ಪ್ಯಾರಿಸ್: ಕೆಲ ದಿನಗಳ ಹಿಂದಷ್ಟೇ ಫ್ರಾನ್ಸ್ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ಕಿಲಿಯನ್ ಎಂಬಾಪೆ(Kylian Mbappe) ಅವರು ಸೌದಿ ಅರೇಬಿಯಾದ ಅಲ್ ಹಿಲಾಲ್ ಕ್ಲಬ್(Saudi Arabian giants Al-Hilal)ನ, ದಾಖಲೆಯ 2,716 ಕೋ.ರೂ. ಮೊತ್ತವನ್ನು ತಿರಸ್ಕರಿಸಿದ ಬೆನ್ನಲೇ ಇದೀಗ ಬ್ರೆಜಿಲ್ನ ಖ್ಯಾತ ಆಟಗಾರ ನೇಮರ್(Neymar) ಈ ಕ್ಲಬ್ ಸೇರಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸ್ತುತ ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್‌ಜಿ) ಪರ ಆಡುತ್ತಿರುವ ನೇಮರ್ ಅವರನ್ನು ಮುಂದಿನ ಎರಡು ವರ್ಷಗಳ ಕಾಲ ಅಲ್ ಹಿಲಾಲ್ ಕ್ಲಬ್ ಪರ ಆಡಲು ಪಿಎಸ್‌ಜಿ(PSG) ಒಪ್ಪಂದವೊಂದನ್ನು ಮಾಡಿದೆ ಎಂದು ಸೌದಿ ಅರೇಬಿಯಾದ ಮಾಧ್ಯಮವೊಂದು ವರದಿ ಮಾಡಿದೆ.
1,455 ಕೋಟಿ ರೂ. ಸಂಭಾವನೆ
31 ವರ್ಷದ ನೇಮರ್ ಅವರು ಅಲ್ ಹಿಲಾಲ್ ಕ್ಲಬ್ ಪರ ಎರಡು ವರ್ಷಗಳ ಅವಧಿಗೆ ಆಡಲು 1,455 ಕೋಟಿ ರೂ ಸಂಭಾವನೆ ಪಡೆಯಲಿದ್ಧಾರೆ ಎಂದು ಫ್ರಾನ್ಸ್‌ನ ‘ಲೆಕ್ವಿಪ್’ ದಿನಪತ್ರಿಕೆ ವರದಿ ಮಾಡಿದೆ. ಇದಲ್ಲದೆ ಅಲ್ ಹಿಲಾಲ್ ಕ್ಲಬ್ ‘ವರ್ಗಾವಣೆ ಶುಲ್ಕ’ದ ರೂಪದಲ್ಲಿ ಪಿಎಸ್‌ಜಿಗೆ ಸುಮಾರು 815 ಕೋಟಿ ರೂ. ನೀಡಲಿದೆ ಎಂದು ವರದಿಯಲ್ಲಿ ತಿಳಿಸಿದೆ. ಆದರೆ ಈ ಒಪ್ಪಂದದ ಮತ್ತು ನೇಮರ್ ಅಲ್ ಹಿಲಾಲ್ ಕ್ಲಬ್ ಪರ ಆಡುವ ಬಗ್ಗೆ ಪಿಎಸ್‌ಜಿ ಹಾಗೂ ನೇಮರ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಪಿಎಸ್‌ಜಿ ಪರ ಇನ್ನೂ ಇದೆ ನೇಮರ್ ಒಪ್ಪಂದ
ನೇಮರ್ 2017 ರಲ್ಲಿ ಪಿಎಸ್‌ಜಿ ಕ್ಲಬ್ ಸೇರಿಕೊಂಡಿದ್ದರು. ಅವರ ಒಪ್ಪಂದದ ಅವಧಿ 2025ರ ವರೆಗೆ ಇರಲಿದೆ. ಇದೀಗ ಎರಡು ವರ್ಷ ಮುಂಚಿತವಾಗಿಯೇ ತಂಡ ತೊರೆಯಲು ಅವರಿಗೆ ಅಧಿಕಾರ ಇರುವುದಿಲ್ಲ. ಆದರೆ ಪಿಎಸ್‌ಜಿಯೇ ಅವರನ್ನು ಎರಡು ವರ್ಷಗಳ ಅವಧಿಗೆ ಹಿಲಾಲ್ ಕ್ಲಬ್ ಪರ ಆಡಲು ಬಿಟ್ಟುಕೊಟ್ಟು ಆ ಕ್ಲಬ್ನಿಂದ ಹಣವನ್ನು ಪಡೆಯಲಿದೆ.
ಇದನ್ನೂ ಓದಿ Neymar Fined: ಪರಿಸರ ನಿಯಮ ಉಲ್ಲಂಘನೆ; ನೇಮರ್ಗೆ ಭಾರಿ ದಂಡದ ಬಿಸಿ
ಅಲ್ ಹಿಲಾಲ್ ಕ್ಲಬ್ ಆರಂಭದಲ್ಲಿ ಅರ್ಜೆಂಟೀನಾ ತಂಡದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ(Lionel Messi) ಮತ್ತು ಫ್ರಾನ್ಸ್‌ನ ಕಿಲಿಯಾನ್ ಎಂಬಪೆ ಅವರನ್ನು ಸೆಳೆದುಕೊಳ್ಳುವ ಪ್ರಯತ್ನ ನಡೆಸಿತ್ತು. ಆದರೆ ಎಂಬಾಪೆ ಪಿಎಸ್‌ಜಿಯಲ್ಲೇ ಮುಂದುವರಿಯಲು ನಿರ್ಧರಿಸಿದ್ದರು. ಮೆಸ್ಸಿ ಅವರು ಅಮೆರಿಕ ಲೀಗ್‌ನಲ್ಲಿ ಆಡಲು ಬಯಸಿದ್ದರಿಂದ ಅಂತಿಮವಾಗಿ ಇಂಟರ್ ಮಿಯಾಮಿ ಕ್ಲಬ್ ಸೇರಿಕೊಂಡರು.
18 ಬಾರಿ ಚಾಂಪಿಯನ್
ಸೌದಿ ಅರೇಬಿಯಾದ ಅಲ್ ಹಿಲಾಲ್ ಕ್ಲಬ್ ಕೂಡ ಫುಟ್ಬಾಲ್ ಲೋದಲ್ಲಿ ಉತ್ತಮ ದಾಖಲಯನ್ನು ಹೊಂದಿದೆ. ಜತೆಗೆ ಅತ್ಯಂತ ಯಶಸ್ವಿ ಕ್ಲಬ್ಗಳಲ್ಲಿಯೂ ಒಂದಾಗಿದೆ. ಸೌದಿ ಲೀಗ್‌ನಲ್ಲಿ ಇದುವರೆಗೆ 18 ಬಾರಿ ಚಾಂಪಿಯನ್ ಆಗಿದೆ. ಇದಲ್ಲದೆ ಏಷ್ಯನ್ ಚಾಂಪಿಯನ್ಸ್ ಲೀಗ್‌ನಲ್ಲಿ ನಾಲ್ಕು ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.