Site icon Vistara News

NZ vs SL: ವರುಣ ದೇವನ ಕೈಯಲ್ಲಿದೆ ನ್ಯೂಜಿಲ್ಯಾಂಡ್‌ನ ಸೆಮಿಫೈನಲ್‌ ಭವಿಷ್ಯ!

New Zealand team

ಬೆಂಗಳೂರು: ಸೆಮಿಫೈನಲ್‌ ಪ್ರವೇಶದ ಮಹತ್ವದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌(NZ vs SL) ತಂಡ ಗುರುವಾರ ನಡೆಯುವ ವಿಶ್ವಕಪ್‌(ICC Cricket World Cup 2023) ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಕಣಕ್ಕಿಳಿಯಲಿದೆ. ಸೆಮಿ ಟಿಕೆಟ್‌ ಬೇಕೆಂದರೆ ಕೇನ್‌ ವಿಲಿಯಮ್ಸನ್‌ ಪಡೆಗೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಆದರೆ ಪಂದ್ಯಕ್ಕೆ ಮಳೆಯ ಭೀತಿಯೂ ಇದೆ.

ಮಳೆಯ ಪಾತ್ರವೇ ಪ್ರಧಾನ!

ಬೆಂಗಳೂರಿನ ಹಲವೆಡೆ ಕಳೆದ ಮೂರು ನಾಲ್ಕು ದಿನಗಳಿಂದ ಸತತವಾಗಿ ಮಳೆಯಾಗುತ್ತಿದೆ. ಕಳೆದ ಶನಿವಾರ ಇಲ್ಲೇ ನಡೆದಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯವೂ ಮಳೆಯಿಂದಾಗಿ ರದ್ದುಗೊಂಡಿತ್ತು. ಇದರಿಂದ ಕಿವೀಸ್‌ಗೆ ಸೋಲು ಎದುರಾಗಿತ್ತು. ಇದೀಗ ಲಂಕಾ ವಿರುದ್ಧದ ಪಂದ್ಯವೂ ಮಳೆಯಿಂದ ರದ್ದುಗೊಂಡರೆ ಕಿವೀಸ್‌ ಸೆಮಿ ರೇಸ್‌ನಿಂದ ಅಧಿಕೃತವಾಗಿ ಹೊರಬೀಳುವ ಸಾಧ್ಯತೆ ಇದೆ. ಹೀಗಾಗಿ ನ್ಯೂಜಿಲ್ಯಾಂಡ್‌ನ ಸೆಮಿಫೈನಲ್‌ ಭವಿಷ್ಯ ವರುಣ ದೇವನ ಕೈಯಲ್ಲಿದೆ. ಪಂದ್ಯಕ್ಕೆ ಅನುವು ಮಾಡಿಕೊಡಲಿದ್ದಾನಾ ಎಂದು ಕಾದು ನೋಡಬೇಕಿದೆ. ಲಂಕಾಗೆ ಪಂದ್ಯ ರದ್ದುಗೊಂಡರೂ ಚಿಂತೆಯಿಲ್ಲ. ಏಕೆಂದರೆ ಅದು ಈಗಾಗಲೇ ಟೂನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ.

ರಚಿನ್‌ ಪ್ರಚಂಡ ಫಾರ್ಮ್‌

ಚೊಚ್ಚಲ ವಿಶ್ವಕಪ್‌ ಆಡುತ್ತಿರುವ ಕರ್ನಾಟಕ ಮೂಲಕ ರಚೀನ್‌ ರವೀಂದ್ರ ಅವರು ಮೂರು ಶತಕ ಬಾರಿಸಿ ಮಿಂಚಿದ್ದಾರೆ. ಪಾಕ್‌ ವಿರುದ್ಧ ಇದೇ ಮೈದಾನದಲ್ಲಿ ಪ್ರಚಂಡ ಬ್ಯಾಟಿಂಗ್‌ ನಡೆಸಿದ್ದ ಅವರ ಮೇಲೆ ಈ ಪಂದ್ಯದಲ್ಲಿಯೂ ತಂಡ ಬೆಟ್ಟದಷ್ಟು ನಿರೀಕ್ಷೆ ಇರಿಸಿದೆ. ಗಾಯದಿಂದ ಚೇತರಿಕೆ ಕಂಡು ಮತ್ತೆ ತಂಡ ಸೇರಿದ ನಾಯಕ ಕೇನ್‌ ವಿಲಿಯಮ್ಸನ್‌ ಕೂಡ ಪಾಕ್‌ ಎದುರು ಉತ್ತಮ ಆಟವಾಡಿದ್ದರು. ಕಿವೀಸ್‌ ಪಾಳಯದಲ್ಲಿ ಆಡಗಾರರ ಸಮಸ್ಯೆ ಕಾಣುತ್ತಿಲ್ಲ. ಕೈಕೊಡುತ್ತಿರುವುದು ಅದೃಷ್ಟ. ಇದೊಂದು ಇವರ ಪಾಲಿಗೆ ಇರುತ್ತಿದ್ದರೆ ಕಿವೀಸ್‌ ಕನಿಷ್ಠ 2 ವಿಶ್ವಕಪ್‌ ಟ್ರೋಫಿ ಗೆಲ್ಲುತ್ತಿತ್ತು.

