ನವದೆಹಲಿ: ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕುಸ್ತಿಪಟುಗಳು ಜಂತರ್‌ಮಂತರ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆ(Wrestlers Protest) ತೀವ್ರಗೊಂಡಿದೆ. ಈ ಮಧ್ಯೆ ಕಪಿಲ್ ದೇವ್, ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸೇರಿದಂತೆ ಹಲವು ಕ್ರೀಡಾಪಟುಗಳು ಕುಸ್ತಿಪಟುಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಸೌರವ್ ಗಂಗೂಲಿ ಅವರು ನೀಡಿದ ಹೇಳಿಕೆಯೊಂದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶಕ್ಕಾಗಿ ಪದಕ ಗೆದ್ದ ಕುಸ್ತಿ ಪಟುಗಳು ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಪಿಟಿಐ ಸುದ್ದಿ ಸಂಸ್ಥೆ ನಡೆಸಿದ ಸಂದರ್ಶನವೊಂದರಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಇದೇ ವಿಚಾರವಾಗಿ ಪ್ರಶ್ನೆಯೊಂದನ್ನು ಕೇಳಲಾಯಿತು. ಇದಕ್ಕೆ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದ ಗಂಗೂಲಿ ಅವರು ಪ್ರತಿಭಟನೆ ಮಾಡಲಿ. ಅಲ್ಲಿ ಏನಾಗುತ್ತಿದೆ ಎಂದು ನನಗೆ ತಿಳಿದಿಲ್ಲ. ನಾನು ಈ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿದ್ದೇನೆ ಅಷ್ಟೇ. ನಮಗೆ ತಿಳಿದಿರದ ವಿಚಾರದ ಬಗ್ಗೆ ಸುಮ್ಮನೆ ಮಾತನಾಡಿದರೆ ಅದು ತಪ್ಪಾಗುತ್ತದೆ ಎಂದು ಗಂಗೂಲಿ ಹೇಳಿದರು.
ಕುಸ್ತಿಪಟುಗಳ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ದೇಶಕ್ಕಾಗಿ ಕುಸ್ತಿಪಟುಗಳು ಸಾಕಷ್ಟು ಪದಕಗಳನ್ನು ಗೆದ್ದು ಕೀರ್ತಿ ತಂದಿದ್ದಾರೆ. ಅವರಿಗೆ ನ್ಯಾಯ ಸಿಗಬಹುದು. ಆದರೆ ಇದಕ್ಕಿಂತ ಹೆಚ್ಚು ನಾನು ಏನು ಹೇಳಲು ಸಾಧ್ಯವಿಲ್ಲ” ಎಂದು ಹೇಳಿದರು.
ಗಂಗೂಲಿ ಅವರ ಈ ಹೇಳಿಕೆಗೆ ಹಲವು ನೆಟ್ಟಿಗರು ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಕ್ರೀಡಾಪಟುವಾಗಿ ಗಂಗೂಲಿ ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿಲ್ಲ. ಗಂಗೂಲಿ ಸೇಫ್ ಗೇಮ್ ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ Wrestlers Protest : ತಮ್ಮನ್ನು ಬೆಂಬಲಿಸುವಂತೆ ಭಾವುಕ ಸಂದೇಶ ರವಾನಿಸಿದ ಕುಸ್ತಿ ಪಟು ಬಜರಂಗ್
ಬೆದರಿಕೆಯೊಡ್ಡಿದ ಕುಸ್ತಿಪಟುಗಳು
ಬುಧವಾರ ರಾತ್ರಿ ದೆಹಲಿ ಪೊಲೀಸರ ನಡುವೆ ಮಾತಿನ ಚಕಮಕಿ ಮತ್ತು ಹೊಡೆದಾಟ ನಡೆದ ಕಾರಣ ಇಬ್ಬರು ಕುಸ್ತಿಪಟುಗಳು ಗಾಯಗೊಂಡಿದ್ದರು. ಪೊಲೀಸರ ಕೆಟ್ಟ ವರ್ತನೆಯಿಂದ ಆಘಾತಗೊಂಡಿರುವ ಕುಸ್ತಿಪಟುಗಳು ಪದ್ಮಶ್ರೀ ಸಹಿತ ತಾವು ಗಳಿಸಿರುವ ಪದಕಗಳನ್ನು ಸರ್ಕಾರಕ್ಕೆ ಹಿಂದಿರುಗಿಸುವ ಬೆದರಿಕೆಯೊಡ್ಡಿದ್ದರು. ಇಂತಹ ಅವಮಾನಗಳಿಂದ ನಾವು ದೇಶಕ್ಕಾಗಿ ಗಳಿಸಿರುವ ಗೌರವಗಳು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಹೇಳಿದ್ದರು.
ಕುಸ್ತಿಪಟುಗಳನ್ನು ಈ ರೀತಿ ನಡೆಸಿಕೊಂಡರೆ, ನಾವು ದೇಶಕ್ಕಾಗಿ ಗಳಿಸಿದ ಎಲ್ಲ ಪದಕಗಳನ್ನು ಮತ್ತು ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸುತ್ತೇವೆ. ನಮಗೆ ಅದರ ಅಗತ್ಯವಿಲ್ಲ. ಅದರ ಬದಲಿಗೆ ನಾವು ಸಾಮಾನ್ಯ ಜೀವನವನ್ನು ನಡೆಸುತ್ತೇವೆ ಎಂದು ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಗುರುವಾರ ಪತ್ರಕರ್ತರಿಗೆ ತಿಳಿಸಿದ್ದರು.