ಸಾವೊ ಪಾಲೊ (ಬ್ರೆಜಿಲ್): ಬ್ರೆಜಿಲ್ ತಂಡದ ಸ್ಟಾರ್ ಫುಟ್ಬಾಲ್ ಆಟಗಾರ ನೇಯ್ಮರ್(Neymar) ಅವರು ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಗೋಲು ಬಾರಿಸುವ ಮೂಲಕ ಫುಟ್ಬಾಲ್ ದಿಗ್ಗಜ ಪೀಲೆ(Pele) ಅವರ ಸಾರ್ವಕಾಲಿಕ ದಾಖಲೆಯೊಂದನ್ನು ಮುರಿದಿದ್ದಾರೆ.
ಶುಕ್ರವಾರ ಅಮೆಜಾನ್ ನಗರದ ಬೆಲ್ಮ್‌ನಲ್ಲಿ ನಡೆದ ವಿಶ್ವಕಪ್ ಅರ್ಹತಾ(World Cup qualifiers) ಪಂದ್ಯದಲ್ಲಿ ಬ್ರೆಜಿಲ್ ತಂಡ ಬೊಲಿವಿಯಾ ವಿರುದ್ಧ 5-1 ಗೋಲ್ಗಳ ಅಂತರದಲ್ಲಿ ಗೆದ್ದು ಬೀಗಿತು. ಈ ಪಂದ್ಯದ 61ನೇ ನಿಮಿಷದಲ್ಲಿ ಗೋಲ್ ಬಾರಿಸಿದ ನೇಯ್ಮರ್ 78 ಗೋಲ್ಗಳನ್ನು ಪೂರ್ತಿಗೊಳಿಸಿದರು. ಈ ಮೂಲಕ ಬ್ರೆಜಿಲ್ ಪರ ಅತ್ಯಧಿಕ ಗೋಲು ಬಾರಿಸಿದ್ದ ಪೀಲೆ ಅವರ ದಾಖಲೆಯನ್ನು ಮುರಿದರು. ಪೀಲೆ 77 ಗೋಲ್ ಬಾರಿಸಿದ್ದು ಇದುವರೆಗಿನ ಸಾಧನೆಯಾಗಿತ್ತು. ಪೀಲೆ ಅವರು 1957 ಮತ್ತು 1971 ರ ನಡುವೆ ಬ್ರೆಜಿಲ್ ತಂಡದ ಪರ 92 ಪಂದ್ಯಗಳನ್ನು ಆಡಿ, 77 ಗೋಲುಗಳನ್ನು ಗಳಿಸಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಪೀಲೆ ನಿಧನ ಹೊಂದಿದ್ದರು.
17ನೇ ನಿಮಿಷದಲ್ಲಿ ನೇಯ್ಮರ್‌ಗೆ ಪೆನಾಲ್ಟಿ ಮೂಲಕ ಗೋಲು ಬಾರಿಸುವ ಅವಕಾಶ ಲಭಿಸಿತು. ಆದರೆ ಇದನ್ನು ಬೊಲಿವಿಯನ್ ಗೋಲ್ ಕೀಪರ್ ಬಿಲ್ಲಿ ವಿಸ್ಕಾರ ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾದರು. ಆದರೂ ಛಲ ಬಿಡದ ನೇಯ್ಮರ್ ತಮ್ಮ ದ್ವಿತೀಯ ಪ್ರಯತ್ನದಲ್ಲಿ ಚೆಂಡನ್ನು ಗೋಲ್ ಪೆಟ್ಟಿಗೆಗೆ ಸೇರಿಸಿ ದಾಖಲೆ ಬರೆದರು. ಒಟ್ಟು ಎರಡು ಗೋಲ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಸೇಂಟ್-ಜರ್ಮೈನ್ ತೊರೆದ ನೇಯ್ಮರ್
ಕೆಲ ದಿನಗಳ ಹಿಂದಷ್ಟೇ ನೇಯ್ಮರ್ ಫ್ರಾನ್ಸ್ನ ಪ್ಯಾರಿಸ್ ಸೇಂಟ್-ಜರ್ಮೈನ್ ಕ್ಲಬ್(Paris Saint-Germain Football Club) ತೊರೆದು ಸೌದಿ ಅರೇಬಿಯಾದ ಅಲ್-ಹಿಲಾಲ್ ಫುಟ್ಬಾಲ್ ಕ್ಲಬ್‌ಗೆ(Al Hilal Saudi Club) ಸೇರ್ಪಡೆಗೊಂಡಿದ್ದರು. 100 ಮಿಲಿಯನ್ ಯುರೋ (ಸುಮಾರು 1455ಕೋಟಿ ರೂ.) ಮೊತ್ತಕ್ಕೆ ಎರಡು ವರ್ಷಗಳ ಕಾಲ ನೇಯ್ಮರ್ ಈ ಕ್ಲಬ್ ಆಡಲು ಒಪ್ಪಂದ ಮಾಡಿಕೊಂಡಿದ್ದರು. 