ಮುಂಬಯಿ : ಆಟದ ನಡುವೆಯೇ ಆಟಗಾರರನ್ನು ಬದಲಿಸುವ ಇಂಪಾಕ್ಟ್ ಪ್ಲೇಯರ್ (Impact Player) ನಿಯಮವನ್ನು ಬಿಸಿಸಿಐ ಮುಂದಿನ ಆವೃತ್ತಿಯ ಐಪಿಎಲ್‌ಗೆ ಜಾರಿಗೆ ತರಲಿದೆ. ಡಿಸೆಂಬರ್ ೧ರಂದು ನಡೆದ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಆದರೆ, ಈ ನಿಯಮದ ಕುರಿತು ಹೆಚ್ಚಿನ ಮಾಹಿತಿಯನ್ನು ಬಿಸಿಸಿಐ ಇನ್ನೂ ಪ್ರಕಟಿಸಿಲ್ಲ. ಆದರೆ, ಇಂಪಾಕ್ಟ್ ಪ್ಲೇಯರ್ ನಿಯಮ ವಿದೇಶಿ ಆಟಗಾರರಿಗೆ ಅನ್ವಯವಾಗುವುದಿಲ್ಲ ಎಂಬುದಾಗಿ ವರದಿಯಾಗಿದೆ.
ತಂಡದ ಅನುಕೂಲಕ್ಕೆ ತಕ್ಕಂತೆ ನಾಲ್ಕು ಆಟಗಾರರನ್ನು ಬದಲಿಸುವ ಅವಕಾಶವನ್ನು ಇಂಪಾಕ್ಟ್ ಪ್ಲೇಯರ್ ನಿಯಮ ತಂಡಗಳಿಗೆ ನೀಡುತ್ತದೆ. ಆಟಗಾರರೊಬ್ಬರು ಗಾಯಗೊಂಡಾಗಲೂ ಈ ನಿಯಮ ಅನ್ವಯವಾಗುತ್ತದೆ. ಆದರೆ, ವಿದೇಶಿ ಆಟಗಾರರಿಗೆ ಈ ನಿಯಮ ಅನ್ವಯ ಮಾಡುವುದರಿಂದ ದುರ್ಬಳಕೆ ಸಾಧ್ಯತೆ ಇದೆ ಎಂಬ ಕಾರಣಕ್ಕೆ ನಿಯಮದಲ್ಲಿ ಬದಲಾವಣೆ ಮಾಡಲು ಮುಂದಾಗಿದೆ ಎನ್ನಲಾಗಿದೆ.
ಬ್ಯಾಟಿಂಗ್ ಇನಿಂಗ್ಸ್ ಮುಗಿದ ಬಳಿಕ ಬೌಲಿಂಗ್ ಆರಂಭಿಸುವ ಮೊದಲು ತಂಡವೊಂದಕ್ಕೆ ಆಟಗಾರರನ್ನು ಬದಲಿಸುವ ಯೋಜನೆಯಿದ್ದರೆ ಅವಕಾಶವಿದೆ. ಅದರೆ, ವಿದೇಶಿ ಆಟಗಾರರಿಗೆ ಈ ಅವಕಾಶ ಕೊಟ್ಟರೆ ಐದು ವಿದೇಶಿ ಆಟಗಾರರನ್ನು ಫೀಲ್ಡಿಂಗ್‌ಗೆ ಇಳಿಸುವ ಸಾಧ್ಯತೆಗಳಿವೆ ಎಂಬುದು ಬಿಸಿಸಿಐ ಲೆಕ್ಕಾಚಾರವಾಗಿದೆ. ಹೀಗಾಗಿ ಭಾರತೀಯ ಆಟಗಾರರಿಗೆ ಮಾತ್ರ ಈ ಅನುಕೂಲ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇಂಪಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಈಗಾಗಲೇ ಆಕ್ಷೇಪಗಳೂ ವ್ಯಕ್ತಗೊಂಡಿವೆ. ತಂಡವೊಂದು ಬ್ಯಾಟಿಂಗ್ ವೇಳೆ ಬಲಿಷ್ಠ ಬ್ಯಾಟರ್ ಒಬ್ಬರನ್ನು ತಂಡಕ್ಕೆ ಹಾಕಿಕೊಂಡು, ಬೌಲಿಂಗ್ ವೇಳೆ ಬೌಲರ್ ಒಬ್ಬರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದರಿಂದ ಆಲ್‌ರೌಂಡರ್ ಎಂಬ ಕಲ್ಪನೆಗೆ ಮೌಲ್ಯ ಇರುವುದಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ | Impact Player | ದೇಶಿ ಕ್ರಿಕೆಟ್ ಹಾಗೂ ಐಪಿಎಲ್‌ಗೆ ಹೊಸ ನಿಯಮ ಜಾರಿಗೆ ತಂದ ಬಿಸಿಸಿಐ, ಏನಿದು?