಕಾದಾಗ ವ್ಯಾನ್ ಬೀಕ್ ಎರಡು ರನ್ ಕಲೆಹಾಕಿ ಪಂದ್ಯವನ್ನು ಸಮಬಲಕ್ಕೆ ತಂದು ನಿಲ್ಲಿಸಿದರು. ಒಂದು ಎಸೆತಕ್ಕೆ ಒಂದು ರನ್ ಬೇಕಿದ್ದಾಗ ಲೆಗ್ ಸೈಡ್ಗೆ ಬಾರಿಸಿದ ಚೆಂಡನ್ನು ಹೋಲ್ಡರ್ ಚಿರತೆ ವೇಗದಲ್ಲಿ ಹಾರಿ ಕ್ಯಾಚ್ ಪಡೆದರು. ಪಂದ್ಯ ಸಮಬಲಗೊಂಡಿತು. ಫಲಿತಾಂಶ ನಿರ್ಣಯಕ್ಕೆ ಸೂಪರ್ ಓವರ್ ಮೊರೆ ಹೋಗಲಾಯಿತು.
ಸೂಪರ್ ಓವರ್ ಥ್ರಿಲ್ಲಿಂಗ್
ಸೂಪರ್ ಓವರ್ನಲ್ಲಿ ಬ್ಯಾಟಿಂಗ್ ನಡೆಸಲು ಬಂದ ವ್ಯಾನ್ ಬೀಕ್ ಅವರು ಹೋಲ್ಡರ್ ಅವರ ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟಿದರು. ದ್ವಿತೀಯ ಎಸೆತ ಸಿಕ್ಸರ್ ಬಾರಿಸಿದರು. 2 ಎಸೆತದಲ್ಲಿ 10 ರನ್ ಹರಿದು ಬಂತು. ಇಲ್ಲಿಗೆ ಸುಮ್ಮನಾಗದ ವ್ಯಾನ್ ಬೀಕ್ ಮೂರನೇ ಎಸೆತವನ್ನು ಮತ್ತೆ ಬೌಂಡರಿ ಗೆರೆ ದಾಟಿಸಿದರು. ನಾಲ್ಕನೇ ಮತ್ತು 5 ಎಸೆತದಲ್ಲಿ ಸತತ ಬಿಗ್ ಸಿಕ್ಸರ್ ಬಾರಿಸಿ ತವರಿನ ಅಭಿಮಾನಿಗಳಿಗೆ ಬರಪೂರ ರಂಜನೆ ನೀಡಿದರು. ಅಂತಿಮ ಎಸೆತವನ್ನೂ ಬೌಂಡರಿ ಬಾರಿಸಿ ಒಂದೇ ಓವರ್ನಲ್ಲಿ 30 ರನ್ ಬಾರಿಸಿದರು.
ಇದನ್ನೂ ಓದಿ SL VS NZ: ನ್ಯೂಜಿಲ್ಯಾಂಡ್ ವಿರುದ್ಧ ಸರಣಿ ಸೋಲು; ಏಕದಿನ ವಿಶ್ವ ಕಪ್ ನೇರ ಪ್ರವೇಶ ರೇಸ್ನಿಂದ ಹೊರಬಿದ್ದ ಶ್ರೀಲಂಕಾ
An encounter to remember!
— ICC Cricket World Cup (@cricketworldcup) June 26, 2023
What a performance from Netherlands 👏 #CWC23 | #WIvNED pic.twitter.com/3EkdkjnTXg
30 ರನ್ಗಳ ಗುರಿ ಪಡೆದ ವಿಂಡೀಸ್ ಪರ ಹೋಪ್ ಮತ್ತು ಚಾರ್ಲ್ಸ್ ಬ್ಯಾಟಿಂಗ್ಗೆ ಇಳಿದರು. ಬ್ಯಾಟಿಂಗ್ನಲ್ಲಿ ಮಿಂಚಿದ್ದ ವ್ಯಾನ್ ಬೀಕ್ ಅವರೇ ಸೂಪರ್ ಓವರ್ ಎಸೆಯಲು ಮುಂದಾದರು. ಮೊದಲ ಎಸೆತ ಸಿಕ್ಸರ್ ಸಿಡಿಯಿತು. ಈ ವೇಳೆ ವಿಂಡೀಸ್ ಈ ಮೊತ್ತವನ್ನು ಚೇಸ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಯಿತು. ಪಂದ್ಯವೂ ಕೂಡ ಮತ್ತಷ್ಟು ಕುತೂಹಕ ಕೆರಳಿಸುವಂತೆ ಮಾಡಿತು. ಆದರೆ ಮುಂದಿನ ಎಸೆತದಲ್ಲಿ ಸಿಂಗಲ್ ದಾಖಲಾಯಿತು. ಮೂರನೇ ಎಸೆತವೂ ಸಿಂಗಲ್ ಬಂದ ಕಾರಣ ಜಿಂಬಾಬ್ವೆ ಗೆಲುವು ಖಚಿತವಾಯಿತು. ಮುಂದಿನ ಎರಡು ಎಸೆತಗಳಲ್ಲಿ ಸತತ ವಿಕೆಟ್ ಕೆರವಿದ ವ್ಯಾನ್ ಬೀಕ್ ನೆದರ್ಲೆಂಡ್ಸ್ ತಂಡಕ್ಕೆ ಐತಿಹಾಸಿಕ ಗೆಲುವನ್ನು ತಂದು ಕೊಟ್ಟರು. ವಿಂಡೀಸ್ ಕೇವಲ 8 ರನ್ ಗಳಿಸಲಷ್ಟೇ ಶಕ್ತವಾಯಿತು.