ಮುಂಬಯಿ: ಆರಂಭಿಕ ಹಂತದಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಬಲಿಷ್ಠವಾಗಿ ಗೋಚರಿಸಿದ ನ್ಯೂಜಿಲ್ಯಾಂಡ್ ತಂಡ ಆ ಬಳಿಕ ಹ್ಯಾಟ್ರಿಕ್ ಸೋಲು ಕಂಡು ಸೆಮಿ ರೇಸ್ನಿಂದ ಹೊರಬೀಳುವ ಸ್ಥಿತಿಯಲ್ಲಿದೆ. ಸೆಮಿ ಫೈನಲ್ ಪ್ರವೇಶ ಪಡೆಯಬೇಕಿದ್ದರೆ ಉಳಿದಿರುವ 2 ಪಂದ್ಯಗಳಲ್ಲಿ ಎರಡೂ ಪಂದ್ಯಗಳನ್ನು ಗೆಲ್ಲಬೇಕಾದ ಸವಾಲು ಎದುರಾಗಿದೆ. ಹೀಗಿರುವಾಗಲೇ ತಂಡದ ಸ್ಟಾರ್ ವಿಕೆಟ್ ಟೇಕರ್ ಬೌಲರ್ ಮ್ಯಾಟ್ ಹೆನ್ರಿ(Matt Henry) ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದು ತಂಡಕ್ಕೆ ಭಾರಿ ಹಿನ್ನಡೆ ಉಂಟುಮಾಡಿದೆ.
ನ್ಯೂಜಿಲ್ಯಾಂಡ್ ತಂಡ ನವೆಂಬರ್ 4ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಪಂದ್ಯಕ್ಕೂ ಮುನ್ನ ಮ್ಯಾಟ್ ಹೆನ್ರಿ ಅವರು ಸ್ನಾಯು ಸೆಳೆತಕ್ಕೆ ಒಳಗಾಗಿ ಹಾಲಿ ಆವೃತ್ತಿಯ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
31 ವರ್ಷದ ಮಾರಕ ವೇಗಿ ಮ್ಯಾಟ್ ಹೆನ್ರಿ ಅವರು ಪುಣೆಯಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡು ಮೈದಾನ ತೊರೆದಿದ್ದರು. ಬಳಿಕ ಅವರನ್ನು ಎಂಆರ್‌ಐ ಸ್ಕ್ಯಾನ್ಗೆ ಒಳಪಡಿಸಲಾಗಿತ್ತು. ಈ ವೇಳೆ ಅವರು ಗಂಭೀರ ಗಾಯಗೊಂಡಿರುವುದು ತಿಳಿದುಬಂದಿದೆ. ಶಸ್ತ್ರಚಿಕಿತ್ಸೆ ಅಗತ್ಯವಿರುವ ಕಾರಣ ಅವರು ಟೂರ್ನಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ಮರಳಲಿದ್ದಾರೆ.
ಇದನ್ನೂ ಓದಿ ಕೊನೆಯ ಸ್ಥಾನಿ ಇಂಗ್ಲೆಂಡ್ಗೂ ಇದೆ ಸೆಮಿಫೈನಲ್ ಅವಕಾಶ; ಹೇಗಿದೆ ಈ ಲೆಕ್ಕಾಚಾರ?
ತಂಡ ಸೇರಿದ ಕೈಲ್ ಜಾಮಿಸನ್
ಮ್ಯಾಟ್ ಹೆನ್ರಿ ಅವರು ಟೂರ್ನಿಯಿಂದ ಹೊರಬಿದ್ದ ಕಾರಣ ಅವರ ಬದಲಿಗೆ ಗಾಯದಿಂದ ಚೇತರಿಕೆ ಕಂಡಿರುವ ಘಾತಕ ವೇಗಿ ಕೈಲ್ ಜಾಮಿಸನ್ ತಂಡ ಸೇರಿದ್ದಾರೆ. ಜಾಮಿಸನ್ ಅವರು ಭಾರತೀಯ ಪಿಚ್‌ನಲ್ಲಿ ಐಪಿಎಲ್ ಆಡಿದ ಅಪಾರ ಅನುಭವ ಹೊಂದಿರುವ ಕಾರಣ ಅವರು ಅಪಾಯಕಾರಿಯಾಗುವ ಸಾಧ್ಯತೆ ಇದೆ. ವಿಶ್ವಕಪ್ ತಂಡ ಪ್ರಕಟಗೊಳ್ಳುವ ವೇಳೆ ಇವರು ಗಾಯಗೊಂಡ ಕಾರಣ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇಲ್ಲವಾದರೆ ಇವರು ಕೂಡ ತಂಡದಲ್ಲಿ ಇರುತ್ತಿದ್ದರು. ಇದೀಗ ಮತ್ತೆ ಅವರಿಗೆ ವಿಶ್ವಕಪ್ ಆಡುವ ಅವಕಾಶ ಸಿಕ್ಕಿದೆ. ಬೌಲಿಂಗ್ ಜತೆಗೆ ಬ್ಯಾಟಿಂಗ್ ಕೂಡ ನಡೆಸಬಲ್ಲ ಅವರು ತಂಡಕ್ಕೆ ನೆರವಾಗಬಲ್ಲರು.
