Site icon Vistara News

ನ್ಯೂಜಿಲೆಂಡ್‌ ODI ತಂಡದ ರೋಚಕ ಗೆಲುವಿನಲ್ಲಿ ಸೃಷ್ಟಿಯಾಯಿತು ನೂತನ ದಾಖಲೆ

ODI

ಡಬ್ಲಿನ್‌: ಐರ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ನಡುವೆ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಹೊಸ ವಿಶ್ವ ದಾಖಲೆಯೊಂದು ಸೃಷ್ಟಿಯಾಗಿದೆ.

೩೦೧ ರನ್‌ಗಳ ಬೃಹತ್‌ ಗುರಿಯನ್ನು ಚೇಸ್‌ ಮಾಡಿದ ನ್ಯೂಜಿಲೆಂಡ್‌ ತಂಡ ಕೊನೇ ಓವರ್‌ನಲ್ಲಿ ಗೆಲುವಿಗೆ ಬೇಕಾದ ೨೦ ರನ್‌ ಬಾರಿಸಿ ದಾಖಲೆ ಸೃಷ್ಟಿಸಿತು. ನ್ಯೂಜಿಲೆಂಡ್‌ ತಂಡದ ಬ್ಯಾಟರ್‌ ಮೈಕೆಲ್‌ ಬ್ರಾಸ್‌ವೆಲ್‌ ಆ ಓವರ್‌ನ ಮೊದಲ ಐದು ಎಸೆತಗಳಲ್ಲಿ ೨೫ ರನ್‌ ಬಾರಿಸುವುದರೊಂದಿಗೆ ಏಕದಿನ ಪಂದ್ಯದ ಚೇಸಿಂಗ್‌ ವೇಳೆ ೫೦ನೇ ಓವರ್‌ನಲ್ಲಿ ಗರಿಷ್ಠ ರನ್‌ ಬಾರಿಸಿದ ದಾಖಲೆ ಸೃಷ್ಟಿಸಿದರು. ಈ ಹಿಂದೆ ಇಂಗ್ಲೆಂಡ್‌ ಹಾಗೂ ಅಫಘಾನಿಸ್ತಾನ ತಂಡ ಚೇಸಿಂಗ್‌ ವೇಳೆ ೫೦ನೇ ಓವರ್‌ನಲ್ಲಿ ೨೦ ರನ್‌ ಬಾರಿಸಿತ್ತು.

ರೋಚಕ ಗೆಲುವು

ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಆತಿಥೇಯ ಐರ್ಲೆಂಡ್‌ ತಂಡ ನಿಗದಿತ ೫೦ ಓವರ್‌ಗಳಲ್ಲಿ ೯ ವಿಕೆಟ್‌ ನಷ್ಟಕ್ಕೆ ೩೦೦ ರನ್‌ ಬಾರಿಸಿತು. ಹ್ಯಾರಿ ಟೆಕ್ಟರ್‌ (೧೧೩) ಶತಕ ಬಾರಿಸಿದರೆ, ಕರ್ಟಿಸ್‌ ಕ್ಯಾಂಫೆರ್‌ ೪೩ ರನ್ ಗಳಿಸಿದರು. ಗುರಿ ಬೆನ್ನಟ್ಟಲು ಆರಂಭಿಸಿದ ನ್ಯೂಜಿಲೆಂಡ್‌ ತಂಡವೂ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಏಳನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಬಂದ ಮೈಕೆಲ್‌ ಬ್ರಾಸ್‌ವೆಲ್‌ ೮೨ ಎಸೆತಗಳಲ್ಲಿ ೧೨೭ ಬಾರಿಸಿ ಗೆಲುವು ತಂದುಕೊಟ್ಟರು. ಅವರ ಇನಿಂಗ್ಸ್‌ನಲ್ಲಿ ೧೦ ಫೋರ್‌ ಹಾಗೂ 7 ಸಿಕ್ಸರ್‌ಗಳು ಸೇರಿಕೊಂಡಿವೆ. ಅವರ ಬ್ಯಾಟಿಂಗ್‌ ಬಲದಿಂದ ನ್ಯೂಜಿಲೆಂಡ್‌ ತಂಡ ೧ ವಿಕೆಟ್‌ ರೋಚಕ ಗೆಲುವು ತಮ್ಮದಾಗಿಸಿಕೊಂಡಿತು.

ಸ್ಕೋರ್‌ ವಿವರ

ಐರ್ಲೆಂಡ್‌: ೫೦ ಓವರ್‌ಗಳಲ್ಲಿ ೯ ವಿಕೆಟ್‌ಗೆ ೩೦೦ (ಹ್ಯಾರಿ ಟೆಕ್ಟರ್‌ ೧೧೩, ಕರ್ಟಿಸ್‌ ಕ್ಯಾಂಫೆರ್‌ ೪೩, ಲಾರ್ಕನ್‌ ಟಕ್ಕರ್‌ ೨೬; ಲಾಕಿ ಫರ್ಗ್ಯೂಸನ್‌ ೪೪ಕ್ಕೆ೨, ಬ್ಲೇರ್‌ ಟಿಕ್ನರ್‌ ೪೪ಕ್ಕೆ೨, ಇಶ್‌ ಸೋಧಿ ೬೨ಕ್ಕೆ೨).

ನ್ಯೂಜಿಲೆಂಡ್‌: ೪೯.೫ ಓವರ್‌ಗಳಲ್ಲಿ ೯ ವಿಕೆಟ್‌ಗೆ ೩೦೫ (ಮೈಕೆಲ್‌ ಬ್ರಾಸ್‌ವೆಲ್‌ ಔಟಾಗದೇ ೧೨೭, ಗ್ಲೆನ್‌ ಫಿಲಿಫ್ಸ್‌ ೩೮, ಇಶ್‌ ಸೋಧಿ ೨೫; ಕರ್ಟಿಸ್‌ ಕ್ಯಾಂಪೆರ್‌ ೪೯ಕ್ಕೆ೩, ಮಾರ್ಕ್‌ ಅಡೈರ್‌ ೪೩ಕ್ಕೆ೨).

ಇದನ್ನೂ ಓದಿ: INDvsENG t20 : ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಐದನೇ ಭಾರತೀಯ ಆಟಗಾರ ಸೂರ್ಯಕುಮಾರ್‌

Exit mobile version