Site icon Vistara News

Batting Coach | ಭಾರತ ಮಹಿಳೆಯರ ಕ್ರಿಕೆಟ್‌ ತಂಡಕ್ಕೆ ನೂತನ ಬ್ಯಾಟಿಂಗ್ ಕೋಚ್ ಆಯ್ಕೆ; ಯಾರು ಅವರು?

ಮುಂಬಯಿ : ಈ ವಾರಾಂತ್ಯದಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ೨೦ ಸರಣಿಗೆ ಭಾರತದ ಮಹಿಳೆಯರ ತಂಡ ಸಜ್ಜಾಗುತ್ತಿದೆ. ಏತನ್ಮಧ್ಯೆ, ತಂಡಕ್ಕೆ ನೂತನ ಸಹಾಯಕ ಸಿಬ್ಬಂದಿಯನ್ನು ಬಿಸಿಸಿಐ ನೇಮಕ ಮಾಡಿದ್ದು ಹೃಷಿಕೇಶ್‌ ಕಾನಿಟ್ಕರ್ ಅವರಿಗೆ ಬ್ಯಾಟಿಂಗ್ ಕೋಚ್‌ (Batting Coach) ಹೊಣೆಗಾರಿಕೆ ನೀಡಲಾಗಿದೆ. ಭಾರತ ತಂಡದ ಮಾಜಿ ಆಟಗಾರರಾಗಿರುವ ಹೃಷಿಕೇಶ್‌ ಅವರು ವಾರದ ಹಿಂದೆ ಮುಕ್ತಾಯಗೊಂಡ ಪುರುಷರ ತಂಡದ ನ್ಯೂಜಿಲೆಂಡ್‌ ಪ್ರವಾಸದ ವೇಳೆ ಬ್ಯಾಟಿಂಗ್ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.

ಕಾನಿಟ್ಕರ್ ಅವರು ೧೯೯೭ರಿಂದ ೨೦೦೦ದ ತನಕ ಟೀಮ್‌ ಇಂಡಿಯಾದಲ್ಲಿ ಆಡಿದ್ದರು. ಎರಡು ಟೆಸ್ಟ್ ಪಂದ್ಯಗಳು ಹಾಗೂ ೩೪ ಏಕ ದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅವರೀಗ ಹಲವು ದಿನಗಳಿಂದ ಖಾಲಿಯಿದ್ದ ಬ್ಯಾಟಿಂಗ್ ಕೋಚ್ ಹುದ್ದೆಯನ್ನು ವಹಿಸಿಕೊಂಡಿದ್ದಾರೆ.

“ಹಿರಿಯ ಮಹಿಳೆಯರ ತಂಡದ ಹೊಸ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿರುವುದು ಗೌರವದ ಸಂಗತಿ. ಈ ತಂಡದಲ್ಲಿ ನಾನು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇನೆ. ನಮ್ಮ ತಂಡ ಯುವ ಹಾಗೂ ಹಿರಿಯ ಆಟಗಾರ್ತಿಯರನ್ನು ಒಳಗೊಂಡಿದ್ದು, ಆಸೀಸ್‌ ವಿರುದ್ಧದ ಸವಾಲಿಗೆ ಸಿದ್ಧವಾಗಿದೆ. ಮುಂಬರುವ ದಿನಗಳಲ್ಲಿ ಇಂಥ ಹಲವಾರು ಟೂರ್ನಿಗಳಲ್ಲಿ ಭಾರತ ತಂಡ ಆಡಲಿದ್ದು ಅವಕಾಶಕ್ಕಾಗಿ ರೋಮಾಂಚಿತಗೊಂಡಿದ್ದೇನೆ,” ಎಂಬುದಾಗಿ ಅವರು ಹೇಳಿದ್ದಾರೆ.

ಏತನ್ಮಧ್ಯೆ, ಮಾಜಿ ಭಾರತ ಮಹಿಳಾ ಮುಖ್ಯ ಕೋಚ್ ರಮೇಶ್ ಪೊವಾರ್ ಅವರಿಗೆ ಹೊಸ ಹುದ್ದೆಯನ್ನು ನೀಡಲಾಗಿದ್ದು, ಮತ್ತು ಬಿಸಿಸಿಐನ “ಪುನರ್‌ರಚನಾ ಯೋಜನೆಯ’ ಭಾಗವಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರ ಜತೆ ಕೆಲಸ ಮಾಡಲಿದ್ದಾರೆ.

ವಿವಿಎಸ್‌ ಲಕ್ಷ್ಮಣ್ ಅವರು ಎನ್‌ಸಿಎ ಮುಖ್ಯಸ್ಥರ ಹುದ್ದೆಯ ಜತೆಗೆ ಟೀಮ್‌ ಇಂಡಿಯಾದ ಹಂಗಾಮಿ ಕೋಚ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್ ಅವರು ಬಿಡುವು ಪಡೆದುಕೊಂಡರೆ ಲಕ್ಷ್ಮಣ್‌ ಆ ಹುದ್ದೆಯನ್ನು ವಹಿಸಿಕೊಳ್ಳುತ್ತಿದ್ದಾರೆ.

ರಮೇಶ್‌ ಪವಾರ್ ಅವರ ಸೇರ್ಪಡೆ ಕುರಿತು ಮಾತನಾಡಿದ ವಿವಿಎಸ್‌ “ಪವಾರ್‌ ಅವರು ಸ್ಪಿನ್ನ್ ಬೌಲಿಂಗ್‌ ಕೋಚ್ ಆಗಿ ಎನ್‌ಸಿಗೆ ಬರುವುದರಿಂದ ಇಲ್ಲಿನವರಿಗೆ ಹೆಚ್ಚಿನ ಅನುಕೂಲಗಳು ಸಿಗಲಿವೆ. ದೇಶಿಯ ಕ್ರಿಕೆಟ್‌, ವಯೋಮಿತಿ ತಂಡಗಳು ಹಾಗೂ ಅಂತಾರಾಷ್ಟ್ರೀಯ ತಂಡಗಳ ಕೋಚಿಂಗ್‌ ಹುದ್ದೆಯನ್ನು ವಹಿಸಿಕೊಂಡು ಅನುಭವ ಹೊಂದಿರುವ ಅವರ ಆಗಮನದಿಂದ ಎನ್‌ಎಸಿಯ ಕಾರ್ಯಯೋಜನೆಗಳು ಉತ್ತಮವಾಗಲಿವೆ,” ಎಂಬುದಾಗಿ ಹೇಳಿದ್ದಾರೆ.

ಇದನ್ನೂ ಓದಿ | Women’s FTP | 3 ವರ್ಷದಲ್ಲಿ ಎಷ್ಟು ಪಂದ್ಯ ಆಡಲಿದೆ ಭಾರತ ಮಹಿಳೆಯರ ಕ್ರಿಕೆಟ್‌ ತಂಡ, ಇಲ್ಲಿದೆ ಮಾಹಿತಿ

Exit mobile version