ರಾಂಚಿ: ಭಾರತ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಹಿನ್ನಡೆಯಲ್ಲಿರುವ ಇಂಗ್ಲೆಂಡ್ ತಂಡ ನಾಲ್ಕನೇ ಟೆಸ್ಟ್(India vs England 4th Test) ಪಂದ್ಯವನ್ನಾಡಲು ಸಜ್ಜಾಗಿದೆ. ಸರಣಿಯನ್ನು ಜೀವಂತವಿರಿಸಬೇಕಿದ್ದರೆ ಆಂಗ್ಲರಿಗೆ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ನಾಳೆಯಿಂದ ಪಂದ್ಯ ಆರಂಭಗೊಳ್ಳಲಿದೆ. ಆದರೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರು ರಾಂಚಿ ಪಿಚ್(ranchi pitch) ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಇಂತಹ ಪಿಚ್ ಎಂದಿಗೂ ನೋಡಿಲ್ಲ ಎಂದು ಹೇಳಿದ್ದಾರೆ.
ಪಂದ್ಯಕ್ಕೂ ಮುನ್ನ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆನ್ ಸ್ಟೋಕ್ಸ್, ರಾಂಚಿ ಪಿಚ್ ದೂರದಿಂದ ನೋಡಿದರೆ ಉತ್ತಮ ಹುಲ್ಲಿನ ಪದರವು ಗೋಚರಿಸುತ್ತದೆ. ಆದರೆ ಹತ್ತಿರದ ಪರಿಶೀಲನೆ ನಡೆಸಿದಾಗ ಪಿಚ್ ಮೇಲೆ ಹಲವು ಬಿರುಕುಗಳನ್ನು ಕಾಣಬಹುದು. ಇದು ಬ್ಯಾಟಿಂಗ್ ಮತ್ತು ಬೌಲಿಂಗ್ ನಡೆಸಲು ಸೂಕ್ತವಲ್ಲ. ನಾನು ಹಿಂದೆಂದೂ ಇಂತಹ ಪಿಚ್ ಅನ್ನು ನೋಡಿಯೇ ಇಲ್ಲ. ಇದರ ಬಗ್ಗೆ ನನಗೆ ಏನೂ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
“ಭಾರತದ ಪಿಚ್‌ಗಳಲ್ಲಿ ವಿಶೇಷವಾಗಿ ನಾವು ಒಂದು ತುದಿಯಿಂದ ಇನ್ನೊಂದು ತುದಿಗೆ ನೋಡಿದರೆ, ಸಂಪೂರ್ಣವಾಗಿ ವಿಭಿನ್ನವಾಗಿ ಕಾಣುತ್ತದೆ. ಡ್ರೆಸ್ಸಿಂಗ್ ಕೊಠಡಿಯಿಂದ ನೋಡಿದರೆ ಹೆಚ್ಚಿನ ಹುಲ್ಲಿನೊಂದಿಗೆ ಹಚ್ಚ ಹಸಿರಿನಿಂದ ಕಾಣುತ್ತದೆ. ಆದರೆ ಪಿಚ್ ಬಳಿ ಬಂದು ನೀಡಿದರೆ ನಿರೀಕ್ಷೆಗೂ ಮೀರಿದ ರೀತಿಯಲ್ಲಿರುತ್ತದೆ. ರಾಂಚಿ ಪಿಚ್ನಲ್ಲಿ ತುಂಬಾ ಬಿರುಕು ಇರುವ ಕಾರಣ ಹೇಗೆ ಆಡಬೇಕೆಂಬುದೇ ತಿಳಿದಿಲ್ಲ. ಇತ್ತಂಡಗಳಿಗೂ ಇದೊಂದು ಸವಾಲಿನ ಪಂದ್ಯವಾಗುವುದರಲ್ಲಿ ಅನುಮಾನವೇ ಬೇಡ” ಎಂದು ಸ್ಟೋಕ್ಸ್ ಹೇಳಿದ್ದಾರೆ.
ಬೌಲಿಂಗ್ ನಡೆಸಲಿದ್ದಾರೆ ಸ್ಟೋಕ್ಸ್
Ben Stokes working on his bowling ahead of 4th Test against India in Ranchi pic.twitter.com/Oac4WbACzu
— CRICGLOBE (@thecricglobe) February 21, 2024
ಆಲ್ರೌಂಡರ್ ಆಗಿರುವ ಬೆನ್ ಸ್ಟೋಕ್ಸ್ ಅವರು ಮೊಣಕಾಲಿನ ಶಸ್ತ್ರಚಿಕಿತ್ಸೆಗೊಳಗಾದ ಬಳಿಕ ಸಂಪೂರ್ಣವಾಗಿ ಬೌಲಿಂಗ್ ಮಾಡುವುದನ್ನು ನಿಲ್ಲಿಸಿ ಕೇವಲ ಬ್ಯಾಟಿಂಗ್ ಕಡೆ ಮಾತ್ರ ಗಮನಹರಿಸಿದ್ದರು. ಇದೀಗ ತಂಡದ ವೇಗಿಗಳು ನಿರೀಕ್ಷಿತ ಮಟ್ಟದ ಪ್ರದರ್ಶನ ತೋರದಿರುವ ಕಾರಣದಿಂದ ನಾಲ್ಕನೇ ಟೆಸ್ಟ್ನಲ್ಲಿ ಬೌಲಿಂಗ್ ಮಾಡಲು ಸಜ್ಜಾಗಿದ್ದಾರೆ. ಸ್ಟೋಕ್ಸ್ ನೆಟ್ಸ್ನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದ ವಿಡಿಯೊಗಳು ವೈರಲ್ ಆಗಿತ್ತು. ಜತೆಗೆ ಕೋಚ್ ಕೂಡ ಸ್ಟೋಕ್ಸ್ ಬೌಲಿಂಗ್ ನಡುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದರು.
ಇದನ್ನೂ ಓದಿ IND vs ENG 4th Test: ರಾಂಚಿಯಲ್ಲಿ ಈಡೇರಿತೇ ಜುರೇಲ್ ಕನಸು?
100 ಟೆಸ್ಟ್ ಪಂದ್ಯಗಳನ್ನು ಆಡಿರುವ ಬೆನ್ ಸ್ಟೋಕ್ಸ್ ಅವರು ಇದುವರೆಗೆ 146 ಇನಿಂಗ್ಸ್ನಲ್ಲಿ ಬೌಲಿಂಗ್ ನಡೆಸಿ 197 ವಿಕೆಟ್ ಕಿತ್ತಿದ್ದಾರೆ. 22 ರನ್ಗೆ 6 ವಿಕೆಟ್ ಕಿತ್ತದ್ದು ಇವರ ವೈಯಕ್ತಿಕ ಶ್ರೇಷ್ಠ ದಾಖಲೆಯಾಗಿದೆ. 4 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ.
ಇಂಗ್ಲೆಂಡ್ ತಂಡ
ಝಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್, ಶೋಯೆಬ್ ಬಶೀರ್, ಒಲ್ಲಿ ರಾಬಿನ್ಸನ್, ಡೇನಿಯಲ್ ಲಾರೆನ್ಸ್, ಗುಸ್ ಅಟ್ಕಿನ್ಸನ್.