2 ಪಂದ್ಯ ಬಾಕಿ
ನ್ಯೂಜಿಲ್ಯಾಂಡ್ ತಂಡ 7 ಪಂದ್ಯಗಳನ್ನು ಆಡಿ 4ರಲ್ಲಿ ಗೆಲುವು ಸಾಧಿಸಿ 8 ಅಂಕದೊಂದಿಗೆ ಸದ್ಯ 5ನೇ ಸ್ಥಾನದಲ್ಲಿದೆ. ಇನ್ನು 2 ಪಂದ್ಯಗಳು ಬಾಕಿ ಉಳಿದಿವೆ. ಎರಡೂ ಪಂದ್ಯಗಳನ್ನು ಗೆದ್ದರೆ ಮಾತ್ರ ಸೆಮಿ ಅವಕಾಶವಿದೆ. ಒಂದೊಮ್ಮೆ ಒಂದು ಪಂದ್ಯ ಮಾತ್ರ ಗೆದ್ದರೆ, ಆಗ ಇತರ ತಂಡಗಳ ಫಲಿತಾಂಶದ ಆಧಾರದಲ್ಲಿ ಸೆಮಿ ಲೆಕ್ಕಾಚಾರ ನಡೆಯಲಿದೆ. ನ್ಯೂಜಿಲ್ಯಾಂಡ್ ಮುಂದಿನ ಪಂದ್ಯದಲ್ಲಿ ಎದುರಿಸುವ ತಂಡಗಳು ಯಾವುದೆಂದರೆ, ಪಾಕಿಸ್ತಾನ ಮತ್ತು ಶ್ರೀಲಂಕಾ.
ಇದನ್ನೂ ಓದಿ ‘ಕೊಹ್ಲಿ ಕೊ ಬೌಲಿಂಗ್ ದೋ’ ವಾಂಖೆಡೆಯಲ್ಲಿ ಮೊಳಗಿದ ಅಭಿಮಾನಿಗಳ ಕೂಗು
ಅಂಕಪಟ್ಟಿ ಹೀಗಿದೆ
ತಂಡ | ಪಂದ್ಯ | ಗೆಲುವು | ಸೋಲು | ಅಂಕ | ನೆಟ್ ರನ್ರೇಟ್ |
ಭಾರತ | 7 | 7 | 0 | 14 | +2.102 |
ದಕ್ಷಿಣ ಆಫ್ರಿಕಾ | 7 | 6 | 1 | 12 | +2.290 |
ಆಸ್ಟ್ರೇಲಿಯಾ | 6 | 4 | 2 | 8 | +0.970 |
ನ್ಯೂಜಿಲ್ಯಾಂಡ್ | 7 | 4 | 3 | 8 | +0.484 |
ಪಾಕಿಸ್ತಾನ | 7 | 3 | 4 | 6 | -0.024 |
ಅಫಘಾನಿಸ್ತಾನ | 6 | 3 | 3 | 6 | -0.718 |
ಶ್ರೀಲಂಕಾ | 7 | 2 | 5 | 4 | -1.162 |
ನೆದರ್ಲ್ಯಾಂಡ್ಸ್ | 6 | 2 | 4 | 4 | -1.277 |
ಬಾಂಗ್ಲಾದೇಶ | 7 | 1 | 6 | 2 | -1.446 |
ಇಂಗ್ಲೆಂಡ್ | 6 | 1 | 5 | 2 | -1.652 |