ಲಂಕಾಗೆ ಔಪಚಾರಿಕ ಪಂದ್ಯ

ಲಂಕಾ ತಂಡಕ್ಕೆ ಈ ಪಂದ್ಯ ಕೇವಲ ಔಪಚಾರಿಕ ಎಂದರೂ ತಪ್ಪಾಗಲಾರದು. ಏಕೆಂದರೆ ಟೂನಿಯಿಂದ ಹೊರಬಿದ್ದಾಗಿದೆ. ಗೆದ್ದರೂ ಸೋತರೂ ಆಗುವುದೇನಿಲ್ಲ. ಗೆದ್ದರೆ ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲಲೇರಬಹುದು ಅಷ್ಟೆ. ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸುತ್ತಿದ್ದರೆ ಲಂಕಾಗೂ ಅವಕಾಶ ಇರುತ್ತಿತ್ತು. ಆದರೆ ಲಂಕಾ ಆ ಪಂದ್ಯದಲ್ಲಿ ಸೋಲು ಕಂಡಿತ್ತು.

ಪಿಚ್ ಪರಿಸ್ಥಿತಿ ಹೇಗಿದೆ?

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಬ್ಯಾಟರ್​ಗಳಿಗೆ ಸ್ವರ್ಗವಾಗಿದೆ. ಆಟವು ಮುಂದುವರಿದಂತೆ, ಹೊನಲು ಬೆಳಕಿನ ಸಂದರ್ಭದಲ್ಲಿ ಬ್ಯಾಟಿಂಗ್ ಸುಲಭವಾಗುತ್ತದೆ. ಟಾಸ್ ಗೆದ್ದ ತಂಡವು ಮೊದಲು ಫೀಲ್ಡಿಂಗ್‌ ಮಾಡಲಿದೆ. ಏಕೆಂದರೆ ಈ ಪಿಚ್‌ನಲ್ಲಿ ರನ್​ ಚೇಸಿಂಗ್ ಮಾಡುವುದು ಸುಲಭವಾಗಿದೆ. ಬ್ಯಾಟಿಂಗ್‌ ಸ್ನೇಹಿ ಪಿಚ್‌ ಎನ್ನುವುದಕ್ಕೆ ಕಳೆದ ಪಂದ್ಯವೇ ಸಾಕ್ಷಿ ಕಿವೀಸ್‌ ಇಲ್ಲಿ ಪಾಕ್‌ ಎದುರು 400 ರನ್‌ ಬಾರಿಸಿತ್ತು. ಈ ಪಂದ್ಯದಲ್ಲಿಯೂ ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆ ಇದೆ. ಆದರೆ ಮಳೆ ಅನುವು ಮಾಡಿಕೊಡಬೇಕು.

ಇದನ್ನೂ ಓದಿ ‘ಇದು ನಿಮ್ಮಿಂದ ಮಾತ್ರ ಸಾಧ್ಯ’; ಮ್ಯಾಕ್ಸ್​ವೆಲ್​ಗೆ ಕಿಂಗ್​ ಕೊಹ್ಲಿಯಿಂದ ಮೆಚ್ಚುಗೆ

ಸಂಭಾವ್ಯ ತಂಡಗಳು

ನ್ಯೂಜಿಲ್ಯಾಂಡ್​: ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಕೇನ್‌ ವಿಲಿಯಮ್ಸನ್‌, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್​, ಮಿಚೆಲ್ ಸ್ಯಾಂಟ್ನರ್, ಕೈಲ್​ ಜಾಮೀಸನ್​, ಲಾಕಿ ಫರ್ಗ್ಯುಸನ್, ಟ್ರೆಂಟ್ ಬೌಲ್ಟ್.

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಏಂಜೆಲೊ ಮ್ಯಾಥ್ಯೂಸ್, ದುಶನ್ ಹೇಮಂತ, ಮಹೀಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.

Exit mobile version