2017 ರಲ್ಲಿ ಸ್ಪೇನ್ನ ಖ್ಯಾತ ಫುಟ್ಬಾಲ್ ಕ್ಲಬ್ ಬಾರ್ಸಿಲೋನಾ ತಂಡದಲ್ಲಿದ್ದ ನೇಯ್ಮರ್ ಅವರನ್ನು ಟ್ರಾನ್ಸ್ಫರ್ ಆಯ್ಕೆಯ ಮೂಲಕ ಪಿಎಸ್ಜಿ ತಂಡ ಖರೀದಿಸಿತ್ತು. 6 ವರ್ಷಗಳ ಕಾಲ ಪಿಎಸ್ಜಿ ತಂಡದ ಪರ ಆಡಿದ್ದ ನೇಯ್ಮರ್, 173 ಪಂದ್ಯಗಳಲ್ಲಿ 118 ಗೋಲುಗಳನ್ನು ಬಾರಿಸಿದ್ದಾರೆ. ಇದಕ್ಕೂ ಮುನ್ನ ಬಾರ್ಸಿಲೋನಾ(FC Barcelona) ಪರ 186 ಪಂದ್ಯಗಳಲ್ಲಿ 105 ಗೋಲುಗಳಿಸಿದ್ದರು. ಇದೀಗ ಸೌದಿ ಅರೇಬಿಯಾ ಕ್ಲಬ್ ಪರ ಮೋಡಿ ಮಾಡುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ Neymar: ಸೌದಿ ಅರೇಬಿಯಾದ ಪ್ರಸಿದ್ಧ ಕ್ಲಬ್ ಪರ ಆಡಲಿದ್ದಾರೆ ನೇಮರ್
ಭಾರತಕ್ಕೂ ಬರಲಿದ್ದಾರೆ ನೇಯ್ಮರ್
ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ನ ಮುಂಬೈ ಸಿಟಿ(Mumbai City FC) ಫುಟ್ಬಾಲ್ ಕ್ಲಬ್ ಎಎಪ್ಸಿ ಚಾಂಪಿಯನ್ಸ್ ಲೀಗ್ನ(AFC Champions League) ಇತ್ತೀಚಿನ ಡ್ರಾದಲ್ಲಿ ಅಲ್-ಹಿಲಾಲ್(Al Hilal) ತಂಡವಿರುವ ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಹೀಗಾಗಿ ನೇಯ್ಮರ್ ಅವರು ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಅಧಿಕೃತ ಪಂದ್ಯ ಆಡಲಿದ್ದಾರೆ ಎಂದು ವರದಿಯಾಗಿದೆ.
ಮುಂಬೈ ಸಿಟಿ FC ತನ್ನ ತವರಿನ ಪಂದ್ಯಗಳನ್ನು ಪುಣೆಯ ಬಾಲೆವಾಡಿ ಕ್ರೀಡಾಂಗಣದಲ್ಲಿ ಆಡಲಿದೆ. ಒಂದೊಮ್ಮೆ ನೇಮರ್ ಕೂಡ ಭಾರತಕ್ಕೆ ಬಂದರೆ ಇದೇ ಮೈದಾನದಲ್ಲಿ ಪಂದ್ಯವನ್ನಾಡಲಿದ್ದಾರೆ. ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಕ್ಲಬ್ ಆಗಿರುವ ಅಲ್-ಹಿಲಾಲ್, ನೇಯ್ಮರ್, ರುಬೆನ್ ನೆವೆಸ್, ಕಾಲಿಡೌ ಕೌಲಿಬಾಲಿ, ಸೆರ್ಗೆಜ್ ಮಿಲಿಂಕೋವಿಕ್-ಸಾವಿಕ್ ಮುಂತಾದ ಸ್ಟಾರ್ ಆಟಗಾರರನ್ನು ಒಳಗೊಂಡಿದೆ. ‘ಡಿ’ ಗುಂಪಿನಲ್ಲಿರುವ ತಂಡಗಳೆಂದರೆ ಇರಾನ್ನ ಎಫ್ಸಿ ನಸ್ಸಾಜಿ ಮಝಾಂದರನ್ ಮತ್ತು ಉಜ್ಬೇಕಿಸ್ತಾನದ ಪಿಎಫ್ಸಿ ನವಬಹೋರ್ ನಮಂಗನ್. ಭಾರತ ಮುಂಬೈ ಎಫ್ಸಿ ಮತ್ತು ಅಲ್-ಹಿಲಾಲ್ ಕ್ಲಬ್. ಕ್ರಿಸ್ಟಿಯಾನೊ ರೊನಾಲ್ಡೊ ಸಾರಥ್ಯದ ಅಲ್ ಸಾಸರ್ ತಂಡ ‘ಇ’ ಗುಂಪಿನಲ್ಲಿ ಕಾಣಿಸಿಕೊಂಡಿದೆ.